ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಜ, ಗೊಬ್ಬರ: ರೈತರಿಗೆ ಅನುಕೂಲ ಕಲ್ಪಿಸಿ

ಅತಿವೃಷ್ಟಿ, ಬರಗಾಲ ನಿರ್ವಹಣೆಯ ಪೂರ್ವಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Published 6 ಜೂನ್ 2023, 14:36 IST
Last Updated 6 ಜೂನ್ 2023, 14:36 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮು ಆರಂಭಿಸಲಾಗಿದೆ. ರೈತರು ರಿಯಾಯಿತಿ ದರದಲ್ಲಿ ಬಿತ್ತನೆಬೀಜ ಹಾಗೂ ಗೊಬ್ಬರ ಪಡೆಯಬಹುದು. ಅಧಿಕಾರಿಗಳು ರೈತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಸೂಚಿಸಿದರು.

ಅತಿವೃಷ್ಟಿ, ಪ್ರವಾಹ ಹಾಗೂ ಬರಗಾಲ ನಿರ್ವಹಣೆಗೆ ಸಂಬಂಧಿಸಿದಂತೆ ನಗರದಲ್ಲಿ ಮಂಗಳವಾರ ನಡೆದ ಅಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘2023 ಮುಂಗಾರು ಹಂಗಾಮಿನಿಂದ ಬಿತ್ತನೆ ಬೀಜ ಹಾಗೂ ಎಲ್ಲ ಕೃಷಿ ಪರಿಕರಗಳಿಗೆ ಫ್ರೂಟ್ಸ್‌ನಲ್ಲಿ ನೋಂದಣಿ ಕಡ್ಡಾಯ ಆಗಿರುವುದರಿಂದ ರೈತ ಸಂಪರ್ಕ ಕೇಂದ್ರ ಹಾಗೂ ಹೆಚ್ಚುವರಿ ಬೀಜ ವಿತರಣೆ ಕೇಂದ್ರಗಳಲ್ಲಿ ಬೀಜ ವಿತರಣೆ ವೇಳೆ ಪ್ರತಿ ಪ್ಯಾಕೇಟ್‍ಅನ್ನು ಸ್ಕ್ಯಾನ್ ಮಾಡಿ, ಎಂಟಿಎಸ್‌ ಮತ್ತು ಇತರೆ ವಿವರಗಳನ್ನು ದಾಖಲಾದ ನಂತರ ಬೀಜ ವಿತರಣೆ ಮಾಡಲಾಗುತ್ತದೆ. ರೈತರು ಈಗಾಗಲೇ ತಂತ್ರಾಂಶದಲ್ಲಿ ತಮ್ಮ ಜಮೀನಿನ ವಿವರಗಳನ್ನು ನೀಡಿದ್ದು ಅದರಂತೆಯೇ ಬೀಜ ವಿತರಣೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 7.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ (ನೀರಾವರಿ 3.86 ಲಕ್ಷ ಹೆಕ್ಟೇರ್‌ ಹಾಗೂ ಮಳೆಯಾಶ್ರಿತ 3.24 ಲಕ್ಷ ಹೆಕ್ಟೇರ್‌) ವಿವಿಧ ಬೆಳೆಗಳ ಬಿತ್ತನೆ ಗುರಿ ಹೊಂದಲಾಗಿದೆ. ಕಬ್ಬು, ಮೆಕ್ಕೆಜೋಳ, ಸೋಯಾಬಿನ್, ಭತ್ತ ಹಾಗೂ ಹೆಸರು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. ಜಿಲ್ಲೆಯಲ್ಲಿ 35 ರೈತ ಸಂಪರ್ಕ ಕೇಂದ್ರ ಹಾಗೂ 135 ಹೆಚ್ಚುವರಿ ಬೀಜ ವಿತರಣೆ ಒಟ್ಟು 170 ಕೇಂದ್ರದಿಂದ ಸಹಾಧನದಲ್ಲಿ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಅಥಣಿ-14, ಬೈಲಹೊಂಗಲ-34, ಬೆಳಗಾವಿ-12, ಚಿಕ್ಕೋಡಿ-19, ಗೊಕಾಕ-14, ಹುಕ್ಕೇರಿ-38, ಖಾನಾಪುರ-7, ರಾಯಬಾಗ-3, ರಾಮದುರ್ಗ-11 ಹಾಗೂ ಸವದತ್ತಿ-18 ಕೇಂದ್ರಗಳಲ್ಲಿ ಈ ವರೆಗೆ 45,875 ಕ್ವಿಂಟಲ್ ಬೀಜ ದಾಸ್ತಾನು ಮಾಡಲಾಗಿದೆ.

ಪ್ರತಿ ರೈತರಿಗೆ ಸಹಾಯಧನದಡಿ ಒಟ್ಟಾರೆ ಗರಿಷ್ಟ 2 ಹೆಕ್ಟೇರ್ (5 ಎಕರೆ) ಅಥವಾ ವಾಸ್ತವಿಕ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಮಾತ್ರ ರಿಯಾಯಿತಿ ದರದಲ್ಲಿ ಬೀಜ ವಿತರಣೆ ಮಾಡಲಾಗುವುದು. 1 ಎಕರೆಗೆ 1 ಪ್ಯಾಕೇಟ್, 2 ಎಕರೆಗೆ 2 ಪ್ಯಾಕೇಟ್, 3 ಎಕರೆಗೆ 3 ಪ್ಯಾಕೇಟ್, 4 ಎಕರೆಗೆ 4 ಪ್ಯಾಕೇಟ್, 5 ಎಕರೆಗೆ 5 ಪ್ಯಾಕೇಟ್ ಹಾಗೂ 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವ ರೈತರಿಗೆ 5 ಪ್ಯಾಕೇಟ್‍ಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದರು.

ಮಾಹಿತಿ ಪ್ರದರ್ಶಿಸಿ: ‘ಆಯಾ ವಿತರಣಾ ಕೇಂದ್ರಗಳಲ್ಲಿ ಬೀಜ ಲಭ್ಯತೆ, ದರ ಹಾಗೂ ದಾಸ್ತಾನು ಕುರಿತು ಸ್ಪಷ್ಟ ಮಾಹಿತಿಯನ್ನು ಬೀಜ ವಿತರಣಾ ಕೇಂದ್ರದ ಆವರಣದಲ್ಲಿ ಕಡ್ಡಾಯವಾಗಿ ದೊಡ್ಡದಾದ ಫ್ಲೆಕ್ಸ್ ಮೂಲಕ ಪ್ರದರ್ಶಿಸಬೇಕು’ ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ಬೀಜ ವಿತರಣೆ ಆರಂಭಿಸಲಾಗಿದ್ದು, ತಹಶೀಲ್ದಾರರು, ತಾಲ್ಲೂಕುಮಟ್ಟದ ಅಧಿಕಾರಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಆಯಾ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಜಿಲ್ಲೆಯಾದ್ಯಂತ ಆರಂಭಿಸಲಾಗಿರುವ 170 ಬೀಜ ವಿತರಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ‌.ಟಿ.ಶಾಂತಲಾ, ಡಿಸಿಪಿ ಸ್ನೇಹಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೇಣುಗೋಪಾಲ್, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಪ್ರವಾಹ ಸಿದ್ಧತೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ವಿಡಿಯೊ ಸಂವಾದದ ಮೂಲಕ ಸಭೆಯಲ್ಲಿ ಪಾಲ್ಗೊಂಡರು.

ಪಟ್ಟಿ– ಬಿತ್ತನೆ ಬೀಜ ದಾಸ್ತಾನು ಬೀಜ;ದಾಸ್ತಾನು (ಕ್ವಿಂಟಲ್) ಸೋಯಾಬಿನ್‌;32850 ಭತ್ತ;1200 ಹೆಸರು;1200 ಉದ್ದು;800 ತೊಗರಿ;800 ಹೈಬ್ರಿಡ್ ಭತ್ತ;25 ಮೆಕ್ಕೆಜೋಳ;8000 ಸಜ್ಜೆ;300 ಸೂರ್ಯಕಾಂತಿ;300 ಜೋಳ;100 ಶೇಂಗಾ;300 ಒಟ್ಟು;45875

‘ಬೆಳೆಹಾನಿ; 24 ತಾಸಿನೊಳಗೆ ಸಮೀಕ್ಷೆ’ ‘ಬೆಳೆಹಾನಿ ಕುರಿತು ವರದಿ ಬಂದ ಕೂಡಲೇ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ 24 ಗಂಟೆಯಲ್ಲಿ ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು. ‘ಜಿಲ್ಲೆಯಲ್ಲಿ ಎಲ್ಲಿಯಾದರೂ ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ತಕ್ಷಣವೇ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಇದಲ್ಲದೇ ಕೊಳವೆಬಾವಿ ದುರಸ್ತಿಗೂ ಕ್ರಮ ಕೈಗೊಳ್ಳಬೇಕು’ ಎಂದರು. ‘ಕೃಷ್ಣಾ ನದಿತೀರದ ಗ್ರಾಮಗಳಲ್ಲಿ ಸಂಭವನೀಯ ಪ್ರವಾಹದ ನಿರ್ವಹಣೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಜನರ ರಕ್ಷಣೆಗಾಗಿ ಬೋಟ್‌ಗಳನ್ನು ಸುಸ್ಥಿತಿಯಲ್ಲಿ ಇಟ್ಟಿರಬೇಕು. ಮುಂಚಿತವಾಗಿಯೇ ಪ್ರಾಯೋಗಿಕವಾಗಿ ಪರಿಶೀಲಿಸಬೇಕು’ ಎಂದು ತಿಳಿಸಿದರು. ‘ಎಲ್ಲ ತಾಲ್ಲೂಕುಗಳಲ್ಲಿ ಕಂಟ್ರೋಲ್‌ ರೂಮ್ ಸ್ಥಾಪಿಸಿ ಸರದಿ ಆಧಾರದ ಮೇಲೆ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರ ಕರೆಗಳಿಗೆ ತುರ್ತಾಗಿ ಸ್ಪಂದಿಸಬೇಕು. ಕಾಳಜಿ ಕೇಂದ್ರ ಭೇಟಿ ನೀಡಿ‌ ಪರಿಶೀಲಿಸಬೇಕು. ತುರ್ತು ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಿರಬೇಕು. ಯಾವುದೇ ಕಾರಣಕ್ಕೂ ತಹಶೀಲ್ದಾರರು ಹಾಗೂ ಅಧಿಕಾರಿಗಳು ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನದಿಂದ ಹೊರಗೆ ಹೋಗುವಂತಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT