ಮಂಗಳವಾರ, ಮೇ 18, 2021
24 °C

ಯಾರಿಗೆಷ್ಟು ಸೀಟು? ಇನ್ನು ಹಂಚಿಕೆಯಾಗಿಲ್ಲ: ಸಚಿವ ಕೃಷ್ಣ ಬೈರೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ - ಜೆಡಿಎಸ್ ನಡುವೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು. ಆದರೆ, ಯಾರಿಗೆಷ್ಟು ಸೀಟು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಯಾವ ಕ್ಷೇತ್ರ ಯಾರಿಗೆ ಎನ್ನುವುದು ತೀರ್ಮಾನವಾಗಲು ಸಮಯವಿದೆ. ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಕೆಲವು ಕಡೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ತೊಂದರೆ ಆಗಬಹುದು. ಆದರೆ, ಹೊಂದಾಣಿಕೆ ಅವಶ್ಯವಾಗಿದೆ ಎಂದು ಹೇಳಿದರು.

ಸರ್ಕಾರ ಸುಭದ್ರವಾಗಿದೆ. ಮುಂದೆಯೂ ಇರುತ್ತದೆ. ಅನುಮಾನ ಬೇಡ. ಮುಖಂಡರು ಅವರವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರಿಗೆ ಪಕ್ಷದ ಹಿರಿಯರು ಬುದ್ಧಿ ಹೇಳುತ್ತಾರೆ ಎಂದರು.

ಪಕ್ಷ ಅಥವಾ ಈಗಿನ ಸರ್ಕಾರಕ್ಕೆ ಅಖಂಡ ಕರ್ನಾಟಕ ಇರಬೇಕು ಎನ್ನುವುದೇ ಆಗಿದೆ. ಸಮಸ್ಯೆಗಳಿದ್ದಲ್ಲಿ ಪರಿಹಾರ ಕಂಡುಕೊಳ್ಳಬೇಕು. ಉಲ್ಬಣ ಮಾಡಿ ಜನರ ಭಾವನೆ ಕೆರಳಿಸಬಾರದು ಎಂದರು. ಎಲ್ಲ ಸರ್ಕಾರಗಳಲ್ಲೂ ಉತ್ತರ ಕರ್ನಾಟಕಕ್ಕೆ ಅನುದಾನ, ಯೋಜನೆಗಳು ಸಿಕ್ಕಿವೆ. ನ್ಯೂನತೆ ಇದ್ದರೆ ಅವುಗಳನ್ನು ಪರಿಹರಿಸಲು ನಾವೆಲ್ಲರೂ ಬದ್ಧವಾಗಿದ್ದೇವೆ ಎಂದು ಪ್ರತಿಕ್ರಿಯಿಸಿದರು.

ರಸ್ತೆಗಳ ದುರಸ್ತಿಗೆ ₹ 222 ಕೋಟಿ:

‘ಮಳೆಯಿಂದ ಹಾಳಾಗಿರುವ ಗ್ರಾಮೀಣ ರಸ್ತೆಗಳ ದುರಸ್ತಿಗಾಗಿ ₹ 222 ಕೋಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ, ಶಾಸಕರ ಕಾರ್ಯಪಡೆಗೆ ₹ 122 ಕೋಟಿ ಹಾಗೂ ಜಿಲ್ಲಾ ಪಂಚಾಯ್ತಿಗಳಿಗೆ ₹ 100 ಕೋಟಿ ಹಂಚಲಾಗಿದೆ. ತುರ್ತಾಗಿ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ’ ಎಂದರು.

‘20 ಜಿಲ್ಲೆಗಳನ್ನು ಬಯಲು ಶೌಚ ಮುಕ್ತ ಜಿಲ್ಲೆಗಳೆಂದು ಘೋಷಿಸಲಾಗಿದೆ. ಅ. 2ರೊಳಗೆ ಮತ್ತಷ್ಟು ಜಿಲ್ಲೆಗಳನ್ನೂ ಘೋಷಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ರಾಜ್ಯದಲ್ಲಿ 2498 ನೀರು ಶುದ್ಧೀಕರಣ ಘಟಕಗಳು ಬಂದ್ ಆಗಿದ್ದವು. ಅವುಗಳ ದುರಸ್ತಿ ನಡೆಯುತ್ತಿದೆ. 15 ದಿನಗಳಲ್ಲಿ 1500 ಘಟಕಗಳನ್ನು ದುರಸ್ತಿ ಮಾಡಲಾಗಿದೆ. ಉಳಿದವನ್ನು ವಾರದೊಳಗೆ ಸಿದ್ಧಪಡಿಸಲಾಗುವುದು’ ಎಂದು ವಿವರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು