ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕ ಕಾಲಕ್ಕೆ 135 ಗ್ರಾಮಗಳಲ್ಲಿ ಪರೀಕ್ಷೆ

ಎಲ್ಲ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆಗೆ ಕ್ರಮ: ಜಿಲ್ಲಾಧಿಕಾರಿ ಹಿರೇಮಠ
Last Updated 24 ಮೇ 2021, 12:31 IST
ಅಕ್ಷರ ಗಾತ್ರ

ಬೆಳಗಾವಿ: ‘ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ತ್ವರಿತ ಪತ್ತೆಗಾಗಿ ಆಯಾ ಗ್ರಾಮಗಳಲ್ಲಿಯೇ ರ‍್ಯಾಪಿಡ್ ಆ್ಯಂಟಿಜನ್ ಟೆಸ್ಟ್ (ಆರ್‌ಎಟಿ) ಪ್ರಾರಂಭಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಹುಕ್ಕೇರಿ ತಾಲ್ಲೂಕಿನ ಹುಲ್ಲೊಳ್ಳಿ ಹಾಗೂ‌ ಹತ್ತರಗಿ ಗ್ರಾಮದಲ್ಲಿ ಸೋಮವಾರ ಪರೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮೊದಲ ದಿನವಾದ ಸೋಮವಾರ 135 ಗ್ರಾಮಗಳಲ್ಲಿ ಏಕಕಾಲಕ್ಕೆ ಶಿಬಿರ ಜರುಗಿದೆ. ಎಲ್ಲ ಗ್ರಾಮಗಳಲ್ಲೂ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಜಿಲ್ಲೆಯ ಪ್ರತಿ ಗ್ರಾಮಕ್ಕೂ ಒಬ್ಬ ನೋಡಲ್ ಅಧಿಕಾರಿ ನೇಮಿಸಲಾಗಿದ್ದು, ಗ್ರಾಮ ಪಂಚಾಯಿತಿ ಕಾರ್ಯಪಡೆ ಮೂಲಕ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಧೃತಿಗೆಡಬಾರದು

‘ಕೋವಿಡ್ ಪರೀಕ್ಷೆ ಮತ್ತು ವರದಿ ವಿಳಂಬ ಆಗುತ್ತಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮಗಳಲ್ಲೇ ಪರೀಕ್ಷೆ ಆರಂಭಿಸಲಾಗಿದೆ. ಸೋಂಕಿನ ಲಕ್ಷಣ ಹೊಂದಿರುವವರು ಮತ್ತು ಸೋಂಕಿತರ ಸಂಪರ್ಕಿತರನ್ನು ಅಲ್ಲೇ ಪರೀಕ್ಷಿಸಲಾಗುವುದು. ಆರ್‌ಟಿಟಿಯಲ್ಲಿ ಸೋಂಕು ದೃಢಪಟ್ಟರೆ ಅಂಥವರನ್ನು ತಕ್ಷಣವೇ ಸ್ಥಳೀಯ ಅಥವಾ ಸಮೀಪದ ಕೋವಿಡ್ ಕೇರ್ ಕೇಂದ್ರಗಳಲ್ಲಿ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

‘ಆರೋಗ್ಯ ಇಲಾಖೆಯ ತಂಡ ಗ್ರಾಮದಲ್ಲಿ ಶಿಬಿರ ಏರ್ಪಡಿಸಿದಾಗ ಶೀತ, ಜ್ವರದ ಲಕ್ಷಣಗಳಿರುವ ಗ್ರಾಮಸ್ಥರು ಸ್ವಯಂಪ್ರೇರಣೆಯಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ದೃಢಪಟ್ಟರೆ ಧೃತಿಗೆಡಬಾರದು. ಚಿಕಿತ್ಸೆಗಾಗಿ ಸ್ಥಳೀಯವಾಗಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಆರೈಕೆ ಕೇಂದ್ರಗಳನ್ನು ಆರಂಭಿಸಲಾಗಿದೆ. ಉಚಿತವಾಗಿ ಊಟೋಪಚಾರದೊಂದಿಗೆ ಔಷಧೋಪಚಾರ ನೀಡಲಾಗುತ್ತಿದೆ’ ಎಂದು ಹೇಳಿದರು.

ಇಬ್ಬರಲ್ಲಿ ಸೋಂಕು ಪತ್ತೆ

‘ಹುಕ್ಕೇರಿ ತಾಲ್ಲೂಕಿನ ಹುಲ್ಲೋಳಿಯಲ್ಲಿ 39 ಜನರಿಗೆ ಆರ್‌ಎಟಿ ಮೂಲಕ ಕೋವಿಡ್ ಪರೀಕ್ಷೆ ನಡೆಸಿದಾಗ ಇಬ್ಬರಲ್ಲಿ ಸೋಂಕು ಪತ್ತೆಯಾಯಿತು. ಇಬ್ಬರನ್ನೂ ತಕ್ಷಣವೇ ಕೋವಿಡ್ ಕೇರ್ ಕೇಂದ್ರಕ್ಕೆ ಕಳುಹಿಸಲಾಯಿತು.‌ 37 ಮಂದಿ ವರದಿ ನೆಗೆಟಿವ್ ಬಂದಿದ್ದರೂ ಒಂದು ವೇಳೆ ಲಕ್ಷಣಗಳು ಕಂಡುಬಂದರೆ ಅಂತಹವರ ಮಾದರಿಯನ್ನು ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಕಳುಹಿಸಲಾಗುವುದು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹುಲ್ಲೋಳಿ ಗ್ರಾಮದಲ್ಲಿ ಸಂಚರಿಸಿ ಕೋವಿಡ್ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಚರ್ಚಿಸಿದ ಅವರು, ‘ಸೋಂಕಿತರ ಮನವೊಲಿಸುವ ಮೂಲಕ ಕೂಡಲೇ ಅವರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಬೇಕು’ ಎಂದರು.

ಗ್ರಾಮದಲ್ಲಿ ಸಂಚರಿಸಿ ಅರಿವು

‘ಜನರು ಅನಗತ್ಯವಾಗಿ ಯಾರೂ ಹೊರಗಡೆ ಓಡಾಡಬಾರದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಆಗಾಗ ಸಾಬೂನು ಅಥವಾ ಸ್ಯಾನಿಟೈಸರ್ ಮೂಲಕ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಜನತಾ ಕಾಲೊನಿಯಲ್ಲಿ ಹೋಂ ಐಸೊಲೇಷನ್‌ನಲ್ಲಿದ್ದ ಕೆಲ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಬಳಿಕ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಉಳ್ಳಾಗಡ್ಡಿ-ಖಾನಾಪುರದಲ್ಲಿ ಸ್ಥಾಪಿಸಿರುವ ಗಡಿ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ಹತ್ತರಗಿ ಗ್ರಾಮದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲೂ ಆರ್‌ಎಟಿ ನಡೆಸಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಎಚ್‌.ವಿ. ದರ್ಶನ್ ನೇತೃತ್ವದಲ್ಲಿ ಬೈಲಹೊಂಗಲ ತಾಲ್ಲೂಕಿನ ಗ್ರಾಮಗಳಲ್ಲಿ ಕೋವಿಡ್ ಪರೀಕ್ಷೆಗೆ ಚಾಲನೆ ನೀಡಲಾಯಿತು. ಅಂತೆಯೇ ಹೆಚ್ಚುವರಿ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪರೀಕ್ಷೆ ನಡೆಸಲಾಯಿತು. ಗ್ರಾಮ ಮಟ್ಟದಲ್ಲಿ ಇರುವ ಕಾರ್ಯಪಡೆಯ ಮೂಲಕ ಶಿಬಿರಗಳನ್ನು ನಡೆಸಲಾಗುವುದು ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT