ಮಹಿಳಾ ದೌರ್ಜನ್ಯ: ಶಿಕ್ಷೆ ಪ್ರಮಾಣ ಶೇ 23ರಷ್ಟು ಮಾತ್ರ!

7
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್‌ಕುಮಾರ್‌ ದತ್ತ ವಿಷಾದ

ಮಹಿಳಾ ದೌರ್ಜನ್ಯ: ಶಿಕ್ಷೆ ಪ್ರಮಾಣ ಶೇ 23ರಷ್ಟು ಮಾತ್ರ!

Published:
Updated:
Deccan Herald

ಬೆಳಗಾವಿ: ‘ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ದೇಶದಲ್ಲಿ ಶೇ 24 ಹಾಗೂ ರಾಜ್ಯದಲ್ಲಿ ಶೇ 4.3ರಷ್ಟು ಮಾತ್ರ ಇದೆ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕ್‌ಕುಮಾರ್‌ ದತ್ತ ತಿಳಿಸಿದರು.

ಮಾನವ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯ ಟ್ರಸ್ಟ್‌ ವತಿಯಿಂದ ಇಲ್ಲಿನ ಐಎಂಎ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಾನವ ಹಕ್ಕುಗಳ ಜಾಗೃತಿ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಶಿಕ್ಷೆಯ ಪ್ರಮಾಣ ಇಷ್ಟು ಕಡಿಮೆ ಪ್ರಮಾಣದಲ್ಲಿರುವುದು ಸರಿಯಲ್ಲ. ತ್ವರಿತ ಹಾಗೂ ನ್ಯಾಯಸಮ್ಮತ ವಿಚಾರಣೆಗಳು ನಡೆಯಬೇಕು. ಘಟನೆಗೆ ಸಾಕ್ಷಿಯಾದವರು, ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಿ ಹೇಳಬೇಕು. ಇದಕ್ಕಾಗಿ ಸಾಕ್ಷಿಗಳ ರಕ್ಷಣಾ ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್‌ ಜಾರಿಗೊಳಿಸಿದೆ’ ಎಂದು ಹೇಳಿದರು.

ಎಲ್ಲರಿಗೂ ಮನೆ ಕಲ್ಪಿಸಬೇಕು:  ‘ಮನೆ ಎಲ್ಲರ ಹಕ್ಕು. ಒದಗಿಸುವುದು ಸರ್ಕಾರದ ಜವಾಬ್ದಾರಿ. ಆಹಾರ, ಸಮಾನ ಕೆಲಸಕ್ಕೆ ಸಮಾನ ವೇತನ, ಗೌರವಯುತವಾಗಿ ಜೀವಿಸುವುದು ಎಲ್ಲರ ಹಕ್ಕು. ಸ್ವಾತಂತ್ರ್ಯ ಹಾಗೂ ಅಧಿಕಾರವಿದೆ ಎಂದು, ಸಮಾಜಕ್ಕೆ ತೊಂದರೆ ಕೊಡಲು ಬರುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಹಕ್ಕುಗಳನ್ನು ಅನುಭವಿಸಬೇಕು; ಕರ್ತವ್ಯಗಳನ್ನೂ ನಿರ್ವಹಿಸಬೇಕು’ ಎಂದರು.

‘ಯಾವುದೇ ವ್ಯಕ್ತಿಯನ್ನೂ ಮಾಹಿತಿ ಇಲ್ಲದೇ ಬಂಧಿಸುಂತಿಲ್ಲ. ಬಂಧಿಸಿದವರನ್ನು 24 ಗಂಟೆಯಲ್ಲಿ ನ್ಯಾಯಾಧೀಶರ ಎದುರು ಹಾಜರುಪಡಿಸಬೇಕು. ವಕೀಲರ ನೇಮಕಕ್ಕೆ ಅವಕಾಶ ಕೊಡಬೇಕು’ ಎಂದು ಪೊಲೀಸರಿಗೆ ಸೂಚಿಸಿದರು.

‘ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಹೋಗಿದ್ದೆ. ಅಲ್ಲಿ 5, 6, 8 ವರ್ಷವಾದರೂ ವಿಚಾರಣೆಯೇ ಆರಂಭವಾಗದ ಪ್ರಕರಣಗಳಿವೆ’ ಎಂದು ತಿಳಿಸಿದರು.

ಭ್ರಷ್ಟಾಚಾರ ತಡೆಯಬೇಕು:  ಆಡಳಿತ ಎಂದರೆ ಉತ್ತಮ ಆಡಳಿತ ಎಂದೇ ಅರ್ಥ. ಅದರಲ್ಲಿ ಕೆಟ್ಟದು, ಒಳ್ಳೆಯದು ಇಲ್ಲ. ಸಮರ್ಪಕವಾಗಿ ನಿರ್ವಹಿಸಬೇಕಷ್ಟೆ. ಭ್ರಷ್ಟಾಚಾರವೂ ಮಾನವ ಹಕ್ಕುಗಳ ಉಲ್ಲಂಘನೆಯೇ. ತಂತ್ರಜ್ಞಾನ ಬಳಕೆಯಿಂದ ಅದನ್ನು ತಡೆಯಬಹುದು’ ಎಂದು ಪ್ರತಿಪಾದಿಸಿದರು.

‘ಒಂದು ಆಯೋಗದ ಮುಂದೆ ಇರುವ ಪ್ರಕರಣಗಳ ವಿಚಾರಣೆಯನ್ನು ನಮ್ಮ ಆಯೋಗ ಕೈಗೆತ್ತಿಕೊಳ್ಳಲು ಬರುವುದಿಲ್ಲ. ಹೀಗಾಗಿ, ರಾಷ್ಟ್ರೀಯ ಆಯೋಗಕ್ಕೆ ಹೋಗುವ ಬದಲಿಗೆ ನಮ್ಮಲ್ಲಿಯೇ ದೂರು ಸಲ್ಲಿಸಬೇಕು’ ಎಂದು ಸಲಹೆ ನೀಡಿದರು.

‘ವರ್ಷ ಹಳೆಯದಾದ ದೂರು ವಿಚಾರಣೆಗೆ ಆಯೋಗದಲ್ಲಿ ಅವಕಾಶವಿಲ್ಲ. ಇದಕ್ಕೆ ತಿದ್ದುಪಡಿಯಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಉತ್ತರ ವಲಯ ಐಜಿಪಿ ಅಲೋಕ್‌ ಕುಮಾರ್‌, ‘ಪೊಲೀಸರು ಮಾನವ ಹಕ್ಕುಗಳ ರಕ್ಷಣೆಗೆ ಆದ್ಯತೆ ನೀಡಬೇಕು. ಆರೋಪಿಗಳನ್ನು ಸಮಾನವಾಗಿ ಕಾಣಬೇಕು. ಸಾಕ್ಷ್ಯಾಧಾರಿತ ಪೊಲೀಸ್ ವ್ಯವಸ್ಥೆ, ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದರು.

ಟ್ರಸ್ಟ್‌ ಅಧ್ಯಕ್ಷ ಅತೀಖ್ ಸೇಠ್, ಸುಧೀರ ಕೆ. ಸಂಭಾಜಿ, ನಿವೃತ್ತ ಅಧಿಕಾರಿ ಎಂ.ಬಿ. ಬಡಬಡೆ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !