ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ತಂದಾದರೂ ನೀರಾವರಿಗೆ ಆದ್ಯತೆ: ಯಡಿಯೂರಪ್ಪ

Last Updated 2 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಅಥಣಿ: ‘ಬೆಳಗಾವಿ ಜಿಲ್ಲೆ ಜೊತೆಗೆ ರಾಜ್ಯದಾದ್ಯಂತ ಎಲ್ಲಾ ಕೆರೆಗಳಿಗೆ ನೀರು ತುಂಬುವುದು ಹಾಗೂ ನೀರಾವರಿ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಸಾಲ ತಂದಾದರೂ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿನ ವಿದ್ಯಾಪೀಠ ಶಾಲೆ ಆವರಣದಲ್ಲಿ ಸೋಮವಾರ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲೂ ಗೆಲ್ಲುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರವನ್ನು ಕೊಡುತ್ತೇವೆ. ನಮ್ಮ ಗೆಲುವೇ ಎದುರಾಳಿಗಳಿಗೆ ಉತ್ತರವಾಗುತ್ತದೆ. ಜೆಡಿಎಸ್‌, ಕಾಂಗ್ರೆಸ್‌ನವರಿಗೆ ಅಭಿವೃದ್ಧಿ ಬೇಕಿಲ್ಲ. ಅವರಿಗೆ ಚುನಾವಣೆ ನಡೆಸಬೇಕು ಎನ್ನುವುದೇ ಮುಖ್ಯವಾಗಿದೆ. ಆದರೆ, ಮತದಾರರು ಅದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವ ವಿಶ್ವಾಸವಿದೆ’ ಎಂದರು.

‘ಮಹೇಶ ಕುಮಠಳ್ಳಿ ಸೇರಿದಂತೆ 17 ಶಾಸಕರ ತ್ಯಾಗದಿಂದಾಗಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಅವರೆಲ್ಲರೂ ಬಿಜೆಪಿ ತತ್ವ ಹಾಗೂ ಸಿದ್ಧಾಂತಗಳನ್ನು ನಂಬಿ ಬಂದಿದ್ದಾರೆ. ಅವರಿಗೆ ಯಾವುದೇ ಮೋಸವಾಗದಂತೆ ಅವರಿಗೂ ನ್ಯಾಯ ದೊರಕಿಸಿ ಕೊಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಕುಮಠಳ್ಳಿ ಗೆಲ್ಲಿಸಿದರೆ ಮಂತ್ರಿ ಸ್ಥಾನ ನೀಡಲಾಗುವುದು’ ಎಂದು ಪುನರುಚ್ಚರಿಸಿದರು.

‘ಹಣ, ಹೆಂಡ, ಸುಳ್ಳು ಭರವಸೆ ಕೊಡುತ್ತಿರುವ ಹಾಗೂ ಜಾತಿ ವಿಷ ಬೀಜ ಬಿತ್ತುವ ಕಾಂಗ್ರೆಸ್‌ ಮತ್ತು ಜೆಡಿಎಸ್ ಪಕ್ಷದಿಂದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದರು.

‘ಅಥಣಿ ತಾಲ್ಲೂಕಿನಲ್ಲಿ ಸವಳು–ಜವಳು ಸಮಸ್ಯೆ ನಿವಾರಿಸಲಾಗುವುದು. ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು. ಕೊಕಟನೂರ ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಪಶುವೈದ್ಯಕೀಯ ಕಾಲೇಜಿಗೆ ಹೆಚ್ಚಿನ ಅನುದಾನ ನೀಡಿ ಉದ್ಘಾಟಿಸಲಾಗುವುದು. ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ₹ 25 ಕೋಟಿ ಅನುದಾನ ಮಂಜೂರು ಮಾಡಲಾಗುವುದು. ಪೂರ್ವ ಭಾಗದ 7 ಹಳ್ಳಿಗಳಿಗೆ ಅನುಕೂಲವಾಗುವ ಕೊಟ್ಟಲಗಿ ಏತ ನೀರಾವರಿ ಯೋಜನೆ, ಹಿಪ್ಪರಗಿ ಏತ ನೀರಾವರಿ ಯೋಜನೆ, ₹ 165 ವೆಚ್ಚದಲ್ಲಿ ಕೆರೆ ತುಂಬುವ ಯೋಜನೆಗೆ ಆದ್ಯತೆ ಕೊಡಲಾಗುವುದು. ಅಥಣಿಯಲ್ಲಿ ಸಂಚಾರದಟ್ಟಣೆ ನಿವಾರಣೆಗಾಗಿ ಬೈಪಾಸ್‌ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

‘ಇದು ಕುಮಠಳ್ಳಿ ಅವರ ಚುನಾವಣೆಯಷ್ಟೇ ಅಲ್ಲ. ಲಕ್ಷ್ಮಣ ಸವದಿ ಮತ್ತು ನನ್ನ ಚುನಾವಣೆಯೂ ಆಗಿದೆ. ಕಾರ್ಯಕರ್ತರು ಮುಕ್ತ ಮನಸ್ಸಿನಿಂದ ನಮ್ಮ ಗೆಲುವಿಗೆ ಶ್ರಮಿಸಬೇಕು. ಗೆಲುವು ಸಾಧಿಸಿದ ನಂತರ ನಾವೆಲ್ಲರೂ ಸೇರಿ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT