ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಬಂದ್ ಆಗಿದ್ದ ವ್ಯಾಪಾರ, ವಹಿವಾಟು!

ವ್ಯಾಪಾರಿಗಳಿಗೆ ತೊಂದರೆ
Last Updated 7 ಸೆಪ್ಟೆಂಬರ್ 2018, 12:39 IST
ಅಕ್ಷರ ಗಾತ್ರ

ಬೆಳಗಾವಿ: ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗಾಗಿ ಇಲ್ಲಿನ ಮಹಾದ್ವಾರ ರಸ್ತೆಯಲ್ಲಿ ಶುಕ್ರವಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲಿನ ಹಾಗೂ ಸುತ್ತಮುತ್ತಲಿನ ಅಂಗಡಿಗಳನ್ನು ಮಧ್ಯಾಹ್ನದವರೆಗೂ ಮುಚ್ಚಿಸಿದ್ದರಿಂದ, ವ್ಯಾಪಾರಿಗಳು ನಷ್ಟ ಅನುಭವಿಸಿದರು.

ಮುಂಜಾಗ್ರಾತಾ ಕ್ರಮವಾಗಿ ಈ ರಸ್ತೆಯಲ್ಲಿ ವಾಹನಗಳ ಓಡಾಟಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಸ್ಥಳೀಯರು ವಾಹನಗಳಲ್ಲಿ ಹೊರ ತೆರಳುವುದಕ್ಕೆ ಹಾಗೂ ಹೊರಗಿನವರು ಅಲ್ಲಿಗೆ ಬರುವುದಕ್ಕೆ ಅಡ್ಡಿಪಡಿಸಿದರು. ಇದರಿಂದಾಗಿ ಸಾರ್ವಜನಿಕರು ತೊಂದರೆಗೆ ಒಳಗಾದರು.

ಆಯುಕ್ತ ಡಿ.ಸಿ. ರಾಜಪ್ಪ, ಡಿಸಿಪಿಗಳಾದ ಸೀಮಾ ಲಾಟ್ಕರ್, ಮಹಾನಿಂಗ ನಂದಗಾವಿ, ಎಸಿಪಿ ಶಂಕರ ಮಾರಿಹಾಳ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಇನ್‌ಸ್ಪೆಕ್ಟರ್‌ಗಳು ಸ್ಥಳದಲ್ಲಿಯೇ ಇದ್ದರು.

ಚುನಾವಣಾ ಪ್ರಕ್ರಿಯೆ

ಬೆಳಿಗ್ಗೆ 10ರಿಂದ 11ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. 10.45ರ ಸುಮಾರಿಗೆ ಪೊಲೀಸ್‌ ಭದ್ರತೆಯಲ್ಲಿ ಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಬಣದ 9 ಸದಸ್ಯರಲ್ಲಿ ಮಹಾದೇವ ಪಾಟೀಲ ಹಾಗೂ ಬಾಪುಸಾಬ ಜಮಾದಾರ ಕ್ರಮವಾಗಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ‘ನಮ್ಮ ನಾಯಕಿ ಲಕ್ಷ್ಮಿ ಹೇಳಿದಂತೆ ಕೇಳುತ್ತೇವೆ’ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ ಅವರು, ಪ್ರವಾಸಿ ಮಂದಿರಕ್ಕೆ ತೆರಳಿದರು.

ಇದಾದ ಕೆಲವೇ ನಿಮಿಷಗಳಲ್ಲಿ ಬಂದ ಸತೀಶ ಜಾರಕಿಹೊಳಿ ಬೆಂಬಲಿಗರು ಚುನಾವಣಾ ಅಧಿಕಾರಿ ಎದುರು ಹಾಜರಾದರೂ, ನಾಮಪತ್ರ ಸಲ್ಲಿಸಲಿಲ್ಲ. ‘ವರಿಷ್ಠರು ಅವಿರೋಧ ಆಯ್ಕೆಗೆ ನಿರ್ಧಾರ ಮಾಡಿರುವುದರಿಂದ ನಮ್ಮ ಕಡೆಯವರು ನಾಮಪತ್ರ ಸಲ್ಲಿಸಲಿಲ್ಲ. ನಾನೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ, ಸಾಧ್ಯವಾಗಲಿಲ್ಲ. ಇದರಿಂದ ಬೇಸರವಾಗಿದೆ. ಮುಖಂಡರ ನಡುವೆ ಏನೇನು ಚರ್ಚೆ, ಸಂಧಾನ ನಡೆದಿದೆಯೋ ಎನ್ನುವುದು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ನಾಯಕರು ನೋಡಿಕೊಳ್ಳುತ್ತಾರೆ’ ಎಂದು ನಿರ್ದೇಶಕ ಪ್ರಸಾದ ಪಾಟೀಲ ಮಾರ್ಮಿಕವಾಗಿ ತಿಳಿಸಿದರು.

ತಮ್ಮೊಂದಿಗಿದ್ದ ನಿರ್ದೇಶಕರನ್ನು ಬ್ಯಾಂಕ್‌ಗೆ ಕಳುಹಿಸಿದ ಲಕ್ಷ್ಮಿ, ಕಪಿಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯು ಶಾಂತಿಯುತವಾಗಿ ಮುಗಿದಿದ್ದಕ್ಕೆ ಪೊಲೀಸರು ನಿಟ್ಟುಸಿರು ಬಿಟ್ಟರು. ವ್ಯಾಪಾರಿಗಳು ಸಂಜೆ ವೇಳೆಗೆ ಅಂಗಡಿಗಳನ್ನು ತೆರೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT