ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ನೆಗೆಟಿವ್ ವರದಿ, 2 ಡೋಸ್ ಲಸಿಕೆ ಕಡ್ಡಾಯ

Last Updated 28 ನವೆಂಬರ್ 2021, 14:08 IST
ಅಕ್ಷರ ಗಾತ್ರ

ಬೆಳಗಾವಿ: ಕೊರೊನಾ ರೂಪಾಂತರಿ ವೈರಾಣು ವ್ಯಾಪಕವಾಗಿ ಹರಡುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ರಾಜ್ಯದ ಗಡಿ ಭಾಗದಲ್ಲಿರುವ ನಿಪ್ಪಾಣಿ ತಾಲ್ಲೂಕಿನ ಕೊಗನೊಳ್ಳಿ ಚೆಕ್ ಪೋಸ್ಟ್‌ಗೆ ಭಾನುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

‘ಸರ್ಕಾರದ ಮಾರ್ಗಸೂಚಿ ಪ್ರಕಾರ ನೆರೆಯ ಮಹಾರಾಷ್ಟ್ರ ರಾಜ್ಯದ ಮೂಲಕ ಆಗಮಿಸುವ ಪ್ರಯಾಣಿಕರು 72 ಗಂಟೆಗಳ ಪೂರ್ವ ಅವಧಿಯ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಹೊಂದಿರುವುದು ಅಥವಾ 2 ಡೋಸ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ. ಅಂಥವರಿಗೆ ಮಾತ್ರ ರಾಜ್ಯದೊಳಗೆ ಪ್ರಯಾಣಿಸಲು ಅವಕಾಶ ಕೊಡಬೇಕು’ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಗಡಿ ಭಾಗದಲ್ಲಿರುವ ಚೆಕ್ ಪೋಸ್ಟ್ ಮೂಲಕ ಸಾಗುವ ಪ್ರತಿ ವಾಹನವನ್ನೂ ತಡೆದು ಪ್ರಯಾಣಿಕರು ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಅಲ್ಲಿ ಕರ್ತವ್ಯನಿರತರಾಗಿದ್ದ ಅಧಿಕಾರಿ ಮತ್ತು ಸಿಬ್ಬಂದಿಗೆ ತಾಕೀತು ಮಾಡಿದರು.

ಈ ವೇಳೆ ಕೆಲವು ವಾಹನಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಅದರಲ್ಲಿದ್ದವರು ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿ ಹೊಂದಿಲ್ಲದಿರುವುದನ್ನು ಗಮನಿಸಿ ವಾಪಸ್ ಕಳುಹಿಸಿದರು.

‘ಕೊಗನೊಳ್ಳಿ ಚೆಕ್ ಪೋಸ್ಟ್ ಪ್ರಮುಖ ಚೆಕ್ ಪೋಸ್ಟ್ ಆಗಿರುವುದರಿಂದ ಅಂತರರಾಜ್ಯದಿಂದ ಸಂಚರಿಸುವ ವಾಹನಗಳ ಮೇಲೆ ನಿರಂತರ ನಿಗಾ ವಹಿಸಬೇಕು. ಕೋವಿಡ್ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕಾಲಕಾಲಕ್ಕೆ ಸರ್ಕಾರ ಪ್ರಕಟಿಸುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ನಿರ್ದೇಶನ ನೀಡಿದರು.

‘ನಿಪ್ಪಾಣಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಕೊಗನೊಳ್ಳಿ, ಕೋಡಣಿ, ಬೋರಗಾಂವ ಹಾಗೂ ಮಾಂಗೂರ ಸೇರಿದಂತೆ 5 ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಸಂಚರಿಸುವ ವಾಹನಗಳನ್ನು ಕಡ್ಡಾಯವಾಗಿ ಪರಿಶೀಲಿಸಲಾಗುತ್ತಿದೆ. ಪ್ರಯಾಣಿಕರು ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ಹೊಂದಿದ್ದರೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ಇಲ್ಲದಿದ್ದರೆ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ’ ಎಂದು ನಿಪ್ಪಾಣಿ ತಹಶೀಲ್ದಾರ್‌ ಮೋಹನ‌ ಭಸ್ಮೆ ಮಾಹಿತಿ ನೀಡಿದರು.

ಬಳಿಕ ಜಿಲ್ಲಾಧಿಕಾರಿ ಕಾಗವಾಡ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು.

ಗೋವಾ ಹಾಗೂ ಮಹಾರಾಷ್ಟ್ರದಿಂದ ಸಂಪರ್ಕಿಸುವ ಗಡಿ ಪ್ರದೇಶಗಳಲ್ಲಿ ನಿಗಾ ವಹಿಸುವುದಕ್ಕಾಗಿ 23 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಬೆಳಗಾವಿ ತಾಲ್ಲೂಕಿನ ಬಾಚಿ ಚೆಕ್‌ಪೋಸ್ಟ್‌ನಲ್ಲೂ ಸಿಬ್ಬಂದಿಯು ನಿಗಾ ವಹಿಸುತ್ತಿರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT