ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಜೀವನಕ್ಕೆ ‘ಸಿಹಿ’ ಕೊಟ್ಟ ಸೀಬೆ

Last Updated 15 ಜುಲೈ 2019, 19:30 IST
ಅಕ್ಷರ ಗಾತ್ರ

ಅಥಣಿ: ಸಾಂಪ್ರದಾಯಿಕ ಕೃಷಿ ಬದಲಿಗೆ ಸೀಬೆ ಬೆಳೆಯ ಬೇಸಾಯ ಮಾಡುತ್ತಿರುವ ಇಲ್ಲಿನ ಹೊರವಲಯದಲ್ಲಿರುವ ಕುಟುಂಬವೊಂದು, ಪ್ರತಿ ವರ್ಷ ಆದಾಯದ ‘ಸಿಹಿ’ ಕಾಣುತ್ತಿದೆ.

ಭಂಗಿ ಕುಟುಂಬದವರು, 16 ಗುಂಟೆ ಜಮೀನಿನಲ್ಲಿ ಲಕ್ಷ ರೂಪಾಯಿ ಆದಾಯ ಪಡೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಸದ್ಯ ಅವರ ಜಮೀನಿನಲ್ಲಿ 50 ಸೀಬೆ (ಪೇರು) ಗಿಡಗಳಿದ್ದು, ಅವುಗಳಿಂದ ಉತ್ತಮ ಇಳುವರಿ ಬರುತ್ತಿದೆ. 14 ವರ್ಷಗಳಿಂದಲೂ ಇವುಗಳನ್ನು ಪೋಷಿಸುತ್ತಿರುವ ಅವರು, ವಾರ್ಷಿಕ ₹ 1.30 ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ. ಇದು ಇತರ ರೈತರ ಗಮನವನ್ನೂ ಸೆಳೆದಿದೆ. ದಲ್ಲಾಳಿಗಳ ಮೊರೆ ಹೋಗದೇ ತಾವೇ ಮಾರುಕಟ್ಟೆಗೆ ಹೋಗಿ ಮಾರುವ ಅವರ ವಿಶ್ವಾಸವೂ ಮಾದರಿ ಎನಿಸಿದೆ.

ಪ್ರಸ್ತುತ, 26 ವರ್ಷದ ಸಂಜಯ ಭಂಗಿ ಬೇಸಾಯ ಮಾಡುತ್ತಿದ್ದಾರೆ. ಹದಿನಾಲ್ಕು ವರ್ಷಗಳ ಹಿಂದೆ ಅವರ ತಂದೆ 60 ಗಿಡಗಳನ್ನು ನೆಟ್ಟಿದ್ದರು. ಅವರೀಗ ಬೇರೆ ಕಡೆ ಇರುವ ಬೇರೆಯವರ 16 ಎಕರೆ ಜಮೀನಿನಲ್ಲಿ ಕೃಷಿ ನೋಡಿಕೊಳ್ಳುತ್ತಿರುವುದರಿಂದ, ಸೀಬೆ ತೋಟವನ್ನು ಸಂಜಯ ನಿರ್ವಹಿಸುತ್ತಿದ್ದಾರೆ. ಕಾಲಕಾಲಕ್ಕೆ ಗಿಡಗಳ ಪೋಷಣೆಯ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಈ ಸಸಿಗಳನ್ನು ನೆಟ್ಟ ಮೇಲೆ ಮೊದಲ 4 ವರ್ಷ ಯಾವುದೇ ಆದಾಯದ ನಿರೀಕ್ಷೆ ಅವರಿಗೆ ಇರಲಿಲ್ಲ. ಏಕೆಂದರೆ, ಸಸಿಗಳು ಬೆಳೆದು ಕಾಯಿಗಳನ್ನು ಬಿಡುವುದಕ್ಕೆ ಸಮಯ ಬೇಕಾಗುತ್ತದೆ. ಬಳಿಕ ಆದಾಯ ಬರಲು ಶುರುವಾಗುತ್ತದೆ. ಇದಾಗಿ, 9 ವರ್ಷಗಳಿಂದಲೂ ಅವರಿಗೆ ಸೀಬೆ ಹಣ್ಣು, ಕಾಯಿಗಳು ಆರ್ಥಿಕವಾಗಿ ನೆರವಾಗಿವೆ.

‘ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಶೇಗಾಂವದಿಂದ ಪೇರು ಸಸಿಗಳನ್ನು ತಂದು ನೆಟ್ಟಿದ್ದೇವೆ. ಇವು ವರ್ಷಕ್ಕೆ ಎರಡು ಬಾರಿ ಕಾಯಿಗಳನ್ನು ಬಿಡುತ್ತವೆ. ಮಾರ್ಚ್‌ನಿಂದ ಒಮ್ಮೆ ಹಾಗೂ ಜೂನ್‌ನಿಂದ ಇನ್ನೊಮ್ಮೆ ಫಲ ಕೊಡುತ್ತವೆ. ಬೇಸಿಗೆಯಲ್ಲಿ ದೊರೆಯುವ ಕಾಯಿಗಳು ಅಷ್ಟೊಂದು ರುಚಿಯಾಗಿರುವುದಿಲ್ಲ. ಬಳಿಕವಷ್ಟೇ ಅವುಗಳನ್ನು ಕೀಳುತ್ತೇವೆ. ಆಗ ತುಂಬಾ ರುಚಿಯಾಗಿರುತ್ತವೆ. ಒಳ್ಳೆಯ ರುಚಿ ಇದ್ದರೆ ಮಾತ್ರ ಜನರು ಖರೀದಿಸುತ್ತಾರೆ; ಮಾರುಕಟ್ಟೆಯಲ್ಲೂ ಅವುಗಳಿಗೆ ಬೇಡಿಕೆ ಇರುತ್ತದೆ’ ಎಂದು ಸಂಜಯ ‘ಪ್ರಜಾವಾಣಿ’ಯೊಂದಿಗೆ ಅನುಭವ ಹಂಚಿಕೊಂಡರು.

‘ಈ ಸಸಿಗಳಿಗೆ ವರ್ಷಕ್ಕೆ 2 ಬಾರಿ ರಸಗೊಬ್ಬರ, ಒಮ್ಮೆ ಔಷಧ ಸಿಂಪಡಿಸಿದರೆ ಸಾಕು. ನಂತರ ಯಾವುದೇ ಚಿಂತೆ ಇರುವುದಿಲ್ಲ. ನೀರು ಕೊಡುವ ‍ಪ್ರಮಾಣ ಹೆಚ್ಚಾದರೆ ಬೀಳಿ ಕೀಟಗಳು ಗಿಡಗಳಿಗೆ ತೊಂದರೆ ಕೊಡುತ್ತವೆ. ಇವುಗಳನ್ನು ನಿವಾರಿಸಲು ಆ ಸಂದರ್ಭದಲ್ಲಿ ಔಷಧ ಸಿಂಪಡಣೆ ಮಾಡಬೇಕಾಗುತ್ತದೆ. ಒಂದೆರಡು ಬಾರಿ ಡಿಎಪಿ ಗೊಬ್ಬರ ಹಾಕಿದರೆ ಸಾಕು. ಮತ್ತೆ ಯಾವುದೇ ಔಷಧದ ಅಗತ್ಯ ಕಾಣುವುದಿಲ್ಲ. ಒಳ್ಳೆಯ ಫಸಲನ್ನು ಪಡೆಯಬಹುದು’ ಎನ್ನುತ್ತಾರೆ ಅವರು.

‘ನಾನೇ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡುತ್ತೇನೆ. ಬಹಳ ಮಂದಿ ದಲ್ಲಾಳಿಗಳು ಬಂದು ಖರೀದಿಗೆ ವಿಚಾರಿಸಿದರು. ಆದರೆ, ದಲ್ಲಾಳಿಗಳಿಗೆ ಕೊಡಲು ಮನಸ್ಸಾಗಲಿಲ್ಲ. ಹೀಗಾಗಿ, ನಾನೇ ನೇರವಾಗಿ ಮಾರುತ್ತೇನೆ. ದಲ್ಲಾಳಿಗಳು ಕೆ.ಜಿ.ಗೆ ₹ 30ರಿಂದ ₹35 ಕೊಡುವುದಾಗಿ ತಿಳಿಸುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಮಾರಿದರೆ ಕೆ.ಜಿ.ಗೆ ₹ 50ರವರೆಗೂ ಸಿಗುತ್ತದೆ. ಲಾಭವೋ, ನಷ್ಟವೋ ಅದು ನಮಗೇ ಇರಲಿ ಎನ್ನುವುದು ನಮ್ಮ ಉದ್ದೇಶವಾಗಿದೆ’ ಎಂದರು. ಸಂಪರ್ಕಕ್ಕೆ: 9686512797.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT