ಮಂಗಳವಾರ, ಆಗಸ್ಟ್ 3, 2021
21 °C

ಬೆಳಗಾವಿ | ನರ್ಸ್‌, ಕಳ್ಳತನ ಆರೋಪಿ ಸೇರಿ 13 ಜನರಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕೋವಿಡ್‌–19 ರೋಗಿಗಳಿಗೆ ಶುಶ್ರೂಷ ಮಾಡುತ್ತಿದ್ದ ನರ್ಸ್‌ ಹಾಗೂ ಕಳ್ಳತನ ಪ್ರಕರಣವೊಂದರ ಆರೋಪಿಯು ಸೇರಿದಂತೆ ಜಿಲ್ಲೆಯ 13 ಜನರಲ್ಲಿ ಶುಕ್ರವಾರ ಕೋವಿಡ್‌– 19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕಿತರಾದವರ ಸಂಖ್ಯೆ 350ಕ್ಕೆ ತಲುಪಿದೆ.

ಹಲವು ತಿಂಗಳುಗಳಿಂದ ಕೋವಿಡ್‌–19 ರೋಗಿಗಳಿಗೆ ಶುಶ್ರೂಷ ಮಾಡುತ್ತಿದ್ದ ನರ್ಸ್‌ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅವರನ್ನು ತಕ್ಷಣ ಪ್ರತ್ಯೇಕ ವಾರ್ಡ್‌ನಲ್ಲಿ ಇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಕಳ್ಳತನ ಪ್ರಕರಣವೊಂದರಲ್ಲಿ ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ಬಂಧಿತನಾಗಿದ್ದ ಆರೋಪಿಯ ಗಂಟಲುದ್ರವದಲ್ಲಿಯೂ ಸೋಂಕು ದೃಢಪಟ್ಟಿದೆ. ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅವರ ಜೊತೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಒಬ್ಬ ಇನ್‌ಸ್ಪೆಕ್ಟರ್‌ ಹಾಗೂ 10 ಜನ ಸಿಬ್ಬಂದಿಗಳನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ. ಕ್ಯಾಂಪ್‌ ಪೊಲೀಸ್‌ ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ. ತಾತ್ಕಾಲಿಕವಾಗಿ, ಸಮೀಪದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಕ್ಯಾಂಪ್‌ ಠಾಣೆ ಕಾರ್ಯನಿರ್ವಹಿಸುತ್ತಿದೆ.

ನಿಶ್ಚಿತಾರ್ಥದಲ್ಲಿ ಭಾಗಿ: ಸವದತ್ತಿ ತಾಲ್ಲೂಕಿನ ಕರೀಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದ್ದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ನವಲಗುಂದ ತಾಲ್ಲೂಕಿನ ವ್ಯಕ್ತಿಯೊಬ್ಬರು ಬಂದು ಹೋಗಿದ್ದರು. ಅವರಿಗೆ ಇತ್ತೀಚೆಗೆ ಸೋಂಕು ಕಂಡುಬಂದಿತ್ತು. ಅದರ ಬೆನ್ನಲ್ಲೇ ಅವರ ಸಂಪರ್ಕಕ್ಕೆ ಬಂದಿದ್ದ ಗ್ರಾಮದ ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 8 ಜನರಲ್ಲಿ ಸೋಂಕು ದೃಢಪಟ್ಟಿದೆ. 10 ವರ್ಷದ ಬಾಲಕ ಸೇರಿದಂತೆ 60, 35, 28, 46 ವರ್ಷ ವಯಸ್ಸಿನ ಪುರುಷರು ಹಾಗೂ 14 ವರ್ಷದ ಬಾಲಕಿ ಸೇರಿದಂತೆ 35, 21, 50 ಹಾಗೂ 29 ವರ್ಷದ ಮಹಿಳೆಯರು ಇದರಲ್ಲಿ ಸೇರಿದ್ದಾರೆ. ಈ ಗ್ರಾಮವನ್ನು ಈಗ ಸೀಲ್‌ಡೌನ್‌ ಮಾಡಲಾಗಿದೆ.

9 ಜನ ಗುಣಮುಖ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ಜಿಲ್ಲೆಯ 8 ಜನರು ಹಾಗೂ ಧಾರವಾಡ ಜಿಲ್ಲೆಯ ಒಬ್ಬರು ಸೇರಿದಂತೆ ಒಟ್ಟು 9 ಜನರು ಶುಕ್ರವಾರ ಗುಣಮುಖರಾಗಿ ಬಿಡುಗಡೆಯಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು