ಮಂಗಳವಾರ, ಮಾರ್ಚ್ 28, 2023
31 °C

ನೋಂದಾಯಿಸಿದ ಎಲ್ಲರಿಗೂ ಸಹಾಯಧನ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಲಾಕ್‌ಡೌನ್‌ ಘೋಷಣೆ ನಂತರ ನೋಂದಾಯಿಸಿರುವ ಕಾರ್ಮಿಕರಿಗೂ ಕೋವಿಡ್-19 ಸಹಾಯಧನ ನೀಡಬೇಕು’ ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದವರು ಎಐಟಿಯುಸಿ ನೇತೃತ್ವದಲ್ಲಿ ಇಲ್ಲಿನ ಸಹಾಯಕ ಕಾರ್ಮಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಲಾಕ್‌ಡೌನ್ ವೇಳೆ ಮಹಾ ನಗರಗಳಿಂದ ತಮ್ಮ ಊರುಗಳಿಗೆ ನಡೆದುಕೊಂಡೇ ಬಂದು ತಲುಪಿದ ಲಕ್ಷಾಂತರ ಕಾರ್ಮಿಕರು ಹೊಸದಾಗಿ ಕಾರ್ಡ್  ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಆದರೆ ಇದುವರೆಗೂ ಬಹುತೇಕ ಅರ್ಜಿಗಳಿಗೆ ಅನುಮೋದನೆ ನೀಡಿಲ್ಲ. ಇದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘‌‌‌‌ಕೋವಿಡ್-19 ಸೋಂಕಿತ ಕಾರ್ಮಿಕರು ಮತ್ತು ಅವರ ಕುಟುಂಬದ ವೈದ್ಯಕೀಯ ವೆಚ್ಚವನ್ನು ಸರ್ಕರದಿಂದಲೇ ಭರಿಸಬೇಕು ಹಾಗೂ ಆ ಅವಧಿಯ ವೇತನ ನೀಡಬೇಕು. ಎಲ್ಲಾ ರೀತಿಯ ಕ್ಲೈಮ್‌ಗಳಿಗೆ ಕಾಲಮಿತಿಯಲ್ಲಿ ಹಣ ಸಂದಾಯ ಮಾಡಬೇಕು. ಹೊಸ ಮತ್ತು ನವೀಕರಣಕ್ಕಾಗಿ ಸಲ್ಲಿಸುವ ಅರ್ಜಿಗಳಿಗೆ ಕಾಲಮಿತಿಯಲ್ಲಿ ಅನುಮೋದನೆ ನೀಡಬೇಕು. ಎಲ್ಲ ಸಾರಿಗೆ ನಿಗಮಗಳಲ್ಲೂ ಉಚಿತ ಬಸ್‌ಪಾಸ್‌ ವಿತರಿಸಬೇಕು. ಕಾರ್ಮಿಕ ಚಿಕಿತ್ಸಾ ಭಾಗ್ಯ (ಪ್ರಮುಖ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿ) ಯೋಜನೆಯನ್ನು ಕಟ್ಟಡ ಕಾರ್ಮಿಕರ ಕುಟುಂಬದ ಸದಸ್ಯರಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

‘ಪಿಂಚಣಿ ಯೋಜನೆಗೆ ಅರ್ಹರಾದ ಕಾರ್ಮಿಕರಿಗೆ 6 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು ಎನ್ನುವ ಷರತ್ತು ತೆಗೆದು ಹಾಕಬೇಕು. ಅರ್ಜಿ ಸಲ್ಲಿಸದಿದ್ದರೂ ವಯಸ್ಸಿನ ಆಧಾರದಲ್ಲಿ ಪಿಂಚಣಿ ನೀಡಬೇಕು. ಲಾಕ್‌ಡೌನ್ ಕಾರಣದಿಂದ ಎಲ್ಲ ಬಗೆಯ ಕ್ಲೈಮ್ಗಳಿಗೆ ಅರ್ಜಿ ಸಲ್ಲಿಸಲು ಇರುವ ಕಾಲಮಿತಿ ವಿಸ್ತರಿಸಬೇಕು. ಕಾರ್ಮಿಕ ಗೃಹ ಭಾಗ್ಯ ಯೋಜನೆಗೆ ನೀಡುವ ಸಹಾಯಧನ ಅಥವಾ ಸಾಲಕ್ಕೆ ನಿಗದಿಗೊಳಿಸಿರುವ ಷರತ್ತುಗಳನ್ನು ಅರ್ಹ ಎಲ್ಲ ಕಾರ್ಮಿಕರಿಗೂ ಸಿಗುವಂತೆ ಸರಳಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಎರಡು ತಿಂಗಳಿಗೊಮ್ಮೆ ಪ್ರತಿ ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನೋಂದಾಯಿತ ಹಾಗೂ ಚಾಲ್ತಿಯಲ್ಲಿರುವ ಕಟ್ಟಡ ಕಾರ್ಮಿಕರ ಸಂಘಟನೆಗಳೊಂದಿಗೆ ಕಟ್ಟಡ ಕಾರ್ಮಿಕರ ಕುಂದುಕೊರತೆ ಸಭೆ ಕರೆಯಬೇಕು’ ಎಂದು ಹಕ್ಕೊತ್ತಾಯ ಮಂಡಿಸಿ ಮನವಿ ಸಲ್ಲಿಸಿದರು.

ಮುಖಂಡರಾದ ರಾಜು ಗಾಣಗಿ, ಲಕ್ಕಪ್ಪ ಬಿಜ್ಜನ್ನವರ, ಶಾಂತಾ ಕಾಂಬಳೆ, ನಿಂಗಪ್ಪ ನಾಯ್ಕ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು