ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಮೊದಲ ದಿನ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಲು ಶಿಕ್ಷಣ ಇಲಾಖೆ ಸಿದ್ಧತೆ

Published 24 ಮೇ 2024, 4:46 IST
Last Updated 24 ಮೇ 2024, 4:46 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಾದ್ಯಂತ ಮೇ 29ರಿಂದ 2024–25ನೇ ಸಾಲಿನ ತರಗತಿ ಆರಂಭವಾಗಲಿವೆ. ಬೇಸಿಗೆ ರಜೆ ಮುಗಿಸಿ ಶಾಲೆಯತ್ತ ಮುಖಮಾಡುವ ಮಕ್ಕಳನ್ನು ಸಂತಸದಿಂದ ಬರಮಾಡಿಕೊಳ್ಳುವ ದೃಷ್ಟಿಯಿಂದ ಮೊದಲ ದಿನವೇ ಪಠ್ಯಪುಸ್ತಕ ವಿತರಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘದಿಂದ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗಳಿಗೆ ಕನ್ನಡ, ಮರಾಠಿ, ಉರ್ದು ಮತ್ತು ಇಂಗ್ಲಿಷ್‌ ಮಾಧ್ಯಮಗಳ ಪಠ್ಯಪುಸ್ತಕ ಸರಬರಾಜು ಆಗುತ್ತಿವೆ. ಆಯಾ ಶಾಲೆಗಳಿಗೆ ಅವುಗಳನ್ನು ವಿತರಿಸುವ ಪ್ರಕ್ರಿಯೆ ಭರದಿಂದ ಸಾಗಿದೆ. ಸರ್ಕಾರಿ, ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಉಚಿತವಾಗಿ ಪಠ್ಯಪುಸ್ತಕ ವಿತರಿಸಿದರೆ, ಅನುದಾನರಹಿತ ಶಾಲೆಗಳಿಂದ ಇಂತಿಷ್ಟು ಹಣ ಪಡೆದು ಮಾರಾಟದ ರೂಪದಲ್ಲಿ ವಿತರಿಸಲಾಗುತ್ತಿದೆ.

50.12 ಲಕ್ಷ ಪುಸ್ತಕಕ್ಕೆ ಬೇಡಿಕೆ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 39,35,856 ಉಚಿತ, 10,76,450 ಮಾರಾಟ ಸೇರಿದಂತೆ 50,12,306 ಪಠ್ಯಪುಸ್ತಕಗಳಿಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ಮೇ 23ರವರೆಗೆ 15,62,910 ಉಚಿತ, 5,76,811 ಮಾರಾಟ ಸೇರಿದಂತೆ 21,39,721 ಪುಸ್ತಕ ವಿತರಿಸಲಾಗಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 51,61,723 ಉಚಿತ, 12,08,128 ಸೇರಿದಂತೆ 63,69,851 ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಕೆಯಾಗಿತ್ತು. ಈ ಪೈಕಿ 22,62,926 ಉಚಿತ, 6,66,478 ಮಾರಾಟ ಸೇರಿದಂತೆ 29,29,404 ಪುಸ್ತಕಗಳ ವಿತರಣೆಯಾಗಿದೆ.

ಬೇಡಿಕೆ ಸಲ್ಲಿಸಿದ್ದ 512 ಶೀರ್ಷಿಕೆಗಳ ಪೈಕಿ 268 ಶೀರ್ಷಿಕೆಯ ಪುಸ್ತಕ ಬಂದಿವೆ. ಇನ್ನೂ ಬರಬೇಕಿರುವ ಶೀರ್ಷಿಕೆಗಳಲ್ಲಿ ಮರಾಠಿ ಮತ್ತು ಉರ್ದು ಮಾಧ್ಯಮದ ಪಠ್ಯಪುಸ್ತಕಗಳೇ ಹೆಚ್ಚಿವೆ.

ಸಮವಸ್ತ್ರವನ್ನೂ ನೀಡಲಿದ್ದೇವೆ: ‘ಚುನಾವಣೆ ಕಾರಣಕ್ಕೆ ತಡವಾಗಿದ್ದ ಪಠ್ಯಪುಸ್ತಕಗಳ ಸರಬರಾಜು ಪ್ರಕ್ರಿಯೆ ಈಗ ಚುರುಕು ಪಡೆದಿದೆ. ಶಾಲಾ ಆರಂಭೋತ್ಸವ ದಿನ ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಪಠ್ಯಪುಸ್ತಕ ವಿತರಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಇದರೊಂದಿಗೆ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತ್ರವನ್ನೂ ನೀಡಲಿದ್ದೇವೆ’ ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಗಣನೀಯವಾಗಿ ಕುಸಿಯುತ್ತಿದೆ. ಹಾಗಾಗಿ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ದಾಖಲಾತಿ ಆಂದೋಲವನ್ನೂ ನಡೆಸುತ್ತಿದ್ದೇವೆ. 1ನೇ ತರಗತಿ ಸೇರಲಿರುವ ಮಕ್ಕಳ ಮಾಹಿತಿ ಸಂಗ್ರಹಕ್ಕಾಗಿ ಅಂಗನವಾಡಿ ಕೇಂದ್ರಗಳಿಗೂ ಶಿಕ್ಷಕರು ಹೋಗುತ್ತಿದ್ದಾರೆ’ ಎಂದರು.

ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಶಾಲೆ ಆರಂಭೋತ್ಸವಕ್ಕೆ ಜನಪ್ರತಿನಿಧಿಗಳನ್ನು ಆಹ್ವಾನಿಸುವುದಿಲ್ಲ. ಸಾಂಕೇತಿಕವಾಗಿ ನಾವೇ ಕಾರ್ಯಕ್ರಮ ಮಾಡಲಿದ್ದೇವೆ
–ಮೋಹನಕುಮಾರ, ಹಂಚಾಟೆ ಡಿಡಿಪಿಐ ಚಿಕ್ಕೋಡಿ

ಅಂಕಿ–ಸಂಖ್ಯೆ

ಶೇ 39.71 ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ ಉಚಿತವಾಗಿ ವಿತರಿಸಿದ ಪಠ್ಯಪುಸ್ತಕ

ಶೇ 53.58 ಮಾರಾಟದ ರೂಪದಲ್ಲಿ ವಿತರಿಸಿದ ಪಠ್ಯಪುಸ್ತಕ

ಶೇ 43.84 ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಉಚಿತವಾಗಿ ವಿತರಿಸಿದ ಪಠ್ಯಪುಸ್ತಕ

ಶೇ 55.17 ಮಾರಾಟದ ರೂಪದಲ್ಲಿ ವಿತರಣೆಯಾದ ಪಠ್ಯಪುಸ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT