ಭಾನುವಾರ, ಜೂನ್ 13, 2021
21 °C
ಸಂಪಾದನೆ ಇಲ್ಲದೆ ಸಂಕಷ್ಟಕ್ಕೀಡಾದ ಕ್ಯಾಬ್, ಕಾರ್ ಮಾಲೀಕರು–ಚಾಲಕರು

ವರ್ಷಾತು ನಯಾಪೈಸೆ ಗಳಿಕಿ ಇಲ್ಲ

ಸುಧಾಕರ ತಳವಾರ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೋಡಿ: ‘ಏನ್ ಹೇಳೋದ್ರೀ ನಮ್ ಜೀವನದ್ ಪರಿಸ್ಥಿತಿ? ಒಂದ್ ವರ್ಷಾತು ಬಾಡಿಗಿ ಸಿಗವಲ್ದು, ನಯಾಪೈಸೆ ಗಳಿಕಿ ಇಲ್ಲ, ಟ್ಯಾಕ್ಸ್, ಇನ್ಸುರೆನ್ಸ್ ಕಟ್ಟೋದ್ ಮಾತ್ರ ತಪ್ಪಿಲ್ಲಾ. ಕೆಲಸಾ ಇಲ್ದ ಡ್ರೈವರ್‌ಗಳೂ ಅತಂತ್ರ ಆಗ್ಯಾರ್. ಕುಟುಂಬ ನಡೆಸಾಕ್ ಪರದಾಡಬೇಕಾಗೈತಿ. ಸರ್ಕಾರ ನಮಗ್ ಆರ್ಥಿಕ ನೆರವ ನೀಡತೈತೇನ್ ಅಂತಾ ಚಾತಕ ಪಕ್ಷಿ ಹಂಗ್ ಕಾಯಾಕತೇವಿ’.

– ಪಟ್ಟಣದ ಮ್ಯಾಕ್ಸಿಕ್ಯಾಬ್ ಹಾಗೂ ಕಾರು ಮೊದಲಾದ ಖಾಸಗಿ ಸಾರಿಗೆ ವಾಹನಗಳ ಮಾಲೀಕರು ಮತ್ತು ಚಾಲಕರ ನೋವಿನ ಮಾತುಗಳಿವು.

ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ವಿಧಿಸಿರುವ ಲಾಕ್‍ಡೌನ್‍ ನಿರ್ಬಂಧದಿಂದಾಗಿ ಖಾಸಗಿ ಸಾರಿಗೆ ವಾಹನ ಮಾಲೀಕರು ಮತ್ತು ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಒಟ್ಟಣದಲ್ಲಿ ಸುಮಾರು 30ಕ್ಕೂ ಹೆಚ್ಚು ಮ್ಯಾಕ್ಸಿಕ್ಯಾಬ್‍ಗಳಿದ್ದು, ಚಾಲಕರು ಮತ್ತು ಕ್ಲೀನರ್‌ಗಳ ಸಂಬಳಮ ಡಿಸೇಲ್, ತೆರಿಗೆ ಮೊದಲಾದ ಖರ್ಚು ವೆಚ್ಚಗಳನ್ನು ಕಳೆದು ಪ್ರತಿ ದಿನ ವಾಹನ ಮಾಲೀಕರಿಗೆ ಕನಿಷ್ಠ ₹ 400ರಿಂದ ₹500 ಉಳಿತಾಯ ಆಗುತ್ತಿತ್ತು. ಆದರೆ, ಕೊರೊನಾದಿಂದಾಗಿ ವರ್ಷದಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ಲಾಕ್‍ಡೌನ್‍ನಿಂದಾಗಿ ಹಲವು ತಿಂಗಳವರೆಗೆ ಕೆಲಸವೇ ಇರಲಿಲ್ಲ. ಇದರಿಂದಾಗಿ ಸಾವಿರಾರು ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ. ಮೇಲಾಗಿ ತೆರಿಗೆ ಪಾವತಿಯು ಅವರಿಗೆ ಹೊರೆಯಾಗಿ ಪರಿಣಮಿಸಿದೆ.

‘ವರ್ಷದಿಂದ ಮ್ಯಾಕ್ಸಿಕ್ಯಾಬ್ ವಾಹನ ಮಾಲೀಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಲಾಕ್‍ಡೌನ್‍ ತೆರವುಗೊಂಡು ಚೇತರಿಸಿಕೊಳ್ಳುವಷ್ಟರಲ್ಲಿ ಪ್ರಸಕ್ತ ವರ್ಷ ಮತ್ತೆ ಲಾಕ್‍ಡೌನ್‍ ಬಂದಿದೆ. ನಿರ್ಬಂಧಗಳ ಕಾರಣದಿಂದ ಮದುವೆಗಳು ಸರಳವಾಗಿ ನಡೆದಿವೆ. ಹೀಗಾಗಿ ಬಾಡಿಗೆಗಳೂ ಸಿಗುತ್ತಿಲ್ಲ’ ಎಂದು ಚಿಕ್ಕೋಡಿಯ ಮ್ಯಾಕ್ಸಿಕ್ಯಾಬ್ ಮಾಲೀಕರರ ಸಂಘದ ಕಾರ್ಯದರ್ಶಿ ಎಂ.ಆರ್. ಜಮಾದಾರ ಹೇಳುತ್ತಾರೆ.

ಬಾಡಿಗೆ ಕಾರು ಮೊದಲಾದ ವಾಹನಗಳ ಮಾಲೀಕರ ಸ್ಥಿತಿಯೂ ಭಿನ್ನವಾಗಿಲ್ಲ. ಇಲ್ಲಿ 100ಕ್ಕೂ ಹೆಚ್ಚು ಖಾಸಗಿ ಸಾರಿಗೆ ವಾಹನಗಳಿವೆ. ಆ ಕೆಲಸವನ್ನೇ ನಂಬಿಕೊಂಡು ನೂರಾರು ಮಂದಿ ಜೀವನ ನಡೆಸುತ್ತಾರೆ. ಆದರೆ, ಲಾಕ್‍ಡೌನ್‍ನಿಂದಾಗಿ ವಾಹನ ಸಂಚಾರ ನಿರ್ಬಂಧಿಸಿರುವುದರಿಂದ ಕೆಲಸವೇ ಇಲ್ಲದಂತಾಗಿದೆ. ಗಳಿಕೆಯೂ ಸಿಗದಂತಾಗಿದೆ.

‘ಕಾರು ಮೊದಲಾದ ವಾಹನಗಳು ತಿಂಗಳು ನಿಂತರೆ ಮಾಲೀಕರಿಗೆ ಕನಿಷ್ಠ ₹ 25 ಸಾವಿರ ನಷ್ಟವಾಗುತ್ತದೆ. ಟೈರ್, ಬ್ಯಾಟರಿ ಹಾಳಾಗುತ್ತವೆ. ಅವುಗಳ ದುರಸ್ತಿ ಅಥವಾ ಬದಲಿಸಲು ಸಾವಿರಾರು ರೂಪಾಯಿ ಬೇಕಾಗುತ್ತದೆ. ಕೆಲಸವಿಲ್ಲದೆ ಅತಂತ್ರರಾಗಿದ್ದೇವೆ. ಕುಟುಂಬ ನಿರ್ವಹಣೆಗೆ ಪರದಾಡುತ್ತಿರುವ ನಮ್ಮನ್ನು ಗುರುತಿಸಿ ಆರ್ಥಿಕ ನೆರವು ನೀಡಬೇಕು’ ಎಂದು ವಾಹನ ಮಾಲೀಕ ರಾಮಾ ವಟಗೂಡೆ ಒತ್ತಾಯಿಸಿದರು.

***

ಲಾಕ್‌ಡೌನ್‌ನಿಂದಾಗಿ ಮ್ಯಾಕ್ಸಿಕ್ಯಾಬ್ ವಾಹನ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದಾರೆ. ಈ ಅವಧಿಯಲ್ಲಿ ವಾಹನಗಳ ತೆರಿಗೆ ರಿಯಾಯ್ತಿ ಒದಗಿಸುವ ಮೂಲಕ ಸರ್ಕಾರ ನೆರವಾಗಬೇಕು
ಎಂ.ಆರ್. ಜಮಾದಾರ
ಕಾರ್ಯದರ್ಶಿ, ಮ್ಯಾಕ್ಸಿಕ್ಯಾಬ್ ಮಾಲೀಕ ಸಂಘ, ಚಿಕ್ಕೋಡಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು