ಅಂಧ ಮತದಾರರಿಗೆ ವಿಶೇಷ ಸೌಲಭ್ಯ; ಇವಿಎಂಗೆ ಬ್ರೈಲ್‌ ಲಿಪಿ ಸ್ಟಿಕ್ಕರ್‌!

ಸೋಮವಾರ, ಮೇ 20, 2019
32 °C
ಲೋಕಸಭಾ ಚುನಾವಣೆ;

ಅಂಧ ಮತದಾರರಿಗೆ ವಿಶೇಷ ಸೌಲಭ್ಯ; ಇವಿಎಂಗೆ ಬ್ರೈಲ್‌ ಲಿಪಿ ಸ್ಟಿಕ್ಕರ್‌!

Published:
Updated:

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಅಂಧ ಮತದಾರರಿಗೆ ಅನುಕೂಲವಾಗಲೆಂದು ವಿದ್ಯುನ್ಮಾನ್‌ ಮತ ಯಂತ್ರದ (ಇವಿಎಂ) ಮೇಲೆ ಬ್ರೈಲ್‌ ಲಿಪಿಯ ಸ್ಟಿಕ್ಕರ್‌ ಅಳವಡಿಸಲು ಚುನಾವಣಾ ಆಯೋಗ ತೀರ್ಮಾನಿಸಿದೆ. ಇದೇ ತಿಂಗಳ 23ರಂದು ಬೆಳಗಾವಿ, ಚಿಕ್ಕೋಡಿ ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಅಂಧರು ಸೇರಿದಂತೆ ಎಲ್ಲ ಅಂಗವಿಕಲ ಮತದಾರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಚುನಾವಣಾ ಆಯೋಗ ಮುಂದಾಗಿದೆ.

ಜಿಲ್ಲೆಯಲ್ಲಿ 2,423 ಅಂಧ ಮತದಾರರು ಇದ್ದಾರೆ. ಇವರ ಅನುಕೂಲಕ್ಕಾಗಿ ಆಯೋಗವು ಹಲವು ಕ್ರಮಗಳನ್ನು ಕೈಗೊಂಡಿದೆ. ಮತದಾನಕ್ಕೂ ಎರಡು– ಮೂರು ದಿನಗಳ ಮೊದಲು ಇವರ ಮನೆಗಳಿಗೆ ಬ್ರೈಲ್‌ ಲಿಪಿಯಲ್ಲಿ ಮುದ್ರಿಸಲಾದ ಮಾದರಿ ಇವಿಎಂ ಮತಪತ್ರ ನೀಡಲಾಗುತ್ತದೆ. ಇವುಗಳ ಮೇಲೆ ಕೈಯಾಡಿಸಿ, ತಮ್ಮ ಸ್ಪರ್ಶಜ್ಞಾನದಿಂದ ಅಭ್ಯರ್ಥಿಗಳ ವಿವರವನ್ನು ತಿಳಿದುಕೊಳ್ಳಬಹುದಾಗಿದೆ.

ಕ್ರಮ ಸಂಖ್ಯೆ, ಅಭ್ಯರ್ಥಿಯ ಹೆಸರು, ಪಕ್ಷದ ಹೆಸರು ಹಾಗೂ ಪಕ್ಷದ ಚಿಹ್ನೆಯನ್ನು ಬ್ರೈಲ್‌ ಲಿಪಿಯಲ್ಲಿ ಮುದ್ರಿಸಲಾಗಿರುತ್ತದೆ. ಇವುಗಳನ್ನು ಮತದಾರರು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಇವಿಎಂ ಮೇಲೆ ಇರುವ ಕ್ರಮ ಸಂಖ್ಯೆಯನ್ನು ಬ್ರೈಲ್‌ ಲಿಪಿಯಲ್ಲಿ ನೀಡಲಾಗಿದೆ. ಮತ ಚಲಾಯಿಸುವ ವೇಳೆ ಈ ಸಂಖ್ಯೆಯ ಮೇಲೆ ಬೆರಳಾಡಿಸಿ, ಯಾವ ಅಭ್ಯರ್ಥಿ, ಯಾವ ಪಕ್ಷ ಎನ್ನುವುದನ್ನು ಗುರುತಿಸಬಹುದಾಗಿದೆ. ತಮಗೆ ಇಷ್ಟವಾದ ಅಭ್ಯರ್ಥಿಯನ್ನು ಹುಡುಕಿ, ಮತ ಚಲಾಯಿಸಬಹುದಾಗಿದೆ.

ಪಂಚಾಯ್ತಿಗೊಂದು ಕೈಪಿಡಿ:

ಪ್ರತಿ ಗ್ರಾಮ ಪಂಚಾಯ್ತಿಗೊಂದು ಬ್ರೈಲ್‌ ಲಿಪಿಯಲ್ಲಿ ಮುದ್ರಿಸಲಾದ ಕೈಪಿಡಿಯನ್ನು ನೀಡಲಾಗಿದೆ. ಚುನಾವಣೆಯ ಪ್ರಕ್ರಿಯೆ, ಚುನಾವಣೆಯ ಸಮಯ, ಮತಗಟ್ಟೆಯ ವಿವರಗಳನ್ನು ಇದು ಒಳಗೊಂಡಿರುತ್ತದೆ. ಇದರ ಮೂಲಕವೂ ಅಂಧ ಮತದಾರರಿಗೆ ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ.

24,796 ಅಂಗವಿಕಲ ಮತದಾರರು:

ಜಿಲ್ಲೆಯಲ್ಲಿ 2,423 ದೃಷ್ಟಿ ದೋಷವುಳ್ಳವರು, 1,178 ಶ್ರವಣ ದೋಷವುಳ್ಳವರು, 13,690 ದೈಹಿಕ, 7,235 ಇತರೆ ಅಂಗ ನ್ಯೂನ್ಯತೆ ಇರುವವರು ಸೇರಿದಂತೆ ಒಟ್ಟು ಜಿಲ್ಲೆಯಲ್ಲಿ 24,796 ಅಂಗವಿಕಲರು ಇದ್ದಾರೆ. ಮತದಾನದ ದಿನದಂದು ಇವರನ್ನು ಮತಗಟ್ಟೆಯವರೆಗೆ ಕರೆದುಕೊಂಡು ಬರಲು ಹಾಗೂ ವಾಪಸ್‌ ಕಳುಹಿಸಲು ಜಿಲ್ಲಾಡಳಿತದ ವತಿಯಿಂದ ವಾಹನ ವ್ಯವಸ್ಥೆ ಮಾಡಲಾಗಿದೆ.

ವಿಕಲಚೇತನ ಸ್ನೇಹಿ ಮತಗಟ್ಟೆ:

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗಾಗಿ ‘ಪಿಂಕ್‌’ ಮತಗಟ್ಟೆ ನಿರ್ಮಿಸಿದ ಮಾದರಿಯಲ್ಲಿ ಈ ಸಲ ಬೆಳಗಾವಿ ದಕ್ಷಿಣ ಹಾಗೂ ಚಿಕ್ಕೋಡಿಯಲ್ಲಿ ‘ವಿಕಲಚೇತನ ಸ್ನೇಹಿ’ ಮತಟ್ಟೆಗಳನ್ನು ನಿರ್ಮಿಸಲಾಗಿದೆ. ರ‍್ಯಾಂಪ್‌ಗಳ ನಿರ್ಮಾಣ, ಭೂತಗನ್ನಡಿ, ಶ್ರವಣ ದೋಷವುಳ್ಳವರಿಗೆ ಸಂಜ್ಞಾ ಭಾಷಾ ಪೋಸ್ಟರ್ಸ್‌, ಅಂಧರಿಗೆ ಬಿಳಿಕೋಲು, ಬ್ರೈಲ್‌ ಕರಪತ್ರ, ಬ್ರೈಲ್‌ ಕೈಪಿಡಿ, ಬ್ರೈಲ್ ಸ್ಟಿಕ್ಕರ್‌, ಸೇರಿದಂತೆ ಹಲವು ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಂತಹ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಕೂಡ ಅಂಗವಿಕಲರಿರುತ್ತಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !