ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಶೀಲತೆ ಮಾರ್ಗದರ್ಶನಕ್ಕೆ ‘ದಿಶಾ’ ಕೇಂದ್ರ

ಉದ್ಯಮಬಾಗ್‌ನಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಆರಂಭ
Last Updated 25 ಅಕ್ಟೋಬರ್ 2018, 8:56 IST
ಅಕ್ಷರ ಗಾತ್ರ

ಬೆಳಗಾವಿ: ಉದ್ಯಮ ಆರಂಭಿಸಲು ಬಯಸುವವರಿಗೆ ನೆರವಾಗುವ ನಿಟ್ಟಿನಲ್ಲಿ ಇಲ್ಲಿನ ಉದ್ಯಮಬಾಗ್‌ನಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಸ್ಥಾಪಿಸಿರುವ ‘ದಿಶಾ’ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರವನ್ನು ಗುರುವಾರ ಉದ್ಘಾಟಿಸಲಾಯಿತು.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ‌ ಜೀವನೋಪಾಯ ಇಲಾಖೆ, ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ, ಸಂಯುಕ್ತ ರಾಷ್ಟ್ರಗಳ ಅಭಿವೃದ್ಧಿ ಸಂಸ್ಥೆ (ಯುಎನ್‌ಡಿಪಿ), ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರದ ವತಿಯಿಂದ ಆರಂಭಿಸಿರುವ ಕೇಂದ್ರವನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಮಹಾಂತೇಶ ಕರೂರ ಉದ್ಘಾಟಿಸಿದರು.

ನಂತರ ಮಾತನಾಡಿ, ‘ಎಲ್ಲ ಕಡೆಯೂ ಕೈಗಾರಿಕಾ ಇಲಾಖೆ ಇರಲು ಸಾಧ್ಯವಿಲ್ಲ. ಹೀಗಾಗಿ, ದಿಶಾ ಉದ್ಯಮಶೀಲತಾ ಮಾರ್ಗದರ್ಶನ ಕೇಂದ್ರವನ್ನು ಸರ್ಕಾರವು ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸುತ್ತಿದೆ. ಒಂದೇ ಸೂರಿನಡಿ ಎಲ್ಲ ಮಾಹಿತಿಯನ್ನೂ ಇಲ್ಲಿ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆ ಆರಂಭಿಸುವವರಿಗೂ ಮಾರ್ಗದರ್ಶನ ಮಾಡಲಾಗುವುದು. ಸೌಲಭ್ಯಗಳನ್ನು ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‌ಯಾರು ಬೇಕಾದರೂ:

‘ದೊಡ್ಡ ಕಾರ್ಖಾನೆಯನ್ನು ಮಾತ್ರವೇ ಉದ್ಯಮ ಎಂದು ಭಾವಿಸುತ್ತಿದ್ದ ಕಾಲ ಈಗಿಲ್ಲ. ಕುಲಕಸುಬು ಮಾಡುವುದನ್ನೂ ಈಗ ಕೈಗಾರಿಕೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದಕ್ಕಾಗಿ ಸರ್ಕಾರದಿಂದ ಹಲವು ಯೋಜನೆಗಳ ಮೂಲಕ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ’ ಎಂದು ಹೇಳಿದರು.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಡಿ.ವೈ. ಹೆಳವರ ಮಾತನಾಡಿ, ‘ಮಹಿಳೆಯರು ಇಲಾಖೆಯಿಂದ ನೀಡುವ ತರಬೇತಿ ಸದ್ಬಳಕೆ ಮಾಡಿಕೊಳ್ಳಬೇಕು. ಬದ್ಧತೆ ಇದ್ದರೆ ಕೈಗಾರಿಕೋದ್ಯಮಿ ಆಗಬಹುದು’ ಎಂದರು.

ಅವಲಂಬನೆ ಈಗಿಲ್ಲ: ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜು ಮಾತನಾಡಿ, ‌‘ಮನೆಯಾಚೆಗಿನ ಎಲ್ಲ ಕೆಲಸಕ್ಕೂ ಪುರುಷರ ಮೇಲೆಯೇ ಅವಲಂಬನೆ ಆಗಬೇಕಾದ ಪರಿಸ್ಥಿತಿ ‌ಈಗ ಇಲ್ಲ. ಎಲ್ಲ ಕ್ಷೇತ್ರದಲ್ಲೂ ಮಹಿಳೆಯರು ಮುಂದೆ ಬರುತ್ತಿದ್ದಾರೆ. ಇಲಾಖೆಯಿಂದ ನೀಡುವ ಸೌಲಭ್ಯ ಬಳಸಿಕೊಂಡು ಉದ್ಯಮದಲ್ಲಿ ಮುಂದೆ ಬರಬಹುದು. ಒಂದಷ್ಟು ಮಂದಿಗೆ ಉದ್ಯೋಗ ಕೊಡಬಹುದು. ಇತರರಿಗೆ ಸ್ಫೂರ್ತಿಯಾಗಬಹುದು’ ಎಂದು ತಿಳಿಸಿದರು.

ಸಿಡಾಕ್ ಜಂಟಿ ನಿರ್ದೇಶಕ ಸಿ.ಎಸ್. ನ್ಯಾಮಗೌಡರ ಸ್ವಾಗತಿಸಿದರು. ಕೇಂದ್ರ ವ್ಯವಸ್ಥಾಪಕ ಗಿರೀಶ್ ಕುಲಕರ್ಣಿ ವಂದಿಸಿದರು.

ನಂತರ, ದೀನದಯಾಳ್ ಅಂತ್ಯೋದಯ ಯೋಜನೆಯ ಎನ್‌ಯುಎಲ್‌ಎಂ ಹಾಗೂ ಸ್ವಸಹಾಯ ಸಂಘಗಳ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT