ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | ಅರ್ಥವಿಲ್ಲದ ‘ಸಂವಹನ ಹಕ್ಕು’

ಶೇ 15ಕ್ಕಿಂತ ಹೆಚ್ಚಿರುವ ಭಾಷಾ ಅಲ್ಪಸಂಖ್ಯಾತರಿಗೂ ಮಾನ್ಯತೆ: ಆದೇಶ ಇಲ್ಲ
Last Updated 29 ಜೂನ್ 2022, 20:30 IST
ಅಕ್ಷರ ಗಾತ್ರ

ಬೆಳಗಾವಿ: ಯಾವುದೇ ಪ್ರದೇಶದಲ್ಲಿ ಭಾಷಾ ಅಲ್ಪಸಂಖ್ಯಾತರು ಶೇಕಡ 15ಕ್ಕಿಂತ ಹೆಚ್ಚಿದ್ದರೆ, ಅವರ ಭಾಷೆಗೂ ಆದ್ಯತೆ ಕೊಡಬೇಕು ಎಂಬ ಆದೇಶವನ್ನು, ಎರಡು ದಶಕಗಳ ಹಿಂದೆಯೇ ರಾಜ್ಯ ಸರ್ಕಾರ ಹಿಂದಕ್ಕೆ ಪಡೆದಿದೆ. ಹೀಗಾಗಿ ಎಂಇಎಸ್‌ ಮುಖಂಡರು ಎತ್ತಿರುವ ‘ಸಂವಹನ ಹಕ್ಕು’ ಹೋರಾಟಕ್ಕೆ ಕವಡೆ ಕಾಸಿನ ಕಿಮ್ಮತ್ತೂ ಉಳಿದಿಲ್ಲ.

ಬೆಳಗಾವಿ, ನಿಪ್ಪಾಣಿ, ಖಾನಾಪುರ ಸೇರಿದಂತೆ ಹಲವು ನಗರ– ಪಟ್ಟಣಪ್ರದೇಶಗಳಲ್ಲಿ ಮರಾಠಿಗರು ಹೆಚ್ಚಿದ್ದಾರೆ. ಆದ್ದರಿಂದ ಈ ಎಲ್ಲ ಕಡೆಗಳಲ್ಲೂ ಮರಾಠಿ ಫಲಕಗಳನ್ನು ಅಳವಡಿಸ
ಬೇಕು, ಸರ್ಕಾರದ ಎಲ್ಲ ಪ್ರಕಟಣೆಗಳನ್ನು ಮರಾಠಿಯಲ್ಲೂ ನೀಡಬೇಕು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಈಗ ಪುಕಾರು ಹಾಕಿದೆ.

‘ಮರಾಠಿಯಲ್ಲಿ ನಾಮಫಲಕ ಹಾಕಲು ಅವಕಾಶ ಕೊಡದಿದ್ದರೆ ಕನ್ನಡ ಫಲಕಗಳನ್ನೂ ಕಿತ್ತೆಸೆಯುತ್ತೇವೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಯಾನ ಕೂಡ ನಡೆಸಿದ್ದರು. ಈ ರೀತಿಯ ನಾಡದ್ರೋಹಿ ಹೇಳಿಕೆ ಕೊಟ್ಟವರು ಈಗ ಕಂಬಿ ಹಿಂದಿದ್ದಾರೆ.

ಆದೇಶದ ಅರಿವು ಇಲ್ಲದ ಮುಖಂಡರು: ‘ಭಾಷಾ ಅಲ್ಪಸಂಖ್ಯಾತರು ಶೇ 15 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಸರ್ಕಾರದ ಆದೇಶಗಳು, ಅಧಿಸೂಚನೆಗಳು, ನಿಯಮಗಳನ್ನು ಕನ್ನಡ ಹಾಗೂ ಇಂಗ್ಲಿಷ್‌ ಜತೆಗೆ ಅಲ್ಪಸಂಖ್ಯಾತರ ಭಾಷೆಯಲ್ಲೂ ನೀಡಬೇಕು’ ಎಂದು ರಾಜ್ಯ ಸರ್ಕಾರ 2003ರಲ್ಲಿ ಆದೇಶ ಹೊರಡಿಸಿತ್ತು. ಇದೇ ಆದೇಶ ಪತ್ರವನ್ನು ಉಲ್ಲೇಖಿಸಿರುವ ಎಂಇಎಸ್‌ ಮುಖಂಡರು ಹೋರಾಟ ಚುರುಕುಗೊಳಿಸಿದ್ದಾರೆ.

ಆದರೆ, ಈ ಆದೇಶವನ್ನು ಮಾರನೇ ವರ್ಷವೇ, ಅಂದರೆ 2004ರ ಮೇ 6ರಂದು ಹಿಂಪಡೆಯಲಾಗಿದೆ. ಮರುಪರಿಶೀಲನೆ ಹಾಗೂ ಆಕ್ಷೇಪಗಳ ಹಿನ್ನೆಲೆಯಲ್ಲಿ ಇದನ್ನು ಹಿಂಪಡೆದಿದ್ದಾಗಿ ಆಗಿನ ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಕೃಷ್ಣಮೂರ್ತಿ ಅವರು ಹೊರಡಿಸಿದ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸ
ಲಾಗಿದೆ.

ಇದರ ಕನಿಷ್ಠ ತಿಳಿವಳಿಕೆ ಇಲ್ಲದೇ ಎಂಇಎಸ್‌ ಮುಖಂಡರು ಮೊಂಡು ವಾದಕ್ಕೆ ನಿಂತಿದ್ದು ಸ್ಪಷ್ಟವಾಗುತ್ತದೆ.

ಗಡಿ ಕನ್ನಡಿಗರ ಹೋರಾಟದ ಫಲ: ದಶಕಗಳ ಹಿಂದೆ ಬೆಳಗಾವಿ ನಗರದಲ್ಲಿ ಬಹುಪಾಲು ಮಳಿಗೆಗಳ ಫಲಕ ಇಂಗ್ಲಿಷ್‌ ಹಾಗೂ ಮರಾಠಿಯಲ್ಲೇ ಇದ್ದವು. ಆದರೆ, ಗಡಿ ಕನ್ನಡಿಗರ ಸಾಂಘಿಕ ಹೋರಾಟದ ಫಲವಾಗಿ ಕನ್ನಡ ಫಲಕಗಳನ್ನೂ ಕಡ್ಡಾಯವಾಗಿ ಹಾಕುವಂತಾಗಿದೆ.

ಕನ್ನಡ ನೆಲದಲ್ಲೇ ಕನ್ನಡ ಬಾವುಟ, ಕನ್ನಡ ಫಲಕಗಳನ್ನು ಸಹಿಸಿಕೊಳ್ಳದ ಎಂಇಎಸ್‌ ಮುಖಂಡರನ್ನು ಮರಾಠಿಗರೇ ಈಗ ಕೈಬಿಟ್ಟಿದ್ದಾರೆ. ಹೀಗಾಗಿ, ಅವರುಪುಷ್ಟಿ ನೀಡಿದ್ದ ಸಂವಹನ ಅಭಿಯಾನಕ್ಕೆ ಬೆರಳೆಣಿಕೆ
ಯಷ್ಟು ಜನ ಮಾತ್ರ ಸೇರಿದರು.

*

‘ಸಾಮರಸ್ಯದ ಸುಖ’ಕ್ಕೆ ಅಡ್ಡಗಾಲು

‘ಬೆಳಗಾವಿ ನಗರದಲ್ಲಿ ಈಗಲೂ ಹಲವು ವೃತ್ತ, ಚೌಕ, ರಸ್ತೆ, ಉದ್ಯಾನಗಳು ಮರಾಠಿ ಹೆಸರಿನಲ್ಲೇ ಇವೆ. ಛತ್ರಪತಿ ಶಿವಾಜಿ ಉದ್ಯಾನ,ಧರ್ಮವೀರ ಸಂಭಾಜಿ ಸರ್ಕಲ್‌, ತಿಲಕವಾಡಿ, ಜೀಜಾಮಾತಾ ನಗರ ಅಷ್ಟೇ ಏಕೆ ‘ಸಂಯುಕ್ತ ಮಹಾರಾಷ್ಟ್ರ ಚೌಕ’ ಹೆಸರೂ ಇನ್ನೂ ಅನಧಿಕೃತವಾಗಿ ಬಳಕೆಯಲ್ಲಿದೆ. ಮರಾಠರ ಇತಿಹಾಸವನ್ನು ಆಪ್ತವಾಗಿ ಸ್ವೀಕರಿಸಿದ ಕನ್ನಡಿಗರು ಯಾವುದನ್ನೂ ಬದಲಾಯಿಸುವ ಕೀಳು ರಾಜಕಾರಣ ಮಾಡಿಲ್ಲ’ಎನ್ನುತ್ತಾರೆ ಹಿರಿಯ ಕನ್ನಡ ಹೋರಾಟಗಾರ ಅಶೋಕ ಚಂದರಗಿ.

ಕನ್ನಡ– ಮರಾಠಿಗರ ಈ ‘ಸಾಮರಸ್ಯದ ಸುಖ’ವೇ ಎಂಇಎಸ್‌ ಮುಖಂಡರಿಗೆ ಬಿಸಿತುಪ್ಪವಾಗಿದೆ.

‘ಜತ್ತ, ಅಕ್ಕಲಕೋಟ, ಗಡಹಿಂಗ್ಲಜ, ಉಸ್ಮಾನಾಬಾದ್‌ ಸೇರಿದಂತೆ ಮಹಾರಾಷ್ಟ್ರದ ಹಲವು ನಗರ‍– ಪಟ್ಟಣಗಳಲ್ಲಿ ಶೇ 40ರಷ್ಟು,ಸೊಲ್ಲಾ‍ಪುರದಲ್ಲಿ ಶೇ 70ರಷ್ಟು ಕನ್ನಡಿಗರೇ ಇದ್ದಾರೆ. ಅಲ್ಲಿಯೂ ಕನ್ನಡ ಫಲಕ, ಕನ್ನಡದಲ್ಲಿ ಸರ್ಕಾರಿ ಪ್ರಕಟಣೆ ಕೊಡಿಸಲು ಎಂಇಎಸ್‌ ಪುಂಡರಿಗೆ ಸಾಧ್ಯವೇ’ ಎಂಬ ಪ್ರಶ್ನೆ ಕನ್ನಡಪರ ಸಂಘಟನೆಗಳದ್ದು.

‘ಮಹಾರಾಷ್ಟ್ರದಲ್ಲಿ ನೆಪಮಾತ್ರಕ್ಕೂ ಒಂದೇ ಒಂದು ಕನ್ನಡ ಫಲಕ ಕಾಣಿಸುವುದಿಲ್ಲ. ಕನ್ನಡಿಗರು ತಮ್ಮ ಮನೆಗಳಿಗೂ ಮರಾಠಿಯಲ್ಲೇ ಹೆಸರು ಬರೆಸಿದ್ದಾರೆ. ಆದರೆ, ರಾಜ್ಯದಲ್ಲಿ ಮರಾಠಿಗರಿಗೆ ಇಂಥ ಕಠಿಣ ಅಸ್ತ್ರ ಬಳಸಿಲ್ಲ. ಇಷ್ಟೆಲ್ಲದರ ಆಚೆಗೂ ‘ಆಕ್ರಮಣಕಾರಿ’ ಹೆಜ್ಜೆ ಇಡುವುದು ನೀತಿವಂತರ ನಡೆಯಲ್ಲ’ ಎನ್ನುತ್ತಾರೆ ಅಶೋಕ ಚಂದರಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT