ಮಂಗಳವಾರ, ಆಗಸ್ಟ್ 20, 2019
27 °C

ಕಾಲೇಜುಗಳ ಬಳಿ ಗಾಂಜಾ– ಪನ್ನಿ ಮಾರಾಟ; 8 ಆರೋಪಿಗಳ ಬಂಧನ

Published:
Updated:

ಬೆಳಗಾವಿ: ಶಾಲಾ ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ಗಾಂಜಾ ಹಾಗೂ ಮಾದಕದ್ರವ್ಯ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಜಾಲವನ್ನು ಭೇದಿಸಿರುವ ನಗರ ಪೊಲೀಸರು, ಎರಡು ಪ್ರತ್ಯೇಕ ಪ್ರಕರಣಗಳಿಂದ ಒಟ್ಟು 8 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಮೊದಲ ಪ್ರಕರಣದಲ್ಲಿ– ಅಕೀಲಅಹ್ಮದ, ಆತೀಫ್‌ ನಜೀರ್‌ ಅಹ್ಮದ ಚಚಡಿ, ಸಲ್ಮಾನ್‌ ಪತ್ತೆಖಾನ, ಸೂರಪ್ಪ ಕಲ್ಲಪ್ಪ ಅಗಸರ ಹಾಗೂ ಜಮ್ಮು ಕಾಶ್ಮೀರ ಮೂಲದ ಸದ್ಯಕ್ಕೆ ಶಿವಬಸವ ನಗರದ ನಿವಾಸಿ ಅಮೀರ್‌ ಅಬ್ದುಲ್‌ ಲತೀಫ್‌ ಬೇಗ್ ಅವರನ್ನು ಬಂಧಿಸಲಾಗಿದೆ. ಅವರಿಂದ ₹ 15,400 ಮೌಲ್ಯದ 1 ಕೆ.ಜಿ. 540 ಗ್ರಾಂ ಗಾಂಜಾ, ₹ 3,100 ನಗದು, ₹ 5,000 ಮೌಲ್ಯದ 4 ಮೊಬೈಲ್ ಹಾಗೂ ₹ 80,000 ಬೆಲೆಯ 2 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರ್ಯಾಚರಣೆ ಹೇಗೆ?:

ಲಾರಿ ಚಾಲಕ ಅಕೀಲಅಹ್ಮದ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಿಂದ ಗಾಂಜಾ ತರುತ್ತಿದ್ದ. ಆತೀಫ್‌ ನಜೀರ್‌ ಅಹ್ಮದ ಚಚಡಿ ಹಾಗೂ ಸಲ್ಮಾನ ಪತ್ತೇಖಾನ ಎಂಬುವವರು ಇದನ್ನು ಮಾರಾಟ ಮಾಡುತ್ತಿದ್ದರು. ಸೂರಪ್ಪ ಕಲ್ಲಪ್ಪ ಅಗಸರ ಹಾಗೂ ಮೂಲತಃ ಜಮ್ಮು ಕಾಶ್ಮೀರ ನಿವಾಸಿ ಸದ್ಯ ಶಿವಬಸವ ನಗರದಲ್ಲಿದ್ದ ಅಮೀರ್‌ ಅಬ್ದುಲ್‌ಲತೀಪ್ ಬೇಗ್‌ ಅವರು ಚಿಕ್ಕ ಚಿಕ್ಕ ಪಾಕೆಟ್‌ಗಳಲ್ಲಿ ಗಾಂಜಾ ಪ್ಯಾಕ್‌ ಮಾಡಿ, ಎಂಜಿನಿಯರಿಂಗ್ ಹಾಗೂ ಮೆಡಿಕಲ್‌ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು. 

ಖಚಿತ ಮಾಹಿತಿಯ ಮೇರೆಗೆ ಮಂಗಳವಾರ ರಾತ್ರಿ ಆಜಾದ್‌ ನಗರ ಹಾಗೂ ವೈಭವ ನಗರದ ಮನೆಯ ಮೇಲೆ ದಾಳಿ ಮಾಡಿದ, ಮಾಳಮಾರುತಿ ಪಿಎಸ್ಐ ಆರ್.ಜಿ. ಸೌದಾಗರ, ಪ್ರೊಬೆಷನರಿ ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದರು.

ಮತ್ತೊಂದು ಪ್ರಕರಣ:

ಭರತೇಶ ಕಾಲೇಜು ಎದುರಿನ ಕಂಟೋನ್ಮೆಂಟ್ ಲಾರಿ ಪಾರ್ಕಿಂಗ್ ಬಳಿ ಗಾಂಜಾ ಹಾಗೂ ಪನ್ನಿ ಮಾದಕ ದ್ರವ್ಯ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಚವಾಟ್‌ ಗಲ್ಲಿಯ ಅನಿಕೇಶ ಅನಿಲ ಮಧುಮತ್ತ (21), ವೀರಭದ್ರ ನಗರದ ಸಮೀರ್ ಸಾಧಿಕ್ ದೇಸಾಯಿ (22) ಹಾಗೂ ಮಾರುತಿ ನಗರದ ರಾಮಚಂದ್ರ ಮಾರುತಿ ಪವಾರ್ (30) ಅವರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ.

ಇವರಿಂದ ₹ 6,500 ಮೌಲ್ಯದ 650 ಗ್ರಾಂ ಗಾಂಜಾ, ₹ 25,000 ಮೌಲ್ಯದ 126 ಚೀಟಿ ಪನ್ನಿ ಹಾಗೂ ₹ 30,000 ಮೌಲ್ಯದ ಬೈಕ್ ವಶಪಡಿಸಿಕೊಂಡಿದ್ದಾರೆ. ಎಸಿಪಿ ನಾರಾಯಣ ಬರಮನಿ ಮತ್ತು ಮಾರ್ಕೆಟ್ ಠಾಣೆಯ ಇನ್‌ಸ್ಪೆಕ್ಟರ್ ವಿಜಯ ಮುರಗುಂಡಿ ದಾಳಿ ತಂಡದ ನೇತೃತ್ವ ವಹಿಸಿದ್ದರು. ಪಿಎಸ್ಐ ವಿಠ್ಠಲ ಹಾವನ್ನವರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಜಾಗೃತಿ:

‘ಕಾಲೇಜು ವಿದ್ಯಾರ್ಥಿಗಳನ್ನೇ ಮುಖ್ಯ ಗುರಿಯಾಗಿಸಿಕೊಂಡು ಗಾಂಜಾ, ಪನ್ನಿ ಸೇರಿದಂತೆ ವಿವಿಧ ಮಾದಕ ದ್ರವ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಇದನ್ನು ತಡೆಗಟ್ಟಲು ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳ ಕುರಿತು ಜಾಗೃತಿ ಮೂಡಿಸಲಾಗುವುದು’ ಎಂದು ನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶಕುಮಾರ್‌ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಡಿಸಿಪಿಗಳಾದ ಸೀಮಾ ಲಾಟ್ಕರ್‌, ಯಶೋಧಾ ವಂಟಗೋಡಿ, ಎಸಿಪಿ ಎನ್‌.ವಿ. ಬರಮನಿ ಸುದ್ದಿಗೋಷ್ಠಿಯಲ್ಲಿ ಇದ್ದರು. 

Post Comments (+)