ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖಾನಾಪುರ: ಮೋದಿಯದ್ದು ರಾಮಸೇನೆ, ‘ಇಂಡಿ’ ರಾವಣಸೇನೆ- ಏಕನಾಥ ಶಿಂದೆ

ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿಕೆ
Published 3 ಮೇ 2024, 8:56 IST
Last Updated 3 ಮೇ 2024, 8:56 IST
ಅಕ್ಷರ ಗಾತ್ರ

ಖಾನಾಪುರ: ‘ಪ್ರಧಾನಿ ನರೇಂದ್ರ ಮೋದಿ ಅವರು ರಾಮಸೇನೆ ಮುನ್ನಡೆಸುತ್ತಿದ್ದಾರೆ. ಆದರೆ ‘ಇಂಡಿ’ ಒಕ್ಕೂಟ ಹತ್ತು ತಲೆಯ ರಾವಣ ಸೇನೆಯನ್ನು ಒಳಗೊಂಡಿದೆ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಗುರುವಾರ ಟೀಕಿಸಿದರು.

ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರವಾಗಿ ಖಾನಾಪುರದಲ್ಲಿ ಪ್ರಚಾರ ಸಭೆಯಲ್ಲಿ ಅವರು, ‘ದೇಶಕ್ಕಾಗಿ ತಮ್ಮ ಜೀವನ ಸಮರ್ಪಿಸಿದ ಮೋದಿ ಎಲ್ಲಿ? ವಿದೇಶಗಳಲ್ಲಿ ಭಾರತದ ಮಾನಹಾನಿ ಮಾಡುವ ಕಾಂಗ್ರೆಸ್‌ ‘ಯುವರಾಜ’ ಎಲ್ಲಿ’ ಎಂದು ರಾಹುಲ್‌ ಗಾಂಧಿ ಹೆಸರು ಹೇಳದೆ ಲೇವಡಿ ಮಾಡಿದರು.

‘ಮೋದಿ 10 ವರ್ಷಗಳಲ್ಲಿ ದೇಶವನ್ನು ಪ್ರಗತಿಪಥದತ್ತ ಮುನ್ನಡೆಸಿದ್ದಾರೆ. ಭ್ರಷ್ಟರಹಿತ ಆಡಳಿತ ನೀಡಿದ್ದಾರೆ. ಯಾವುದೇ ಅಜೆಂಡಾ ಇಲ್ಲದ ‘ಇಂಡಿ’ ಮೈತ್ರಿ ಕೂಟದಿಂದ ಮೋದಿ ಅವರನ್ನು ಸೋಲಿಸುವುದು ಅಸಾಧ್ಯ’ ಎಂದರು.

‘60 ವರ್ಷಗಳಲ್ಲಿ ಆಗದಷ್ಟು ಅಭಿವೃದ್ಧಿ ಕೆಲಸಗಳನ್ನು ಮೋದಿ ಸರ್ಕಾರ ಹತ್ತೇ ವರ್ಷಗಳಲ್ಲಿ ಮಾಡಿದೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಹಗರಣಗಳು, ಭ್ರಷ್ಟಾಚಾರ ಮತ್ತು ಬಾಂಬ್ ಸ್ಫೋಟ ಸಾಮಾನ್ಯವಾಗಿದ್ದವು. ಇಂದು ದೇಶ ಅಭಿವೃದ್ಧಿಯತ್ತ ಹೆಜ್ಜೆಹಾಕುತ್ತಿದೆ’ ಎಂದರು.

‘ಕಾಂಗ್ರೆಸ್‌ ಸುಡುವ ಮನೆ ಎಂದಿದ್ದು ಅಂಬೇಡ್ಕರ್‌’: ‘ಮೋದಿ ಅವರು ಸಂವಿಧಾನ ಬದಲಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ಪ್ರಚಾರ ಮಾಡುತ್ತಿದ್ದಾರೆ. ಇಂತಹ ಅಪಪ್ರಚಾರಕ್ಕೆ ಜನತೆ ಬಲಿ ಆಗಬಾರದು. ಬಾಬಾಸಾಹೇಬ ಕಾಂಗ್ರೆಸ್ ಪಕ್ಷವನ್ನು ಸುಡುವ ಮನೆ ಎಂದು ಅಂಬೇಡ್ಕರ್ ಟೀಕಿಸಿದ್ದರು’ ಎಂದು ಶಿಂದೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT