ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಬೆಚ್ಚಿ ಬೀಳಿಸಿದ್ದ ತ್ರಿವಳಿ ಕೊಲೆ, ಆರೋಪಿ ನಿರ್ದೋಷಿಯಾಗಿದ್ದು ಏಕೆ?

ಪ್ರತ್ಯಕ್ಷ ಸಾಕ್ಷ್ಯ ಕೇಳಿದ ಹೈಕೋರ್ಟ್
Last Updated 23 ಜೂನ್ 2022, 7:55 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಕುವೆಂಪು ನಗರದಲ್ಲಿ ಗೃಹಿಣಿ ಹಾಗೂ ಅವರ ಇಬ್ಬರು ಮಕ್ಕಳನ್ನು ಪ್ರವೀಣ್ ಭಟ್ಅವರೇ ಕೊಲೆ ಮಾಡಿದ್ದು ಎನ್ನುವುದಕ್ಕೆ ಪ್ರತ್ಯಕ್ಷ ಸಾಕ್ಷ್ಯ ಕೇಳಿದ ಧಾರವಾಡ ಹೈಕೋರ್ಟ್ ಪೀಠವು, ಸಾಕ್ಷ್ಯ ಕೊರತೆಯ ಕಾರಣ ನೀಡಿ ಆರೋಪಿಯನ್ನುದೋಷ ಮುಕ್ತಗೊಳಿಸಿದೆ.

‘ಪ್ರಜಾವಾಣಿ’ಗೆ ಈ ಬಗ್ಗೆ ಮಾಹಿತಿನೀಡಿದ ಆರೋಪಿ ಪರ ವಕೀಲ ಪ್ರವೀಣ್ ಕರೋಶಿ ಅವರು, ‘ತುಂಬ ಗಂಭೀರವಾದ ಈ ಪ್ರಕರಣದಲ್ಲಿ ಹೈಕೋರ್ಟ್ ದ್ವಿಸದಸ್ಯ ಪೀಠವು ಮಹತ್ವದ ತೀರ್ಪು ನೀಡಿದೆ. ದೂರುದಾರರಿಂದ ಸಮರ್ಥನೀಯ ಹಾಗೂ ಪ್ರತ್ಯಕ್ಷ ಸಾಕ್ಷ್ಯ ಒದಗಿಸಲು ಆಗಿಲ್ಲ. ನನ್ನ ಕಕ್ಷಿದಾರ ಪ್ರವೀಣ್ಭಟ್ ಮಂಗಳವಾರ ಬಿಡುಗಡೆ ಆಗಿದ್ದಾರೆ’ಎಂದರು.

‘ಕೊಲೆ ನಡೆದ ಜಾಗದಲ್ಲಿ ಕೊಲೆಯಾದವರ ಜತೆಗೆ ಆರೋಪಿಯ ರಕ್ತದ ಕಲೆಗಳು, ಚಾಕುವಿನ ಮೇಲೆ ಅವರ ಬೆರಳಿನ ಗುರುತು, ನೆಲದ ಮೇಲೆ ಹೆಜ್ಜೆ ಗುರುತು ಸಿಕ್ಕಿವೆ ಎಂದು ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಆರೋಪಿ ಪ್ರವೀಣ್ ಹಾಗೂ ಗೃಹಿಣಿ ರೀನಾ ಅವರಿಗೆ ಕೊನೆಯದಾಗಿ ಮೊಬೈಲ್ ಕರೆ ಮಾಡಿ ಮಾತನಾಡಿದ್ದಾರೆ ಎನ್ನುವುದನ್ನೂ ಸಾಕ್ಷ್ಯ ಮಾಡಲಾಗಿತ್ತು. 2015ರಲ್ಲಿ ಘಟನೆ ನಡೆದಿದೆ. ಇದಿಷ್ಟು ಸಾಕ್ಷ್ಯಾಧಾರ ಪರಿಗಣಿಸಿ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತ್ತು. ಆದರೆ, ಆರೋಪಿ ಮೇಲಿನ ಸಾಕ್ಷ್ಯಾಧಾರಗಳು ಒಂದಕ್ಕೊಂದು ತಾಳೆ ಆಗಲಿಲ್ಲ. ಈ ಬಗ್ಗೆ ಹೈಕೋರ್ಟನಲ್ಲಿ ಸಮರ್ಥನೀಯ ವಾದ ಮಂಡಿಸಲಾಯಿತು. ಹಾಗಾಗಿ, ಹೈಕೋರ್ಟ್ ಪ್ರತ್ಯಕ್ಷ ಸಾಕ್ಷ್ಯಾಧಾರ ಕೇಳಿತು’ಎಂದು ಅವರು ವಿವರಿಸಿದರು.

ಸರ್ಕಾರದ ಪರವಾಗಿ ಅನುರಾಧ ದೇಶಪಾಂಡೆ ಅವರು ವಾದ ಮಂಡಿಸಿದರು.

ಜನ್ಮದಿನದ ಸಂಭ್ರಮದಲ್ಲೇ ನಡೆದಿತ್ತು ಕೊಲೆ:ಕೊಲೆಗೆ ಸಂಬಂಧಿಸಿದಂತೆ ಪೊಲೀಸರು 514 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

‘ಬೆಳಗಾವಿಯ ಕುವೆಂಪು ನಗರದಲ್ಲಿ ವಾಸವಾಗಿದ್ದ ರೀನಾ ಮಾಲಗತ್ತಿ ಹಾಗೂ ಯುವಕ ಪ್ರವೀಣ್ ಭಟ್ ನಡುವೆ ಸ್ನೇಹ ಸಲುಗೆ ಬೆಳೆದಿತ್ತು. ಎರಡು ವರ್ಷದವರೆಗೆ ಇಬ್ಬರ ಮಧ್ಯೆ ಅನೈತಿಕ ಸಂಬಂಧ ಮುಂದುರಿದಿತ್ತು. ಬಳಿಕ ಪ್ರವೀಣ್ ಅಂತರ ಕಾಯ್ದುಕೊಳ್ಳಲು ಯತ್ನಿಸಿದ. ಇದರಿಂದ ಕೋಪಗೊಂಡ ರೀನಾ ತಕರಾರು ತೆಗೆದರು. ತನ್ನಿಂದ ದೂರಾದರೆ ಅನೈತಿಕ ಸಂಬಂಧದ ಸಂಗತಿಯನ್ನು ಬಹಿರಂಗ ಮಾಡುತ್ತೇನೆ ಎಂದೂ ಬೆದರಿಸಿದ್ದರು. ಕೊಲೆಗೆ ಇದು ಕಾರಣವೆಂದು ನಮೂದಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು’ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ರೀನಾ ಕೊಲೆಯಾದ ದಿನವೇ ಪ್ರಿಯಕರ ಪ್ರವೀಣ್ ಜನ್ಮದಿನವಿತ್ತು. ಸ್ನೇಹಿತರೊಂದೆಗೆ ಪಾರ್ಟಿ ಮುಗಿಸಿಕೊಂಡು ಬಂದಿದ್ದ ಪ್ರವೀಣ್ಗೆ ರೀನಾ ತಡರಾತ್ರಿ ಟೆರೆಸ್ ಮೇಲೆ ಬಂದು ಶುಭಾಶಯ ಹೇಳಿದ್ದರು. ಬಹಳ ಹೊತ್ತು ಇಬ್ಬರೂ ಮಾತನಾಡಿದ ಬಳಿಕ ಪ್ರವೀಣ್ ಮನೆಗೆ ಮರಳಿದ್ದ. ಬೇರೊಂದು ಯುವತಿ ಜತೆಗೆ ಮದುವೆಯಾಗಿ ಜೀವನ ಕಟ್ಟಿಕೊಳ್ಳಲು ರೀನಾ ಅಡ್ಡಗಾಲು ಹಾಕಬಹುದು ಎಂಬ ಭಯ ಪ್ರವೀಣ್ಗಿತ್ತು. ಹೀಗಾಗಿ ಪ್ರಿಯತಮೆಯನ್ನು ಮುಗಿಸಲು ನಿರ್ಧರಿಸಿದ್ದ’ಎಂಬುದೂ ದೋಷಾರೋಪ ಪಟ್ಟಿಯಲ್ಲಿದೆ.

‘2015ರ ಆಗಸ್ಟ್ 16ರಂದು ನಸುಕಿನ 3ಕ್ಕೆ ರೀನಾ ಅವರ ಬೆಡ್ ರೂಮಿಗೆ ಬಂದ ಆರೋಪಿ ಚಾಕುವಿನಿಂದ ಕತ್ತು ಸೀಳಿದ್ದ. ರೀನಾ ಕೂಗಾಟ ಕೇಳಿ ಮಕ್ಕಳೂ ಎಚ್ಚರಗೊಂಡಿದ್ದರು. ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಮಗ ಆದಿತ್ಯಾ ಹಾಗೂ ಮಗಳು ಸಾಹಿತ್ಯ ಅವರ ಕತ್ತು ಹಿಸುಕಿ, ಕಾಲಲ್ಲಿ ತುಳಿದು ಕೊಲೆ ಮಾಡಲಾಗಿದೆ’ಎಂಬ ಆರೋಪವನ್ನು ಪ್ರವೀಣ್ ಮೇಲೆ ಹೊರಿಸಲಾಗಿತ್ತು.

ಪೊಲೀಸರ ವಿಚಾರಣೆ ಕಾಲಕ್ಕೆ ಆರೋಪಿ ತನ್ನ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ. ಇದೆಲ್ಲ ವಿಚಾರಣೆ ನಡೆಸಿ, 2018ರಲ್ಲಿ ಏಪ್ರಿಲ್ 16ರಂದು ಪ್ರವೀಣಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

ಈಗ ಹೈಕೋರ್ಟ್‌ನಿಂದಲೇ ಪ್ರವೀಣ್ ದೋಷಮುಕ್ತರಾದ ಹಿನ್ನೆಲೆಯಲ್ಲಿ ಪ್ರಕರಣ ದೊಡ್ಡ ತಿರುವ ಪಡೆದಿದೆ.

ಬೆಳಗಾವಿಯಲ್ಲಿ 2015ರಲ್ಲಿ ಗೃಹಿಣಿ ಹಾಗೂ ಅವರ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆ ಮಾಡಿದ ಆರೋಪದಡಿ ಬಂಧಿತರಾದ ಪ್ರವೀಣ್ ಭಟ್ (ಸಂಗ್ರಹ ಚಿತ್ರ)
ಬೆಳಗಾವಿಯಲ್ಲಿ 2015ರಲ್ಲಿ ಗೃಹಿಣಿ ಹಾಗೂ ಅವರ ಇಬ್ಬರು ಪುಟ್ಟ ಮಕ್ಕಳನ್ನು ಕೊಲೆ ಮಾಡಿದ ಆರೋಪದಡಿ ಬಂಧಿತರಾದ ಪ್ರವೀಣ್ ಭಟ್ (ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT