ಬೆಳಗಾವಿ: ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಆಗಿದ್ದ ಡಾ.ಮಹೇಶ ಕೋಣಿ ಅವರನ್ನು, ಬುಧವಾರ ದಿಢೀರ್ ವರ್ಗಾವಣೆ ಮಾಡಲಾಗಿದೆ. ಆದರೆ, ಅವರಿಗೆ ಯಾವುದೇ ಹುದ್ದೆ ನೀಡಿಲ್ಲ.
ಕಳೆದ ಒಂದೂವರೆ ವರ್ಷದಿಂದ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದ ಡಾ.ಕೋಣಿ ಅವರು, ಹಲವು ನಕಲಿ ಆಸ್ಪತ್ರೆಗಳನ್ನು ಬಂದ್ ಮಾಡಿಸಿದ್ದರು. ನಕಲಿ ವೈದ್ಯರನ್ನು ಪತ್ತೆ ಮಾಡಿ, ಶಿಕ್ಷೆಗೆ ಗುರಿಪಡಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ ಕೆಲಸ ಜನಮೆಚ್ಚುಗೆ ಪಡೆದಿತ್ತು.
ಚಿಕ್ಕೋಡಿಯ ಹೆಚ್ಚುವರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್. ಗಡಾದ ಅವರನ್ನೇ ಬೆಳಗಾವಿಗೆ ಪ್ರಭಾರಿ ಆಗಿ ನಿಯೋಜಿಸಲಾಗಿದೆ.
ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರು ಬುಧವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದರು. ಅದೇ ದಿನ ಡಾ.ಕೋಣಿ ಅವರ ವರ್ಗಾವಣೆ ಮಾಡಿದ್ದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.