ಶುಕ್ರವಾರ, ಜನವರಿ 22, 2021
24 °C
ಪ್ರಗತಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್

ಶಾಲೆಗಳಿಗೆ ನೀರಿನ ಸೌಕರ್ಯ ಕಲ್ಪಿಸಲು ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಜಿಲ್ಲೆಯಲ್ಲಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಈ ತಿಂಗಳೊಳಗೆ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್ ತಾಕೀತು ಮಾಡಿದರು.

ಇಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರವಾಹ ಮತ್ತು ಅತಿವೃಷ್ಟಿಯಿಂದ ಹಾನಿಗೀಡಾದ ಶಾಲಾ ಕಟ್ಟಡಗಳು, ಅಂಗನವಾಡಿ ಕೇಂದ್ರಗಳು, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ, ಸೇತುವೆ ಮತ್ತಿತರ ಮೂಲಸೌಕರ್ಯಗಳನ್ನು ತಕ್ಷಣ ಸರಿಪಡಿಸಬೇಕು. ಅಂಗನವಾಡಿ ಕಟ್ಟಡಗಳ ದುರಸ್ತಿ ಮತ್ತು ನಿರ್ಮಾಣ ತ್ವರಿತವಾಗಿ ಪೂರ್ಣಗೊಳಿಸಬೇಕು. ಜಲಜೀವನ ಮಿಷನ್ ಯೋಜನೆ ಅನುಷ್ಠಾನಕ್ಕೆ ಅನುದಾನದ ಸಮಸ್ಯೆ ಇಲ್ಲ. ಹೀಗಾಗಿ, ವಿಳಂಬಕ್ಕೆ ಆಸ್ಪದ ಕೊಡಬಾರದು’ ಎಂದು ಸೂಚಿಸಿದರು.

ತೊಂದರೆ ಆಗದಂತೆ ನೋಡಿಕೊಳ್ಳಿ: ‘900ಕ್ಕೂ ಅಧಿಕ ಜನವಸತಿಗಳಿದ್ದು, ಸಮೀಪದ ಜಲ ಮೂಲ ಬಳಿಸಿಕೊಂಡು ಈ ಎಲ್ಲ ಪ್ರದೇಶಗಳಿಗೂ ಕುಡಿಯುವ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪಶುಪಾಲನಾ ಇಲಾಖೆಯಿಂದ ಲಸಿಕೆ ಕಾರ್ಯಕ್ರಮ,  ಜಾನುವಾರು ತಪಾಸಣಾ ಶಿಬಿರ ಮೊದಲಾದವುಗಳನ್ನು ನಿಗದಿತ ಅವಧಿಯಲ್ಲಿ ನಡೆಸಬೇಕು’ ಎಂದು ತಿಳಿಸಿದರು.

‘ಕೋವಿಡ್-19 ನಿಯಂತ್ರಣದಲ್ಲಿದೆ. ಶೀಘ್ರದಲ್ಲಿ ಲಸಿಕೆ ಕಾರ್ಯಕ್ರಮ ಆರಂಭವಾಗಬಹುದು. ಬ್ರಿಟನ್‌ನಿಂದ ವಾಪಸಾದ ಎಲ್ಲರ ವರದಿ ನೆಗೆಟಿವ್ ಬಂದಿದೆ. ಶಿಕ್ಷಕರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದ್ದು, ಅವರ ವರದಿ ನೆಗೆಟಿವ್ ಬಂದಾಗ ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

‘ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಅನುಮೋದನೆಗೊಂಡ ಕಾಮಗಾರಿಗಳಿಗೆ ತಕ್ಷಣವೇ ಟೆಂಡರ್ ಪ್ರಕ್ರಿಯೆ ನಡೆಸಿ, ಕೆಲಸ  ಆರಂಭಿಸಬೇಕು. ಮುಂಬರುವ ದಿನಗಳಲ್ಲಿ ಚುನಾವಣಾ ನೀತಿಸಂಹಿತೆ ಕಾರಣಕ್ಕೆ ಅಭಿವೃದ್ಧಿ ಕೆಲಸಗಳು ವಿಳಂಬವಾಗದಂತೆ ಪ್ರಸಕ್ತ ಸಾಲಿನ ಯೋಜನೆಗಳನ್ನು ಜಾರಿಗೊಳಿಸಬೇಕು. ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ‌.ಯಲ್ಲಿ ಅನುಮೋದಿತ ಕ್ರಿಯಾಯೋಜನೆ ಪ್ರಕಾರ ಪ್ರಗತಿ ಸಾಧಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಹಿಂಗಾರು ಹಂಗಾಮಿನಲ್ಲಿ ಶೇ 95ರಷ್ಟು ಬಿತ್ತನೆಯಾಗಿದೆ. ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಇಲ್ಲ. ಮುಂಗಾರುಗೆ ಸಂಬಂಧಿಸಿದಂತೆ ₹ 15 ಕೋಟಿ ಬೆಳೆ ಪರಿಹಾರ ಜಮೆ‌ ಮಾಡಲಾಗಿದೆ. ಬೆಳೆ ಸಮೀಕ್ಷೆ ಪೂರ್ಣಗೊಂಡಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಮಾಹಿತಿ ನೀಡಿದರು.

ಜಿ.ಪಂ. ಸಿಇಒ ದರ್ಶನ್ ಎಚ್.ವಿ., ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ವಿಭಾಗಾಧಿಕಾರಿಗಳಾದ ಯುಕೇಶ್ ಕುಮಾರ್ (ಚಿಕ್ಕೋಡಿ) ಹಾಗೂ ಅಶೋಕ ತೇಲಿ (ಬೆಳಗಾವಿ) ಇದ್ದರು.

ಲಸಿಕೆ ನೀಡಲು ಸಿದ್ಧತೆ

‘ಕೋವಿಡ್-19 ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

‘30ಸಾವಿರ ಆರೋಗ್ಯ ಸೇವಾ ಸಿಬ್ಬಂದಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ಪಟ್ಟಿ‌ಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಅಣಕು ಕಾರ್ಯಾಚರಣೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ’ ಎಂದರು.

‘ಎಸ್ಸೆಸ್ಸೆಲ್ಸಿ ಫಲಿತಾಂಶ ವೃದ್ಧಿಗೆ ವಿಶೇಷ ಬೋಧನೆ’

‘ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳಿಗೆ ಸುದೀರ್ಘ ರಜೆ ಘೋಷಿಸಿದ್ದರಿಂದ ಈ ಬಾರಿ ಎಸ್ಸೆಸ್ಸೆಲ್ಸಿ ಮಕ್ಕಳನ್ನು ಪರೀಕ್ಷೆಗೆ ಸಜ್ಜುಗೊಳಿಸಲು ಗಣಿತ, ವಿಜ್ಞಾನ ವಿಷಯಗಳ ವಿಶೇಷ ಬೋಧನೆ ವ್ಯವಸ್ಥೆ ಮಾಡಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯ ಸ್ಥಾನ ಸುಧಾರಣೆಗೆ ಆಸಕ್ತಿ ವಹಿಸಬೇಕು. ಶಿಕ್ಷಣದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಶಿಕ್ಷಕರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು’ ಎಂದು ಅತೀಕ್ ಸೂಚಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು