ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ | ಶಿಥಿಲಗೊಂಡಿರುವ ತಂಗುದಾಣಗಳು: ಆತಂಕ

ನಿರ್ವಹಣೆ ಕೊರತೆಯಿಂದ ಉಂಟಾದ ತೊಂದರೆ
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಬಸ್ ತಂಗುದಾಣಗಳು ಸಮರ್ಪಕ ನಿರ್ವಹಣೆ ಕೊರತೆ ಮತ್ತು ಸೂಕ್ತವಾಗಿ ಬಳಕೆ ಮಾಡಿಕೊಳ್ಳದೆ ಇರುವುದರಿಂದ ಶಿಥಿಲಗೊಂಡಿವೆ. ಕಿಡಿಗೇಡಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿವೆ.

ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸ್ಥಳಗಳಲ್ಲಿ ಪ್ರಮಾಣಿಕರು ಮಳೆ, ಗಾಳಿ, ಬಿಸಿಲಿನಿಂದ ತೊಂದರೆಗೆ ಒಳಗಾಗದಿರಲಿ ಎಂದು ಲಕ್ಷಾಂತರ ರೂಪಾಯಿ ಹಣ ವ್ಯಯಿಸಿ ತಂಗುದಾಣಗಳನ್ನು ನಿರ್ಮಿಸಲಾಗಿದೆ. ಇವು ದುಸ್ಥಿತಿಯಲ್ಲಿರುವುದರಿಂದ ಪ್ರಯಾಣಿಕರಿಗೆ ಆತಂಕ ಉಂಟಾಗುತ್ತಿದೆ.

ತಾಲ್ಲೂಕಿನಲ್ಲಿ ಸಂಕೇಶ್ವರ– ಜೇವರ್ಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಬಾವಾನಮಠದ ಹತ್ತಿರ ನಿರ್ಮಿಸಿರುವ ತಂಗುದಾಣ, ಕಬ್ಬೂರ–ಬೆಲ್ಲದಬಾಗೇವಾಡಿ ರಸ್ತೆಗೆ ಹೊಂದಿಕೊಂಡು ವಿಜಯನಗರ ಕ್ರಾಸ್‌ನಲ್ಲಿರುವ ತಂಗುದಾಣದಲ್ಲಿ ಮದ್ಯದ ಬಾಟಲಿಗಳು ಕಾಣಿಸಿದವು. ಇದರಿಂದ ಜನರು ತಂಗುದಾಣದ ಬಳಿ ಹೋಗಲು ಅಸಹ್ಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ ವೇಳೆ ಪುಂಡ–ಪೋಕರಿಗಳು ಈ ತಂಗುದಾಣಗಳನ್ನು ತಮ್ಮ ‘ಕೃತ್ಯ’ಗಳಿಗೆ ಬಳಸಿಕೊಳ್ಳುತ್ತಿದ್ದಾರೆ.

ಮದ್ಯದ ಬಾಟಲಿ, ತಿಂಡಿ ತಿನಿಸುಗಳ ಪೊಟ್ಟಣಗಳು, ಪ್ಲಾಸ್ಟಿಕ್ ಕವರ್‌ಗಳನ್ನು ಬಿಸಾಡುವುದರಿಂದ ತಂಗುದಾಣಗಳು ದುರ್ವಾಸನೆ ಬೀರುತ್ತಿವೆ. ಮುಖ್ಯ ರಸ್ತೆಗಳ ಬದಿಗೆ ನಿರ್ಮಿಸಿದ ಹಲವು ತಂಗುದಾಣಗಳ ಬಳಿ ವಿದ್ಯುದ್ದೀಪ ವ್ಯವಸ್ಥೆ ಇಲ್ಲ. ಇದು ಅನೈತಿಕ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ. ಕುಳಿತುಕೊಳ್ಳಲು ಕಟ್ಟಿದ ಕಟ್ಟೆಗಳೂ ಒಡೆದು ಹೋಗಿರುವುದರಿಂದ ಪ್ರಯಾಣಿಕರಿಗೆ ಪ್ರಯೋಜನ ಇಲ್ಲದಂತಾಗಿದೆ. ಹಲವು ಆಗಲೋ, ಈಗಲೋ ಕುಸಿದು ಬೀಳುವ ಹಂತದಲ್ಲಿವೆ.

‘ಗ್ರಾಮೀಣ ಪ್ರದೇಶದ ಬಹುತೇಕ ಬಸ್ ತಂಗುದಾಣಗಳು ಶಿಥಿಲಗೊಂಡಿವೆ. ಅಲ್ಲಿ ಮಕ್ಕಳು, ಜನಸಾಮಾನ್ಯರು ಬಸ್‌ಗಳಿಗಾಗಿ ಕಾಯುತ್ತಾರೆ. ಅವರ ಸುರಕ್ಷತೆ ದೃಷ್ಟಿಯಿಂದ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಶಿಥಿಲಗೊಂಡಿರುವ ತಂಗುದಾಣಗಳನ್ನು ತೆರವುಗೊಳಿಸಿ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳಬೇಕು’ ಎಂದು ಮುಖಂಡ ಬಿ.ಆರ್. ಸಂಗಪ್ಪಗೋಳ ಆಗ್ರಹಿಸಿದರು.

‘ರಸ್ತೆ ಸಾರಿಗೆ ಸಂಸ್ಥೆಯು ಬಸ್ ನಿಲ್ದಾಣಗಳ ನಿರ್ವಹಣೆ ಜವಾಬ್ದಾರಿ ಹೊಂದಿದೆ. ಆದರೆ, ಗ್ರಾಮೀಣ ಪ್ರದೇಶಗಳ ತಂಗುದಾಣಗಳ ನಿರ್ವಹಣೆ ತಾಲ್ಲೂಕು ಪಂಚಾಯ್ತಿ ಅಥವಾ ಜಿಲ್ಲಾ ಪಂಚಾಯ್ತಿ ಜವಾಬ್ದಾರಿಯಾಗಿದೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದ ಎಟಿಎಂ ಎಸ್.ಕೆ. ಇಂಗಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT