ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾಹ ಸ್ಥಳಗಳಿಗೆ ಭೇಟಿ‌ |ಸಂತ್ರಸ್ತರು ಕೇಳಿದಲ್ಲಿ ಮನೆ ನಿರ್ಮಾಣ: ಸಿದ್ದರಾಮಯ್ಯ

Published : 5 ಆಗಸ್ಟ್ 2024, 11:35 IST
Last Updated : 5 ಆಗಸ್ಟ್ 2024, 11:35 IST
ಫಾಲೋ ಮಾಡಿ
Comments

ಗೋಕಾಕ (ಬೆಳಗಾವಿ ಜಿಲ್ಲೆ): 'ಮಳೆಯಿಂದ ಸಂಪೂರ್ಣ ಮನೆ ಹಾನಿ ಸಂಭವಿಸಿದ ಸಂತ್ರಸ್ತರಿಗೆ ತಲಾ ₹1.2 ಲಕ್ಷ, ಭಾಗಶಃ‌ ಹಾನಿಯಾಗಿದ್ದರೆ ₹50 ಸಾವಿರ ಪರಿಹಾರ ನೀಡಲಾಗುವುದು. ಇದಲ್ಲದೇ ಸಂತ್ರಸ್ತರಿಗೆ ವಸತಿ ಯೋಜನೆಗಳಡಿ ಮನೆ ಕೂಡ ನಿರ್ಮಾಣ ಮಾಡಿ ಕೊಡಲಾಗುವುದು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಪ್ರವಾಹ ಪೀಡಿತ ಸ್ಥಳಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಪದೇ ಪದೇ ನೆರೆಗೆ ಸಿಲುಕುವ ಸಂತ್ರಸ್ತರು ಸ್ಥಳಾಂತರಕ್ಕೆ ಒಪ್ಪಿದರೆ ಬೇರೆ ಕಡೆ ಮನೆ ಕಟ್ಟಿಸಿಕೊಡುತ್ತೇವೆ. ಇಲ್ಲವಾದರೆ ಹಳೆ ಮನೆ‌ ಬಿದ್ದ ಜಾಗದಲ್ಲೇ ಕಟ್ಟಿ ಕೊಡುತ್ತೇವೆ. ವಸತಿ ಯೋಜನೆ ಅಡಿ ಅರ್ಜಿ ಹಾಕುವುದು ಕಡ್ಡಾಯ' ಎಂದರು.

'ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಸಂಪೂರ್ಣ ಮನೆ ಹಾನಿಗೆ ₹5 ಲಕ್ಷ ಪರಿಹಾರ ಘೋಷಿಸಿದ್ದರು. ಅದು ದುರುಪಯೋಗವಾಯಿತು. ಹಲವರಿಗೆ ಮೊದಲನೇ ಕಂತು ಮಾತ್ರ ಬಿಡುಗಡೆಯಾಗಿ, ಎರಡು ಹಾಗೂ ಮೂರನೇ ಕಂತಿನ ಪರಿಹಾರ ಈ ವರೆಗೂ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ₹1.2 ಲಕ್ಷ ಪರಿಹಾರ ಹಾಗೂ ಮನೆ ನೀಡುವ ನಿರ್ಧಾರ ಮಾಡಿದೆ' ಎಂದು ಸ್ಪಷ್ಟ ಪಡಿಸಿದರು.

'ಪದೇ ಪದೇ ಮುಳುಗಡೆಯಾಗುವ ಹಳ್ಳಿಗಳ ಸ್ಥಳಾಂತರ ಮಾಡುವ ಮೂಲಕ ಶಾಶ್ವತ ಪರಿಹಾರ ಒದಗಿಸಲು ಚಿಂತನೆ ನಡೆದಿದೆ. ಆದರೆ ಇದಕ್ಕೆ ಜನ ಒಪ್ಪಬೇಕು' ಎಂದು ತಿಳಿಸಿದರು.

ಪರಿಹಾರ ಕೆಲಸ ಪ್ರಾರಂಭ

'ರಾಜ್ಯದ ಹಲವೆಡೆ ಮಳೆಯಿಂದ ಹಾನಿಯಾಗಿದೆ. ಎಲ್ಲ ಕಡೆ ಪರಿಹಾರ ಕೆಲಸಗಳನ್ನು ಪ್ರಾರಂಭಿಸಲಾಗಿದೆ. ಮೈಸೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಭೇಟಿ ನೀಡಲಾಗಿದ್ದು, ಮೃತಪಟ್ಟವರಿಗೆ ಹಾಗೂ ಜಾನುವಾರುಗಳು ಸತ್ತಿರುವುದಕ್ಕೆ ಕೂಡಲೇ ಪರಿಹಾರ ವಿತರಿಸಲಾಗುತ್ತಿದೆ. ಮನೆಗಳ ಬಿದ್ದಿರುವುದಕ್ಕೆ ಪರಿಹಾರ, ವಿದ್ಯುತ್‌ ಕಂಬ, ಟ್ರಾನ್ಸ್‌ಫಾರ್ಮರುಗಳ ದುರಸ್ತಿ ಮೊದಲಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ' ಎಂದರು.

ಮುಂದಿನ ವಾರ ಹೆಚ್ಚು ಮಳೆ: ಕಟ್ಟೆಚ್ಚರ ವಹಿಸಲು ಸೂಚನೆ

'ಮುಂದಿನ ವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಇದಕ್ಕಾಗಿ ಕಂದಾಯ, ವಿಪತ್ತು ನಿರ್ವಹಣೆ, ಅರಣ್ಯ ಇಲಾಖೆ, ಇಂಧನ, ನೀರಾವರಿ ಸೇರಿದಂತೆ ಎಲ್ಲ ಇಲಾಖೆಗಳು ಎಚ್ಚರಿಕೆ ವಹಿಸುವಂತೆ ತಿಳಿಸಲಾಗಿದೆ' ಎಂದರು.

'ಗೃಹ ಲಕ್ಷ್ಮಿ ಮೂರು ತಿಂಗಳಿನಿಂದ ಬಾಕಿ ಉಳಿದಿಲ್ಲ. ಜುಲೈ ತಿಂಗಳಿನದ್ದು ಮಾತ್ರ ಬಾಕಿ ಇದೆ. ಅದನ್ನೂ ಶೀಘ್ರವೇ ವಿತರಿಸಲಾಗುವುದು' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್‌, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಅಸೀಫ್ ಸೇಟ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ತಜನೀಶ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಗಣ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT