ಮಂಗಳವಾರ, ಜುಲೈ 5, 2022
25 °C
ನಕಲಿ ಕೀ ಬಳಸಿ ₹ 6 ಕೋಟಿ ಮೌಲ್ಯದ ಸ್ವತ್ತು ಕದ್ದಿದ್ದ ಪ್ರಕರಣ

ಕಳವು: ಡಿಸಿಸಿ ಬ್ಯಾಂಕ್‌ ಕ್ಲರ್ಕ್‌ ಸೇರಿ ಮೂವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಡಿಸಿಸಿ ಬ್ಯಾಂಕ್‌ ಸವದತ್ತಿ ತಾಲ್ಲೂಕು ಮುರಗೋಡ ಶಾಖೆಯಲ್ಲಿ ₹ 4.37 ಕೋಟಿ ನಗದು, ₹ 1.63 ಕೋಟಿ ಮೌಲ್ಯದ 3 ಕೆ.ಜಿ. 184 ಗ್ರಾಂ. ಚಿನ್ನಾಭರಣವನ್ನು ಕಳವು ಮಾಡಿದ್ದ ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಬ್ಯಾಂಕ್‌ನ ಕ್ಲರ್ಕ್‌ ಸೇರಿದಂತೆ ಮೂವರು ಆರೋಪಿಗಳನ್ನು ಭಾನುವಾರ ಬಂಧಿಸಿದ್ದಾರೆ.

ಮುರಗೋಡ ಶಾಖೆಯಲ್ಲೆ ಕ್ಲರ್ಕ್‌ ಆಗಿದ್ದ ರಾಮದುರ್ಗ ತಾಲ್ಲೂಕು ತೋರಣಗಟ್ಟಿ ಗ್ರಾಮದ ಬಸವರಾಜ ಸಿದ್ಧಲಿಂಗಪ್ಪ ಹುಣಶೀಕಟ್ಟಿ (30) ಪ್ರಮುಖ ಆರೋಪಿಯಾಗಿದ್ದಾರೆ. ಅವರ ಸ್ನೇಹಿತರಾದ ಯರಗಟ್ಟಿಯ ಸಂತೋಷ ಕಾಳಪ್ಪ ಕಂಬಾರ (31) ಮತ್ತು ಸವದತ್ತಿ ತಾಲ್ಲೂಕಿನ ಜೀವಾಪುರ ಗ್ರಾಮದ ಗಿರೀಶ ಉರ್ಫ್‌ ಯಮನಪ್ಪ ಲಕ್ಷ್ಮಣ ಬೆಳವಲ (26) ಇತರ ಆರೋಪಿಗಳು. ಮಾರ್ಚ್‌ 5ರ ತಡರಾತ್ರಿಯಿಂದ ಮಾರ್ಚ್‌ 6ರ ಬೆಳಗಿನ ಅವಧಿಯಲ್ಲಿ ಕಳವು ನಡೆದಿತ್ತು.

ಬಂಧಿತರಿಂದ ₹ 4.20 ಕೋಟಿ ನಗದು, ₹ 1,63 ಕೋಟಿ ಮೌಲ್ಯದ 3 ಕೆ.ಜಿ. 184 ಗ್ರಾಂ. ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಕಾರ್ ಮತ್ತು ದ್ವಿಚಕ್ರವಾಹನವನ್ನು ಮುರಗೋಡ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

‘ಆರೋಪಿಗಳು, ಹಣ ಮತ್ತು ಚಿನ್ನಾಭರಣವನ್ನು ಕಬ್ಬಿನ ಗದ್ದೆಯಲ್ಲಿ ಹೂತಿಟ್ಟಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ನಕಲಿ ಕೀ ಬಳಸಿ ಬ್ಯಾಂಕ್‌ನ ಶೆಟರ್ಸ್, ಬಾಗಿಲು, ಸ್ಟ್ರಾಂಗ್ ರೂಂ ಹಾಗೂ ಲಾಕರ್‌ಗಳನ್ನು ತೆಗೆದು ಕಳವು ಮಾಡಲಾಗಿದೆ. ₹6ಸಾವಿರ ಮೌಲ್ಯದ, ಸಿಸಿಟಿವಿ ಕ್ಯಾಮೆರಾದ ಡಿವಿಆರ್‌ ಅನ್ನೂ ಕಳ್ಳರು  ಹೊತ್ತೊಯ್ದಿದ್ದಾರೆ. ಕಳವಾದ ಸ್ವತ್ತುಗಳ ಮೌಲ್ಯ ಒಟ್ಟು ₹ 6.01 ಕೋಟಿ ಆಗುತ್ತದೆ ಎಂದು ಅಂದಾಜಿಸಲಾಗಿದೆ’ ಎಂದು ಹಿರಿಯ ಶಾಖಾ ವ್ಯವಸ್ಥಾಪಕ ಪ್ರಮೋದ ಯಲಿಗಾರ ನೀಡಿದ್ದ ದೂರಿನ ಮೇರೆಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಲಕ್ಷ್ಮಣ ನಿಂಬರಗಿ ತನಿಖೆಗಾಗಿ 4 ತಂಡಗಳನ್ನು ರಚಿಸಿದ್ದರು. ಎಸ್ಪಿ ಮಾರ್ಗದರ್ಶನ, ಹೆಚ್ಚುವರಿ ಎಸ್‌ಪಿ ಮಹಾಲಿಂಗ ನಂದಗಾವಿ ಹಾಗೂ ರಾಮದುರ್ಗ ಡಿಎಸ್‌ಪಿ ರಾಮನಗೌಡ ಹಟ್ಟಿ ನೇತೃತ್ವದಲ್ಲಿ ಸಿಪಿಐಗಳಾದ ಮೌನೇಶ್ವರ ಮಾಲಿಪಾಟೀಲ, ಯು.ಎಸ್. ಸಾತೇನಹಳ್ಳಿ, ವೀರೇಶ ದೊಡಮನಿ, ಪಿಎಸ್‌ಐ ಪ್ರವೀಣ ಗಂಗೋಳ, ಶಿವಾನಂದ ಗುಡಗನಟ್ಟಿ, ಶಿವಾನಂದ ಕಾರಜೋಳ, ಬಸಗೌಡ ನೇರ್ಲಿ, ಚಾಂದಬೀ ಗಂಗಾವತಿ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು