ಶುಕ್ರವಾರ, ಮೇ 27, 2022
23 °C

ರೈಲು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ‘ಈ ಭಾಗದ ಬಹು ದಿನಗಳ ಬೇಡಿಕೆಯಾಗಿರುವ ಶೇಡಬಾಳ-ಅಥಣಿ-ವಿಜಯಪುರ ರೈಲು ಮಾರ್ಗದ ಯೋಜನೆ ಅನುಷ್ಠಾನಕ್ಕೆ ಫೆ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‍ನಲ್ಲಿ  ಆರ್ಥಿಕ ಅನುಮೋದನೆ ಪಡೆಯಲು ಸಂಸದರು ಒತ್ತಡ ಹೇರಬೇಕು’ ಎಂದು ಆಗ್ರಹಿಸಿ ಇಲ್ಲಿನ ಮಾಜಿ ಸೈನಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ನಿವೃತ್ತ ಸೈನಿಕ ಬಸವರಾಜ ರೊಟ್ಟಿ ಮಾತನಾಡಿ, ‘ವಾಜಪೇಯಿ ನೇತೃತ್ವದ ಸರ್ಕಾರ ಇದ್ದಾಗ ಈ ಮಾರ್ಗದ ಯೋಜನೆಗೆ ಚಾಲನೆ ದೊರೆತಿತ್ತು. ಆದರೆ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ
ನಿರ್ಲಕ್ಷದಿಂದಾಗಿ ನನೆಗುದಿಗೆ ಬಿದ್ದಿದೆ’ ಎಂದು ತಿಳಿಸಿದರು.

‘ಯುಪಿಎ ಸರ್ಕಾರದಲ್ಲಿ 2010-11ನೇ ಸಾಲಿನ ಬಜೆಟ್‍ನಲ್ಲಿ ಪ್ರಸ್ತಾಪವಾಗಿ ವಿಜಯಪುರ-ಅಥಣಿ-ಶೇಡಬಾಳ ರೈಲು ಯೋಜನೆಯ ಮಾರ್ಗ ಸರ್ವೆ ಕಾರ್ಯ ಪೂರ್ಣಗೊಂಡಿತ್ತಾದರೂ ಆರ್ಥಿಕ ಅನುಮೋದನೆ ದೊರೆಯಲಿಲ್ಲ. ಸಂಸದರು ಈ ಯೋಜನೆಯ ಪರವಾಗಿ ದನಿ ಎತ್ತಬೇಕು. ಇಲ್ಲದಿದ್ದರೆ ಹಳ್ಳಿ ಹಳ್ಳಿಗಳಲ್ಲಿ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ನಿವೃತ್ತ ಸೈನಿಕ ಶಿವಯೋಗಿ ಹತ್ತಿ, ‘ಈ ಮಾರ್ಗದ ನಿರ್ಮಾಣದಿಂದ 150 ಕಿ.ಮೀ. ಅಂತರ ಕಡಿಮೆ ಆಗುತ್ತದೆ. ಕನಿಷ್ಠ 7 ಗಂಟೆ ಸಮಯ ಹಾಗೂ ಖರ್ಚು ಉಳಿತಾಯ ಮಾಡಬಹುದು. ಸೈನಿಕರು ವಿವಿಧ ರಾಜ್ಯಗಳಿಂದ ನೇರವಾಗಿ ಬರಲು ಅನುಕೂಲವಾಗುತ್ತದೆ’ ಎಂದರು,

ನಿವೃತ್ತ ಸೈನಿಕರಾದ ಸುಭಾಸ ಖೊಬ್ರಿ, ನಬಿಸಾಬ ಕರಜಗಿ, ಹುಸೇನಸಾಬ ಮುಜಾವರ, ಮುನ್ನಾ ಕರಜಗಿ, ಬಸವರಾಜ ಬಿಜ್ಜರಗಿ, ಶಿವಾನಂದ ಬಿಜ್ಜರಗಿ, ಚಂದಪ್ಪ ಬಿಜ್ಜರಗಿ, ಗ್ಯಾನುಬಾ ನಲವಡೆ, ತುಕಾರಾಮ ಮೋರೆ, ಸುಧಾಕರ ಕುಲಕರ್ಣಿ, ಮಹ್ಮದ ಮುಲ್ಲಾ, ಸಿದ್ದಲಿಂಗ ಮಾದರ, ಗುಂಡು ಪವಾರ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.