ಶನಿವಾರ, ಡಿಸೆಂಬರ್ 7, 2019
21 °C

ಬೆಳಗಾವಿಯಲ್ಲಿ ನೌಕರರ ಭವನ ನಿರ್ಮಾಣ ಶೀಘ್ರ: ಸಿ.ಎಸ್‌.ಷಡಾಕ್ಷರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಬೆಂಗಳೂರಿನಲ್ಲಿ 3 ಎಕರೆ ಜಾಗದಲ್ಲಿ ಹಾಗೂ ಬೆಳಗಾವಿಯಲ್ಲಿ 2 ಎಕರೆ ಜಾಗದಲ್ಲಿ ನೌಕರರ ಭವನ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಶೀಘ್ರ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ ತಿಳಿಸಿದರು.

ನಗರದ ಗಾಂಧಿ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಪ್ರದಾನ ಹಾಗೂ ನೌಕರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಸಕ್ತ ಸಾಲಿನಲ್ಲಿ ನಗರದಲ್ಲಿ ಸರ್ಕಾರಿ ನೌಕರರಿಗೆ ರಾಜ್ಯಮಟ್ಟದ ಕ್ರೀಡಾಕೂಟ ಆಯೋಜಿಸಲಾಗುವುದು. ಉದ್ಘಾಟನೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಆಹ್ವಾನಿಸುತ್ತೇವೆ’ ಎಂದು ತಿಳಿಸಿದರು.

ಸಂತ್ರಸ್ತರಿಗೆ ಪರಿಹಾರ: ‘ಪ್ರವಾಹ ಸಂತ್ರಸ್ತರಿಗಾಗಿ ಸಂಘದಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ₹2 ಕೋಟಿ ದೇಣಿಗೆ ನೀಡಲಾಗಿದೆ. ಜಿಲ್ಲಾ ಘಟಕದ ಪದಾಧಿಕಾರಿಗಳು ಕೂಡ ಪ್ರವಾಹಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಅಗತ್ಯ ಪರಿಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ’ ಎಂದರು.

‘ಶಿಕ್ಷಕರ ಕಡ್ಡಾಯ ವರ್ಗಾವಣೆ ನೀತಿ ಶಿಕ್ಷಕರಿಗೆ ಮಾರಕವಾಗಿದೆ. ನಿಯಮ ತಿದ್ದುಪಡಿ ಮಾಡುವಂತೆ ಸರ್ಕಾರದ ಗಮನಕ್ಕೆ ತರಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಶಿಕ್ಷಕ ಸ್ನೇಹಿ ವರ್ಗಾವಣೆ ನಿಯಮ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿದ್ದಾರೆ’ ಎಂದು ಹೇಳಿದರು. 

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಕಾರ್ಯಕ್ರಮದಲ್ಲಿ ಜಿಲ್ಲೆಯ ಸರ್ಕಾರಿ ನೌಕರರ 162 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುತ್ತಿದೆ. 10 ಜನ ರೈತರ ಮಕ್ಕಳನ್ನೂ ಸನ್ಮಾನಿಸಲಾಗುತ್ತಿದೆ. ಸಂಘದ ಅಭಿವೃದ್ಧಿಗೆ ಸದಸ್ಯರು ಕೈಜೋಡಿಸಬೇಕು’ ಎಂದರು. 

ಸಂಘದ ಗೌರವಾಧ್ಯಕ್ಷ ವಿ.ವಿ.ಶಿವರುದ್ರಯ್ಯ ಮಾತನಾಡಿ, ‘ನೌಕರರು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ಸಲಹೆ ನೀಡಿದರು.

ಸನ್ಮಾನ–ಪದಗ್ರಹಣ: ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಸಂಘದ ಸದಸ್ಯರ‌ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ರಾಜ್ಯ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು.

ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ಜಗದೀಶ, ರಾಜ್ಯ ಘಟಕದ ಪದಾಧಿಕಾರಿಗಳಾದ ಆರ್.ಶ್ರೀನಿವಾಸ, ವಿ.ವಿ.ಶಿವರುದ್ರಯ್ಯ, ಮಲ್ಲಿಕಾರ್ಜುನ ಬಳ್ಳಾರಿ ಇದ್ದರು.

ನಾಗಾರ್ಜುನ ಮರೆಣ್ಣವರ ಸ್ವಾಗತಿಸಿದರು. ಮಹೇಶ ಚನ್ನಂಗಿ ನಿರೂಪಿಸಿದರು. ಅಂಜನಾ ಮುರಗೋಡ ವಂದಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು