ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಪತ್ರ ಸಲ್ಲಿಕೆ: ಶಕ್ತಿ ಪ್ರದರ್ಶನ ಮಾಡಿದ ಮೃಣಾಲ್‌ ಹೆಬ್ಬಾಳಕರ

ದೇವಸ್ಥಾನಗಳಿಗೆ ಭೇಟಿ, ಶ್ರೀಗಳ ಪಾದಪೂಜೆ, ಗೋಪೂಜೆ, ಅದ್ಧೂರಿ ಮೆರವಣಿಗೆ
Published 15 ಏಪ್ರಿಲ್ 2024, 12:33 IST
Last Updated 15 ಏಪ್ರಿಲ್ 2024, 12:33 IST
ಅಕ್ಷರ ಗಾತ್ರ

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮೃಣಾಲ್‌ ಹೆಬ್ಬಾಳಕರ ಸೋಮವಾರ, ತಮ್ಮ ಉಮೇದುವಾರಿಕೆ ಸಲ್ಲಿಸಿದರು. ನಂತರ ನಡೆದ ಅದ್ಧೂರಿ ವಿಜಯ ಯಾತ್ರೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಜತೆಗೆ ಸೇರಿ ಶಕ್ತಿ ಪ್ರದರ್ಶನ ಮಾಡಿದರು.

ಇಲ್ಲಿನ ಸಿ.ಪಿ.ಇಡಿ ಮೈದಾನದಿಂದ ತೆರೆದ ಜೀಪ್‌ನಲ್ಲಿ ಆರಂಭವಾದ ಮೆರವಣಿಗೆ ರಾಣಿ ಚನ್ನಮ್ಮ ವೃತ್ತದವರೆಗೂ ನಡೆಯಿತು. ಕ್ಷೇತ್ರದ ಮೂಲೆಮೂಲೆಯಿಂದ ಬಂದು ಸೇರಿದ ಅಪಾರ ಸಂಖ್ಯೆಯ ಕಾರ್ಯಕರ್ತರು ಉರಿಬಿಸಿಲು ಲೆಕ್ಕಿಸದೇ ಮೆರವಣಿಗೆಯಲ್ಲಿ ಸಾಗಿದರು.

ಅಭ್ಯರ್ಥಿ ಮೃಣಾಲ್‌ ಜೀಪ್‌ ಏರುತ್ತಿದ್ದಂತೆ ಅಭಿಮಾನಿಗಳು ಕೂಗಾಟ, ಚೀರಾಟ ಆರಂಭಿಸಿದರು. ಡಿ.ಕೆ.ಶಿವಕುಮಾರ್‌ ವಾಹನ ಏರಿ ಕಾರ್ಯಕರ್ತರತ್ತ ಕೈಬೀಸಿ ಹುಮ್ಮಸ್ಸು ತುಂಬಿದರು. ಜೈಕಾರಗಳು ನಿರಂತರ ಮೊಳಗಿದವು. ದೇಶಭಕ್ತಿಗೀತೆ ಮೊಳಗಿಸಿದ ಬಳಕ ಮೆರವಣಿಗೆ ಆರಂಭವಾಯಿತು.

ರಾರಾಜಿಸಿದ ಧ್ವಜಗಳು: ಅಪಾರ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಕಾಂಗ್ರೆಸ್‌ ಧ್ವಜ ಹಿಡಿದು ಸಾಗಿದರು. ಮರಾಠಾ ಸಮುದಾಯದ ಹಲವು ಮುಖಂಡರು, ಯುವಕರು ಕೂಡ ಭಗವಾಧ್ವಜಗಳನ್ನು, ವಿವಿಧ ಸಮುದಾಯಗಳ ಯುವಕರು ನೀಲಿ ಬಣ್ಣ, ಹಳದಿ ಬಣ್ಣದ ಧ್ವಜಗಳನ್ನೂ ಪ್ರದರ್ಶಿಸಿದರು.

ಡೊಳ್ಳಿನ ಸಂಘ, ಡೋಲ್‌ ತಾಸೆ, ಚೆಂಡೆ ಮೇಳ ಸೇರಿದಂತೆ ವಿವಿಧ ವಾದ್ಯಮೇಳಗಳು ಮೆರವಣಿಗೆಗೆ ಕಳೆ ತಂದವು. ಯುವಕರು, ಮಹಿಳೆಯರು ಕೂಡ ಮಾರ್ಗಮಧ್ಯದ ವೃತ್ತಗಳಲ್ಲಿ ಕುಣಿದು ಕುಪ್ಪಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಆಸೀಫ್‌ ಸೇಠ್‌, ಲಕ್ಷ್ಮಣ, ಸವದಿ, ರಾಜು ಕಾಗೆ, ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ಮಹೇಂದ್ರ ತಮ್ಮಣ್ಣವರ, ಬಾಬಾಸಾಹೇಬ ಪಾಟೀಲ, ಮಹಾರಾಷ್ಟ್ರದ ಶಾಸಕ ಧೀರಜ್‌ ದೇಶಮುಖ, ಬುಡಾ ಅಧ್ಯಕ್ಷ ಲಕ್ಷ್ಮಣ ಚಿಂಗಳೆ ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡರು.

ನಾಲ್ಕು ಪ್ರತಿಗಳಲ್ಲಿ ನಾಮಪತ್ರ

ಡಿ.ಕೆ.ಶಿವಕುಮಾರ್, ಸಚಿವರಾದ ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ, ಶಾಸಕರಾದ ಲಕ್ಷ್ಮಣ ಸವದಿ, ಮಹಾಂತೇಶ ಕೌಜಲಗಿ, ಆಸೀಫ್‌ ಸೇಠ್‌, ವಿಶ್ವಾಸ ವೈದ್ಯ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಕುರುಬ ಸಮಾಜದ ಮುಖಂಡ ಬಾಗಣ್ಣ ನರೋಟಿ ಜತೆಗಿದ್ದರು.

ಬೆಳಿಗ್ಗೆ ತಮ್ಮ ಮನೆಯಲ್ಲಿ ಗೋಪೂಜೆ ನೆರವೇರಿಸಿದ ಮೃಣಾಲ್‌, ಜಿಲ್ಲೆಯ ವಿವಿಧ ಸಮುದಾಯಗಳ ಮಠಾಧೀಶರ ಪಾದಪೂಜೆ ಮಾಡಿದರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬೆಳಗಾವಿಯ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಸೇರಿದಂತೆ 20ಕ್ಕೂ ಹೆಚ್ಚು ಮಠಾಧೀಶರಿಂದ ಆಶೀರ್ವಾದ ಪಡೆದರು.

ಸುಳೇಬಾವಿಯ ಮಹಾಲಕ್ಷ್ಮಿ, ಹಟ್ಟಿಹೊಳಿಯ ವೀರಭದ್ರೇಶ್ವರ, ಹಿಂಡಲಗಾ ಗಣಪತಿ ಮಂದಿರಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ವಿಜಯ ಯಾತ್ರೆ ಆರಂಭಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT