ನೇಸರಗಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ, ನೇಸರಗಿ ಗ್ರಾಮಸ್ಥರು ಕೆ.ಎನ್. ಮಲ್ಲಾಪುರದಲ್ಲಿರುವ ಹೆಸ್ಕಾಂ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ರೈತರ ತೀವ್ರ ಪ್ರತಿಭಟನೆಯಿಂದಾಗಿ ಸ್ವತಃ ಶಾಸಕ, ಹೆಸ್ಕಾಂ ಅಧಿಕಾರಿಗಳೇ ಸ್ಥಳಕ್ಕೆ ದೌಡಾಯಿಸಿದರು.
ಗ್ರಾಮದ ಮುಖಂಡರಾದ ಬಾಳಪ್ಪ ಮಾಳಗಿ, ಸೋಮನಗೌಡ ಪಾಟೀಲ ಮಾತನಾಡಿ, ‘ಇದೀಗ ದಿಡೀರ್ ಆಗಿ ಹೆಸ್ಕಾಂ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಮಾಡುತ್ತಿದೆ. ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ರಾತ್ರಿ ವೇಳೆ ವಿದ್ಯುತ್ ಸಂಪರ್ಕ ಮಾಡಿದಾಗ ಹುಳ– ಹುಪ್ಪಡಿಗಳಿಂದ ಪ್ರಾಣಾಪಾಯವಾಗುವ ಸಂಭವ ಇರುವುದರಿಂದ ಇಲ್ಲಿಯ ವಿದ್ಯುತ್ ಸಮಸ್ಯೆ ಪರಿಹರಿಸಬೇಕು’ ಎಂದರು.
ಸ್ಥಳಕ್ಕೆ ಭೇಟಿ ನೀಡಿದ ಬೈಲಹೊಂಗಲ ಕೆಇಬಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವೈಶಾಲಿ ತುಡವೇಕರ ಮಾತನಾಡಿ, ‘ವಿದ್ಯುತ್ ಸಮಸ್ಯೆ ರಾಜ್ಯದ ಎಲ್ಲ ಕಡೆ ಇದೆ. ಸ್ವಲ್ಪ ದಿನ ಸಹಕರಿಸಿಕೊಂಡು ಹೋಗಬೇಕು. ಶೀಘ್ರದಲ್ಲಿ ನಿಯಮಿತ ವಿದ್ಯುತ್ ಪೂರೈಸಲಾಗುವುದು’ ಎಂದರು.
ಇದಕ್ಕೆ ಒಪ್ಪದ ಪ್ರತಿಭಟನಾಕಾರರು, ‘ರೈತರ ಪಂಪ್‌ಸೆಟ್‌ಗಳಿಗೆ ಹಗಲಿನ ವೇಳೆಯಲ್ಲಿ 7 ತಾಸು ವಿದ್ಯುತ್ ಪೂರೈಕೆ ಮಾಡಬೇಕು’ ಎಂದು ಪಟ್ಟು ಹೀಡಿದರು.
ಈ ವೇಳೆ ಸ್ಥಳಕ್ಕೆ ಧಾವಿಸಿದ ಚನ್ನಮ್ಮನ ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ರೈತರನ್ನು ಸಮಾಧಾನ ಮಾಡಲು ಯತ್ನಿಸಿದರು.
‘ಈ ಬಾರಿ ಮಳೆ ಕೈ ಕೊಟ್ಟಿದ್ದರಿಂದ ಸರ್ಕಾರದ ಮಟ್ಟದಲ್ಲಿ ಸ್ವಲ್ಪ ದಿನಗಳ ಮಟ್ಟಿಗೆ ಲೋಡ್‌ಶೆಡ್ ಮಾಡುವಂತೆ ಆದೇಶಿಸಿದ್ದಾರೆ. ಇಡೀ ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತಿದೆ. ರೈತರು ಅಧಿಕಾರಿಗಳಿಗೆ ಸಹಕಾರ ಮಾಡಬೇಕು. ವಿದ್ಯುತ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದ ಮೇಲೆ ರೈತರ ಸಮಯದ ಪ್ರಕಾರ ವಿದ್ಯುತ್ ನೀಡುತ್ತಾರೆ’ ಎಂದರು.
‘ಪ್ರತಿ ದಿನ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಹಾಗೂ ರಾತ್ರಿ 10ರಿಂದ ಮಧ್ಯರಾತ್ರಿ 12ರವರೆಗೆ ವಿದ್ಯುತ್ ನೀಡುತ್ತೇವೆ’ ಎಂದು ಸ್ಥಳದಲ್ಲಿದ್ದ ಹೆಸ್ಕಾಂ ಶಾಖಾಧಿಕಾರಿ ಮುಚ್ಚಳಿಕೆ ಬರೆದು ಕೊಟ್ಟರು. ನಂತರವಷ್ಟೇ ಪ್ರತಿಭಟನಾಕಾರರು ಧರಣಿ ಹಿಂಪಡೆದರು.
ನೇಸರಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ ಮಾಳನ್ನವರ, ಮುಖಂಡರಾದ ಈರಪ್ಪ ಮಧನಭಾವಿ, ಸದೆಪ್ಪ ಮೂಲಿಮನಿ, ಬಂಗಾರೆಪ್ಪ ಮಾಳನ್ನವರ, ಈರಪ್ಪ ಮಧನಬಾವಿ, ಪ್ರಭು ಕಳ್ಳಿಬಡ್ಡಿ, ಮುರಗೇಶ ಗಡದವರ, ಶಿವಾನಂದ ಮೂಲಿಮನಿ, ಪ್ರಕಾಶ ಹೊಂಗಲ, ಮಲ್ಲೇಶಪ್ಪ ಗೂರನವರ, ಗುರುಬಸಪ್ಪ ತರಗಾರ, ಕೆಂಚಪ್ಪ ಕಳ್ಳಿಬಡ್ಡಿ, ಗುರುಬಸು ಶಿಂತ್ರಿ, ಮಲ್ಲಿಕಾರ್ಜುನ ಹೊಂಗಲ, ಸುಜಾತಾ ತುಬಾಕಿ, ದೇಮಣ್ಣ ಗುಜನಟ್ಟಿ, ಸಲೀಂ ನದಾಫ, ಮಕಬುಲ್ ಬೇಪಾರಿ, ಸೋಮಶೇಖರ ಮಾಳನ್ನವರ ಇದ್ದರು.
ಹೆಸ್ಕಾಂ ಶಾಖಾಧಿಕಾರಿ ವಸಂತಗೌಡ ಪಾಟೀಲ, ಕಿರಿಯ ಎಂಜಿನಿಯರ್ ಎಂ.ಎಸ್ ಹಿಪ್ಪರಗಿ, ಪ್ರಕಾಶ ಹೊಸಮನಿ, ವಿ.ಕೆ. ಚಾಪಗಾಂವ, ಹಾಗೂ ಪಿಎಸ್ಐ ವೈ.ಎಲ್ .ಶೀಗಿಹಳ್ಳಿ, ಎಸ್.ಆರ್. ದೇಸಾಯಿ, ಎಸ್.ಎಂ. ಯರಗಟ್ಟಿ, ಆರ್.ಎಸ್. ಪಾಟೀಲ, ಎ.ಕೆ. ಡೊಂಬರ ಸೇರಿದಂತೆ ಇತರ ಅಧಿಕಾರಿಗಳೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.