ಬೆಳಗಾವಿ: ಗಡಿ ಕನ್ನಡಿಗರಲ್ಲಿ ಅನಾಥ ಪ್ರಜ್ಞೆ

7
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಎದುರು ಸಮಸ್ಯೆಗಳ ಅನಾವರಣ

ಬೆಳಗಾವಿ: ಗಡಿ ಕನ್ನಡಿಗರಲ್ಲಿ ಅನಾಥ ಪ್ರಜ್ಞೆ

Published:
Updated:
Deccan Herald

ಬೆಳಗಾವಿ: ‘ಗಡಿಯಲ್ಲಿ ಕನ್ನಡ ಅನುಷ್ಠಾನಕ್ಕೆ ನಿರ್ಲಕ್ಷ್ಯ ವಹಿಸಿರುವುದರಿಂದಾಗಿ, ಇಲ್ಲಿನ ಕನ್ನಡಿಗರು ಅನಾಥ ಪ್ರಜ್ಞೆ ಅನುಭವಿಸುವಂತಾಗಿದೆ. ಅದರಲ್ಲೂ ಕರ್ನಾಟಕ–ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡ ಭಾಷಿಕರ ಪರಿಸ್ಥಿತಿ ಚಿಂತಾಜನಕವಾಗಿದೆ’ ಎಂದು ಹೋರಾಟಗಾರರು ತಿಳಿಸಿದರು.

ಕನ್ನಡ ಅಭಿವೃದ್ಧಿ ‍ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ಸಭೆಯಲ್ಲಿ ಹಲವು ಸಮಸ್ಯೆಗಳ ಕುರಿತು ಬೆಳಕು ಚೆಲ್ಲಿದರು.

ಪ್ರಾಧಿಕಾರದ ಅಧ್ಯಕ್ಷರು ನಿಯಮಿತವಾಗಿ ಬಂದು, ಪ್ರಗತಿ ಪರಿಶೀಲನೆ ನಡೆಸದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಗಡಿ ಜಿಲ್ಲೆಯ ಬಗ್ಗೆ ತಾತ್ಸಾರ ಸಲ್ಲದು ಎಂದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಮಹಾದೇವ ತಳವಾರ, ‘ಹಲವು ಬಾರಿ ಪ್ರವಾಸ ಕಾರ್ಯಕ್ರಮ ಮುಂದೂಡಿದ್ದೀರಿ. ಕಾರಣ ಕೊಟ್ಟು, ವಿಷಾದ ವ್ಯಕ್ತಪಡಿಸಿದರೆ ಸಮಸ್ಯೆಗಳು ಬಗೆಹರಿಯುವುದಿಲ್ಲ. ಇದನ್ನು ಅರಿಯಬೇಕು’ ಎಂದರು.

ಅಲ್ಲಿದ್ದುಕೊಂಡೇ:

ಪ್ರತಿಕ್ರಿಯಿಸಿದ ಅಧ್ಯಕ್ಷರು, ‘ಬೆಳಗಾವಿಯನ್ನು ನಿರ್ಲಕ್ಷ್ಯ ಮಾಡಿಲ್ಲ. 17 ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಿದ್ದೇನೆ. ಅನಿವಾರ್ಯ ಕಾರಣಗಳಿಂದ ಸಭೆಗಳನ್ನು ಮುಂದೂಡಲಾಗಿದೆ. ಅಲ್ಲಿದ್ದುಕೊಂಡೇ ಹಲವು ಸಮಸ್ಯೆಗಳನ್ನು ಪರಿಹರಿಸಿದ್ದೇನೆ’ ಎಂದು ಸಮರ್ಥಿಸಿಕೊಂಡರು.

‘ಒಮ್ಮೆ ಮಾತ್ರ ಇಲ್ಲಿಗೆ ಬಂದಿದ್ದೀರಿ. ಇಲ್ಲಿನ ಸಮಸ್ಯೆಗಳನ್ನು ವಿಶೇಷವಾಗಿ ಪರಿಗಣಿಸಬೇಕು. ಗಡಿ ಕನ್ನಡಿಗರ ಭಾವನೆ ಅರ್ಥ ಮಾಡಿಕೊಳ್ಳಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಸರಜೂ ಕಾಟ್ಕರ್‌ ತಿಳಿಸಿದರು.

ಆಗಾಗ ಬರುತ್ತಿರಿ:

ಹಿರಿಯ ಹೋರಾಟಗಾರ ಸಿದ್ದನಗೌಡ ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಕನ್ನಡ ಕಾವಲು ಸಮಿತಿ ರಚನೆಯಾಗಲು ಬೆಳಗಾವಿಯೇ ಮೂಲ ಕಾರಣ. ಇಲ್ಲಿನ ಹೋರಾಟದ ಪರಿಣಾಮ ಅದು ಅಸ್ತಿತ್ವಕ್ಕೆ ಬಂತು. ಈಗ ಅದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಆಗಿದೆ. ಬೆಳಗಾವಿಯಲ್ಲಿ ಜಾಗೃತ ಸಮಿತಿ ಸಭೆಗಳನ್ನು ನಿಗದಿತವಾಗಿ ನಡೆಸುತ್ತಿಲ್ಲ. ಆಗಾಗ ಇಲ್ಲಿಗೆ ಬರಬೇಕು’ ಎಂದು ಒತ್ತಾಯಿಸಿದರು.

‘ಬಂದು ಸುಮ್ಮನೆ ಹೋಗಿಲ್ಲ. ಗಡಿ ಭಾಗದ ಕನ್ನಡ ಶಾಲೆಗಳ ಪರಿಶೀಲನೆ ನಡೆಸಿದ್ದೇನೆ. ಇಲ್ಲಿನ ಎಲ್ಲ ಸಮಸ್ಯೆಗಳ ಬಗ್ಗೆಯೂ ಮಾಹಿತಿ ಇದೆ. ಪರಿಹಾರಕ್ಕೂ ಯತ್ನಿಸುತ್ತಿದ್ದೇನೆ’ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

‘ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ 21 ಅಂಶಗಳ ವರದಿ ನೀಡಲಾಗಿದೆ. ಅವುಗಳ ಅನುಷ್ಠಾನಕ್ಕೆ ದುಂಬಾಲು ಬಿದ್ದಿದ್ದೇವೆ. 16,200 ಶಾಲೆಗಳು ಮುಚ್ಚದಂತೆ ತಡೆ ಹಿಡಿದಿದ್ದೇವೆ. ಶಿಕ್ಷಕರನ್ನು ಅನ್ಯ ಕಾರ್ಯದಿಂದ ಮುಕ್ತಗೊಳಿಸುವಂತೆ ಶಿಫಾರಸು ಮಾಡಲಾಗಿದೆ’ ಎಂದರು.

ಸಭೆಯ ಮಾಹಿತಿ ನೀಡಿಲ್ಲ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಸೇರಿದಂತೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದರು.

ಜಾಗೃತ ಸಮಿತಿ ಸದಸ್ಯ ಯ.ರು. ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀಶೈಲ‌ ಕರಿಶಂಕರಿ, ಪ್ರಾಧಿಕಾರದ ಕಾರ್ಯದರ್ಶಿ ಕೆ. ಮುರಳೀಧರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !