ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಡಿ ರೈಲು ಮಾರ್ಗ ಲೋಕಾರ್ಪಣೆ

ವಿಡಿಯೊ ಲಿಂಕ್ ಮೂಲಕ ಪಾಲ್ಗೊಂಡ ಪಿಯೂಷ್ ಗೋಯಲ್
Last Updated 21 ಫೆಬ್ರುವರಿ 2021, 15:17 IST
ಅಕ್ಷರ ಗಾತ್ರ

ರಾಯಬಾಗ: ಲೋಂಡಾ–ಮೀರಜ್‌ ಜೋಡಿ ಮಾರ್ಗದ ಭಾಗವಾದ ಜಿಲ್ಲೆಯ ಚಿಕ್ಕೋಡಿ ರಸ್ತೆ ಸಮೀಪದಿಂದ ರಾಯಬಾಗ ರೈಲು ನಿಲ್ದಾಣದವರೆಗೆ (13.94 ಕಿ.ಮೀ.) ನಿರ್ಮಿಸಿದ ಜೋಡಿ ರೈಲು ಮಾರ್ಗ ಮತ್ತು ರಾಯಬಾಗ ನಿಲ್ದಾಣದ ನೂತನ ಕಟ್ಟಡವನ್ನು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ವಿಡಿಯೊ ಲಿಂಕ್ ಮೂಲಕ ಭಾನುವಾರ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ‘ದಿವಂಗತ ಸುರೇಶ ಅಂಗಡಿ ಅವರು ರೈಲ್ವೆ ಇಲಾಖೆಗೆ ದೊಡ್ಡ ಬೆಂಬಲವಾಗಿದ್ದರು. ಅವರ ಕಾರ್ಯದ ಬಗ್ಗೆ ಬಹಳ ಬದ್ಧತೆ ಹೊಂದಿದ್ದರು. ರಾಜ್ಯದಲ್ಲಿ ರೈಲ್ವೆ ಅಭಿವೃದ್ಧಿಗೆ ಬಹಳಷ್ಟು ಕೊಡುಗೆ ನೀಡಿದ್ದಾರೆ’ ಎಂದು ಸ್ಮರಿಸಿದರು.

‘ಕೋವಿಡ್ ಪರಿಸ್ಥಿತಿಯ ನಂತರ ಕರ್ನಾಟಕದಲ್ಲಿ ಆರ್ಥಿಕ ಕ್ಷೇತ್ರ ಸೇರಿದಂತೆ ಎಲ್ಲರದಲ್ಲೂ ಕ್ಷಿಪ್ರ ಪ್ರಗತಿ ಮತ್ತು ನವೋಲ್ಲಾಸ ಕಂಡುಬರುತ್ತಿದೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಬಲ್ ಎಂಜಿನ್ ರೀತಿ ವೇಗವಾಗಿ ಪ್ರಗತಿ ಮಾಡುತ್ತಿದ್ದಾರೆ. ರೈಲ್ವೆ ಪ್ರಗತಿಗೂ ಬಹಳಷ್ಟು ಆದ್ಯತೆ ಕೊಡುತ್ತಿದ್ದಾರೆ’ ಎಂದು ಹೇಳಿದರು.

‘ಲೋಂಡಾ–ಮೀರಜ್‌ ಜೋಡಿ ಮಾರ್ಗ 186 ಕಿ.ಮೀ. ಹೊಂದಿದೆ. ಈಗಾಗಲೇ 30 ಕಿ.ಮೀ. ಮುಗಿದಿದೆ. ಈ ಕಾಮಗಾರಿಯನ್ನು 2023ರ ಮಾರ್ಚ್‌ ಅಂತ್ಯದೊಳಗೆ ಸಂಪೂರ್ಣವಾಗಿ ಮುಗಿಸುವ ಗುರಿ ಹೊಂದಲಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಸಹಕಾರ ನೀಡಲು ರೈಲ್ವೆ ಇಲಾಖೆಯು ಬದ್ಧವಾಗಿದೆ’ ಎಂದು ತಿಳಿಸಿದರು.

‘ಇನ್ನೆರಡು ವರ್ಷಗಳಲ್ಲಿ ಕರ್ನಾಟಕದ ಎಲ್ಲ ರೈಲು ಮಾರ್ಗಗಳ ವಿದ್ಯುದ್ದೀಕರಣಗೊಳಿಸುವ ಗುರಿ ಹೊಂದಲಾಗಿದೆ’ ಎಂದು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಮೀಟರ್‌ಗೇಜ್ ಇದ್ದಾಗ ಇದ್ದ ನಮ್ಮ ಭಾಗದ ಜನರಿಗೆ ಮಂಗಳೂರು–ಮೈಸೂರು–ಗೋವಾ ರೈಲು ಮಾರ್ಗದಲ್ಲಿ ರೈಲು ಇತ್ತು. ಬ್ರಾಡ್‌ಗೇಜ್ ಆದ ನಂತರ ಸ್ಥಗಿತಗೊಂಡಿದೆ. ಅದನ್ನು ಪುನರಾರಂಭಿಸಬೇಕು. ಹುಬ್ಬಳ್ಳಿ–ಮೀರಜ್‌ ಜೋಡಿ ಮಾರ್ಗದ ಕಾಮಗಾರಿ ಹಾಗೂ ಈ ಮಾರ್ಗದಲ್ಲಿ ಬರುವ ಎಲ್ಲ ರೈಲು ನಿಲ್ದಾಣಗಳ ಕಾಮಗಾರಿಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯ ನಡೆದಿದೆ. ಅದು ತ್ವರಿತವಾಗಿ ಪೂರ್ಣಗೊಳ್ಳಬೇಕು’ ಎಂದು ಕೋರಿದರು.

ವಿಧಾನಪರಿಷತ್‌ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ‘ಜೋಡಿ ಮಾರ್ಗದ ಕಾಮಗಾರಿಯಿಂದಾಗಿ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಮಹಾರಾಷ್ಟ್ರ–ಕರ್ನಾಟಕದ ನಡುವೆ ಸಂಪರ್ಕ ಸುಗಮವಾಗಲಿದೆ. ಬಹಳಷ್ಟು ಸಮಯವೂ ಉಳಿಯಲಿದೆ. ಬಹಳ ಸಕ್ಕರೆ ಕಾರ್ಖಾನೆಗಳು ಇಲ್ಲರುವುದರಿಂದ ಸಕ್ಕರೆಯನ್ನು ಮಹಾರಾಷ್ಟ್ರ ಹಾಗೂ ಗೋವಾಕ್ಕೆ ರಫ್ತು ಮಾಡುವುದಕ್ಕೂ ಸಹಕಾರಿಯಾಗಲಿದೆ’ ಎಂದು ತಿಳಿಸಿದರು. ‘ಈ ಕಾಮಗಾರಿಗೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬಹಳ ಶ್ರಮಿಸಿದ್ದರು’ ಎಂದು ನೆನೆದರು.

‘ದಾದರ್ ಎಕ್ಸ್‌ಪ್ರೆಸ್ ರೈಲನ್ನು ರಾಯಬಾಗ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡುವುದನ್ನು ಪುನರಾರಂಭ ಮಾಡಬೇಕು. ಇಲ್ಲಿನ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಕೋರಿದರು.

***

ಕಾಮಗಾರಿಯ ಚಿತ್ರಣ

* 2015–16ನೇ ಸಾಲಿನಲ್ಲಿ ಮಂಜೂರಾಗಿರುವ ₹ 1,191 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಲೋಂಡಾ–ಮೀರಜ್‌ ನಡುವಣ ಜೋಡಿ ರೈಲು ಮಾರ್ಗದ (186 ಕಿ.ಮೀ.) ಕಾಮಗಾರಿ ಭಾಗವಾಗಿ ಚಿಕ್ಕೋಡಿ ರಸ್ತೆ–ರಾಯಬಾಗದವರೆಗೆ ಮಾರ್ಗ ನಿರ್ಮಿಸಲಾಗಿದೆ.

* ಯೋಜನೆಯಲ್ಲಿ ಪೂರ್ಣಗೊಂಡಿರುವ 2ನೇ ಭಾಗದ ಕಾಮಗಾರಿ ಇದಾಗಿದೆ. ಘಟಪ್ರಭಾ ರೈಲು ನಿಲ್ದಾಣದಿಂದ ಚಿಕ್ಕೋಡಿ ರಸ್ತೆವರೆಗಿನ 16 ಕಿ.ಮೀ. ಮಾರ್ಗ ಹೋದ ವರ್ಷ ಪೂರ್ಣಗೊಂಡಿತ್ತು.

* ಚಿಕ್ಕೋಡಿ ರಸ್ತೆ–ರಾಯಬಾಗ ನಿಲ್ದಾಣ ನಡುವೆ 21 ಸಣ್ಣ ಸೇತುವೆ ಹಾಗೂ 2 ಆರ್‌ಒಬಿ ಬರುತ್ತದೆ. ಲೆವಲ್‌ ಕ್ರಾಸಿಂಗ್ ವ್ಯವಸ್ಥೆ ಮಾಡಲಾಗಿದೆ.

* ರಾಯಬಾಗ ನಿಲ್ದಾಣದಲ್ಲಿ ಪುರುಷರ ಹಾಗೂ ಮಹಿಳೆಯರ ವಿಶ್ರಾಂತಿ ಸಭಾಂಗಣ, ಹವಾನಿಯಂತ್ರಿತ ವಿಶ್ರಾಂತಿ ಕೊಠಡಿ, ಎರಡು ಹೊಸ ಪ್ಲಾಟ್‌ಫಾರಂಗಳು, ಮೇಲ್ಸೇತುವೆ ಸೌಲಭ್ಯಗಳನ್ನು ಒದಗಿಸಲಾಗಿದೆ.

* ನಿಲ್ದಾಣದಲ್ಲಿ ಗೂಡ್ಸ್‌ ಅಂಕಣಕ್ಕೆ ಹೋಗುವುದಕ್ಕೆಂದೆ ಪ್ರತ್ಯೇಕ ಹಳಿ ಜೋಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT