ಮಂಗಳವಾರ, ಡಿಸೆಂಬರ್ 7, 2021
20 °C

ಯಲ್ಲಮ್ಮನಗುಡ್ಡದಲ್ಲಿ ಜೊಲ್ಲೆ ವಿಶೇಷ ಪೂಜೆ: ಮಕ್ಕಳನ್ನು ರಕ್ಷಿಸುವಂತೆ ಪ್ರಾರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಗರಗೋಳ: ‘ವಿಶ್ವವನ್ನೇ ಕಾಡುತ್ತಿರುವ ಕೋವಿಡ್‌ನಿಂದ ಮಕ್ಕಳನ್ನು ರಕ್ಷಿಸುವಂತೆ ಪ್ರಾರ್ಥಿಸಿ ಶಕ್ತಿದೇವತೆ ರೇಣುಕಾ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿದ್ದೇನೆ’ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶುಕ್ರವಾರ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಕೋವಿಡ್-19 ಅಬ್ಬರದಿಂದಾಗಿ ಎರಡು ವರ್ಷ ನಾವೆಲ್ಲರೂ ತತ್ತರಿಸಿ ಹೋಗಿದ್ದೇವೆ. ಈ ವೈರಾಣು ಬೇಗ ತೊಲಗಬೇಕು. ನಾಡಿನ ಜನರಿಗೆ ಆಯುರಾರೋಗ್ಯ ಪ್ರಾಪ್ತಿಯಾಗಬೇಕು. ಕೋವಿಡ್ 3ನೇ ಅಲೆ ಮಕ್ಕಳನ್ನು ಬಾಧಿಸದಿರಲಿ ಎಂದು ರಾಜ್ಯದಾದ್ಯಂತ ಪೂಜೆ ಸಲ್ಲಿಸಲಾಗಿದೆ. ವಿಜಯದಶಮಿ ದಿನದಂದು ಮುಜರಾಯಿ ಇಲಾಖೆಗೆ ಸೇರಿದ 35ಸಾವಿರ ದೇವಸ್ಥಾನಗಳಲ್ಲೂ ಪೂಜಾ ಕಾರ್ಯ ನಡೆದಿದೆ. ನಾಡು, ದೇಶದ ಒಳಿತಿಗೆ ಪ್ರಾರ್ಥಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದಾರೆ. ಯಲ್ಲಮ್ಮನಗುಡ್ಡ ಅಭಿವೃದ್ಧಿಗೆ ಸಂಬಂಧಿಸಿ ಹಲವು ಯೋಜನೆ ಹಾಕಿಕೊಳ್ಳುತ್ತಿದ್ದೇವೆ. ಅಭಿವೃದ್ಧಿ ಕೆಲಸಗಳ ವಿಚಾರವಾಗಿ ಅಧಿಕಾರಿಗಳು ಹಾಗೂ ಧಾರ್ಮಿಕ ಪರಿಷತ್ ಜೊತೆಗೂ ಚರ್ಚಿಸಿದ್ದೇನೆ. ಸುಧಾರಣೆ ಕಾರ್ಯಕ್ಕೆ ಇರುವ ತೊಡಕಗಳನ್ನು ನಿವಾರಿಸಲು ಪ್ರಯತ್ನ ನಡೆಯುತ್ತಿದೆ’ ಎಂದರು.

‘ಯಲ್ಲಮ್ಮನಗುಡ್ಡದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ₹ 10 ಕೋಟಿ ಮಂಜೂರಾಗಿದೆ. ತಿಂಗಳೊಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಶ್ರೀಕ್ಷೇತ್ರದಲ್ಲಿ ಗಲೀಜು ಸೃಷ್ಟಿಯಾಗದಂತೆ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ‘ರಾಜ್ಯ ಧಾರ್ಮಿಕ ಪರಿಷತ್ ಸಭೆಯನ್ನು ಶೀಘ್ರವೇ ಸವದತ್ತಿಯಲ್ಲೆ ನಡೆಸುತ್ತೇನೆ ಎಂದು ಸಚಿವರು ಹೇಳಿರುವುದು ಸ್ವಾಗತಾರ್ಹ. ಇದರಿಂದ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಅಗತ್ಯವಿರುವ ಸೌಲಭ್ಯ ಸಿಗಲಿವೆ’ ಎಂದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಯಲ್ಲಮ್ಮ ದೇವಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯ ಕೊಳ್ಳಪ್ಪಗೌಡ ಗಂದಿಗವಾಡ, ವೈ.ವೈ. ಕಾಳಪ್ಪನವರ, ಲಕ್ಷ್ಮಿ ಹೂಲಿ, ಪುಂಡಲೀಕ ಮೇಟಿ, ಇಒ ರವಿ ಕೋಟಾರಗಸ್ತಿ, ಎಇಒ ರವೀಂದ್ರ ಮಾಳಗೆ, ನಾಗರತ್ನಾ ಚೋಳಿನ, ಜ್ಯೋತಿಪ್ರಸಾದ ಜೊಲ್ಲೆ, ಪುಂಡಲೀಕ ಮೇಟಿ, ನಿಂಗನಗೌಡ ಕಾಳಿಂಗೌಡ್ರ, ಏಕನಗೌಡ ಮುದ್ದನಗೌಡ್ರ, ಪಂಡಿತ ಯಡೂರಯ್ಯ, ರಾಜಶೇಖರಯ್ಯ, ಪರಸನಗೌಡ ಕಾಳಿಂಗೌಡ್ರ, ನಿಂಗನಗೌಡ ಸಾವಕ್ಕನವರ ಇದ್ದರು.

ಬಳಿಕ ಧಾರ್ಮಿಕ ಕಾರ್ಯಕ್ರಮ ಜರುಗಿದವು. ನಾನಾ ಭಾಗಗಳಿಂದ ಬಂದಿದ್ದ ಸಹಸ್ರಾರು ಭಕ್ತರು, ದೇವಿ ದರ್ಶನ ಪಡೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು