ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚಿನ ಬಡ್ಡಿ ಆಮಿಷಕ್ಕೆ ಬಲಿಯಾಗದಿರಿ: ಬಿ.ಎಚ್. ಕೃಷ್ಣಾರೆಡ್ಡಿ ಸಲಹೆ

ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಕೃಷ್ಣಾರೆಡ್ಡಿ
Last Updated 24 ಅಕ್ಟೋಬರ್ 2021, 7:42 IST
ಅಕ್ಷರ ಗಾತ್ರ

ಬೆಳಗಾವಿ: ‘ಗ್ರಾಹಕರು ಹೆಚ್ಚಿನ ಬಡ್ಡಿ ಆಮಿಷಗಳಿಗೆ ಬಲಿಯಾಗಬಾರದು. ಹಣ ತೊಡಗಿಸುವ ಮುನ್ನ ಮುಂಜಾಗ್ರತೆ ವಹಿಸಬೇಕು’ ಎಂದುರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್. ಕೃಷ್ಣಾರೆಡ್ಡಿ ಸಲಹೆ ನೀಡಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೇ ಸೌಹಾರ್ದ ಸಹಕಾರಿ ಸಂಸ್ಥೆಗಳ ಬಗ್ಗೆ ಠೇವಣಿದಾರರಿಂದ ದೂರು ಸ್ವೀಕೃತವಾದಲ್ಲಿ, ಹಣ ವಂಚನೆ ಅಥವಾ ಹಣಕಾಸು ಅವ್ಯವಹಾರದಲ್ಲಿ ತೊಡಗಿದ್ದರೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲು ಉನ್ನತ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಕಾರ್ಯಪಡೆ ರಚಿಸಲಾಗಿದೆ’ ಎಂದು ತಿಳಿಸಿದರು.

‌‘ಸೌಹಾರ್ದ ಸಹಕಾರಿ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿ ತರಲು ನಿರಂತರವಾಗಿ ಪ್ರಯತ್ನಿಸಲಾಗಿದೆ. ವಿಧಾನಸಭೆ ಹಾಗೂ ವಿಧಾನಪರಿಷತ್‌ನಲ್ಲಿ
ಅಂಗೀಕಾರಗೊಂಡಿವೆ. ಇದಕ್ಕೆ ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರನ್ನು ಅಭಿನಂದಿಸುತ್ತೇವೆ. ರಾಜ್ಯದಲ್ಲಿ ಕಾಯ್ದೆ ಜಾರಿಗೆ ಬಂದಾಗಿನಿಂದ ಹಲವು ಬಾರಿ ತಿದ್ದುಪಡಿ ಆಗಿದೆ’ ಎಂದರು.

‘ದೇಶದಲ್ಲಿ 1.5 ಲಕ್ಷ ವಿವಿಧ ರೀತಿಯ ಸಹಕಾರ ಸಂಸ್ಥೆಗಳಿದ್ದು, 6.30 ಲಕ್ಷ ಗ್ರಾಮಗಳಲ್ಲಿ ವ್ಯಾಪಿಸಿವೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ, ಸಚಿವರನ್ನು ನೇಮಿಸಿರುವುದು ಅಭಿವೃದ್ಧಿ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ’ ಎಂದು ತಿಳಿಸಿದರು.

‘ಸಹಕಾರ ಸಂಸ್ಥೆಗಳಿಗೆ ಆದಾಯ ತೆರಿಗೆ ಕಾಯ್ದೆ ಅನ್ವಯ ವಿನಾಯಿತಿ ಇದ್ದರೂ ಬೇರೆ ಕಾರಣಗಳನ್ನು ಉಲ್ಲೇಖಿಸಿ ನೋಟಿಸ್‌ ಕೊಡಲಾಗುತ್ತಿದೆ. ಈ ತೊಂದರೆ ನಿವಾರಣೆಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದರು.

‘ಠೇವಣಿದಾರರಿಗೆ ಹಣ ಹಿಂತಿರುಗಿಸಲಾಗದ ಕೆಲವು ಸಂಸ್ಥೆಗಳ ಕಾರಣದಿಂದ ಕ್ಷೇತ್ರದ ಮೇಲೆ ಜನರ ವಿಶ್ವಾಸ ಕಡಿಮೆಯಾಗುತ್ತದೆ. ಕೆಲವು ಸಂಸ್ಥೆಗಳು ಕಾನೂನು ಉಲ್ಲಂಘಿಸಿ ಅನಗತ್ಯವಾಗಿ ಶಾಖೆಗಳನ್ನು ತೆರೆಯುವುದು, ಅತಿ ಹೆಚ್ಚಿನ ಬಡ್ಡಿ ಆಮಿಷ ಒಡ್ಡುತ್ತಿರುವುದು ಕೂಡ ಕಂಡುಬಂದಿದೆ. ಇಂತಹ ಸಂಸ್ಥೆಗಳ ಬಗ್ಗೆ ಜಿಲ್ಲಾ ಒಕ್ಕೂಟಗಳು ಅಗತ್ಯ ಪ್ರಾಧಿಕಾರಗಳ ಗಮನಕ್ಕೆ ತರಬೇಕು’ ಎಂದು ಹೇಳಿದರು.

ಉಪಾಧ್ಯಕ್ಷ ಜಗದೀಶ್ ಕವಟಗಿಮಠ, ಸಹಕಾರಿ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ, ಸಂಯುಕ್ತ ಸಹಕಾರಿ ವೃತ್ತಿಪರ ನಿರ್ದೇಶಕ ಲಕ್ಷ್ಮಣ ಮಾರುತಿ ಪವಾರ, ಅಧ್ಯಕ್ಷ ಐ.ಬಿ. ಕೊಪ್ಪದ, ಏಕಲಕ್ಷ ಸೌಹಾರ್ದ ಸಹಕಾರಿ ಅಧ್ಯಕ್ಷ ಪ್ರಶಾಂತ ಬಡವನಾಚೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT