ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ಕಿತ್ತೂರು: ಬದುಕಿಗೆ ಸಿಹಿ ತಂದ ಮಾವು ಕೃಷಿ

ಬಾಳಾಸಾಹೇಬ ದೇಶಪಾಂಡೆ ಅವರ ವ್ಯವಸಾಯಕ್ಕೆ ಇಡೀ ಕುಟುಂಬದ ಸಹಕಾರ
Published 23 ಜೂನ್ 2023, 5:30 IST
Last Updated 23 ಜೂನ್ 2023, 5:30 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆಯಿಂದ ಮುಕ್ತರಾಗಿ, ಸಾವಯವ ಪದ್ಧತಿ ಅಳವಡಿಸಿಕೊಂಡು ಬೆಳೆಸಿದ ಮಾವು ತಾಲ್ಲೂಕಿನ ಬೈಲೂರು ಗ್ರಾಮದ ಬಾಳಾಸಾಹೇಬ ಶ್ರೀನಿವಾಸ ದೇಶಪಾಂಡೆ ಅವರ ಬದುಕಿನಲ್ಲಿ ಸಿಹಿ ತಂದಿದೆ.

ಕೆಲವು ರೋಗಗಳು ಮತ್ತು ಮಾರುಕಟ್ಟೆ ವ್ಯವಸ್ಥೆಯಿಂದ ಮಾವು ಕೃಷಿ ನರಳುತ್ತಿದೆ. ಆದರೆ, ಸಾವಯವ ಪದ್ಧತಿ ಮತ್ತು ತಾವೇ ಸೃಷ್ಟಿ ಮಾಡಿಕೊಂಡ ಮಾರುಕಟ್ಟೆ ವ್ಯವಸ್ಥೆ ಪ್ರಸಕ್ತ ವರ್ಷದಲ್ಲಿ ಲಕ್ಷಾಂತರ ರೂಪಾಯಿ ಲಾಭವನ್ನು ಅವರಿಗೆ ತಂದುಕೊಟ್ಟಿದೆ.

‘12 ಎಕರೆ ಭೂಮಿಯಲ್ಲಿ ಮಾವಿನ ಸಸಿ ನೆಡಲಾಗಿದೆ. ಇದರ ಜತೆಯಲ್ಲಿಯೇ ಕಬ್ಬು, ಇತರೆ ತೋಟಗಾರಿಕೆ ಬೆಳೆಗಳಾದ ಬದನೆ, ಮೆಣಸಿನಕಾಯಿ ಬೆಳೆದಿದ್ದೇನೆ. ಬದನೆ ಸುಗ್ಗಿ ಮುಗಿದಿದೆ. ಇದರಲ್ಲಿ ನಿರೀಕ್ಷೆಯಂತೆ ಲಾಭ ಸಿಗಲಿಲ್ಲ’ ಎನ್ನುತ್ತಾರೆ ಬಾಳಾಸಾಹೇಬ.

ಕೃಷಿ ಕುಟುಂಬ: ಬಾಳಾಸಾಹೇಬ ಅವರದ್ದು ಮೂಲತಃ ಕೃಷಿ ಕುಟುಂಬ. ಹಿರಿಯರು ಇದೇ ವೃತ್ತಿಯಲ್ಲಿದ್ದರು. ಪತ್ನಿ ಅಶ್ವಿನಿ ಮತ್ತು ಪುತ್ರಿ ಭಕ್ತಿ ಅವರು ಬಾಳಾಸಾಹೇಬರ ವ್ಯವಸಾಯಕ್ಕೆ ಅಕ್ಷರಶಃ ಬೆನ್ನಲುಬಾಗಿ ನಿಂತಿದ್ದಾರೆ. ಮೂವರು ಸೇರಿ ಕೃಷಿ ಕಾಯಕ ಮಾಡುತ್ತಾರೆ. ಇಡೀ ಕುಟುಂಬ ನೆರವಾಗುವುದರಿಂದ ಬಾಳಾಸಾಹೇಬ ಅವರ ವ್ಯವಸಾಯ ಲಾಭದತ್ತ ಸಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ಸಂಸ್ಕರಣವೂ ಮುಖ್ಯ: ‘ಮಾವಿನ ಗಿಡಗಳು ಹೂವು ಬಿಡುತ್ತಿದ್ದಾಗಲೇ ದಲ್ಲಾಳಿಗಳಿಗೆ ಮಾರಾಟಕ್ಕೆ ಕೊಡುವುದು ವಾಡಿಕೆ. ಕೆಲವರು ಕಾಯಿಯಾಗುವವರೆಗೆ ಕಾಯುತ್ತಾರೆ. ಆದರೆ, ಇನ್ನೊಂದು ಹೆಜ್ಜೆ ಮುಂದೆ ಹೋಗಿ ಅವುಗಳನ್ನು ವತಿಗೆ ಹಾಕಿ, ಹಣ್ಣು ಮಾಡಿ ಮಾರಾಟ ಮಾಡಿದರೆ ಹೆಚ್ಚು ಲಾಭ ಗಿಟ್ಟಿಸಿಕೊಳ್ಳಬಹುದು’ ಎನ್ನುತ್ತಾರೆ ದೇಶಪಾಂಡೆ.

‘12 ಎಕರೆ ತೋಟದಲ್ಲಿ ಬೆಳೆದಿದ್ದ ಮಾವಿನ ಕಾಯಿಯನ್ನು ಮಾರಾಟ ಮಾಡಲು ಮನಸ್ಸು ಮಾಡಿದಾಗ, ದಲ್ಲಾಳಿಗಳು ₹1.5 ಲಕ್ಷಕ್ಕೆ ಕೇಳಿದ್ದರು. ಆದರೆ, ನಾವೇ ಹಣ್ಣು ಮಾಡಿ ಧಾರವಾಡ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದರಿಂದ ₹6 ಲಕ್ಷದವರೆಗೂ ಆದಾಯ ಬಂತು’ ಎಂದು ಅವರು ಮಾಹಿತಿ ನೀಡಿದರು.

ಬೈಲೂರಿನಲ್ಲಿ ಟ್ರ್ಯಾಕ್ಟರ್‌ನಿಂದ ಹೊಲ ಉಳುಮೆ ಮಾಡುತ್ತಿರುವ ಭಕ್ತಿ ದೇಶಪಾಂಡೆ
ಬೈಲೂರಿನಲ್ಲಿ ಟ್ರ್ಯಾಕ್ಟರ್‌ನಿಂದ ಹೊಲ ಉಳುಮೆ ಮಾಡುತ್ತಿರುವ ಭಕ್ತಿ ದೇಶಪಾಂಡೆ
ಸಾವಯವ ಕೃಷಿ ಬಳಗ ರಚಿಸಿಕೊಂಡಿರುವ ಗುಂಪಿನಲ್ಲಿ ನಾನೂ ಒಬ್ಬ ಸದಸ್ಯ. ಎಲ್ಲ ಸದಸ್ಯರ ಪ್ರೇರಣೆಯಿಂದ ಸಾವಯವ ಕೃಷಿ ಪದ್ಧತಿಯಲ್ಲಿ ಆಸಕ್ತಿ ಹೆಚ್ಚಿದೆ
-ಬಾಳಾಸಾಹೇಬ ದೇಶಪಾಂಡೆ ರೈತ

‘ಮಾರುಕಟ್ಟೆಯಲ್ಲಿ ಸಾವಯವ ಆಹಾರ ಪದಾರ್ಥಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ. ಧಾರಣಿಯೂ ಹೆಚ್ಚಾಗಿರುತ್ತದೆ. ರಾಸಾಯನಿಕ ಮುಕ್ತ ಆಹಾರ ವಸ್ತುಗಳನ್ನು ಕೊಳ್ಳುವವರ ಸಂಖ್ಯೆಯೂ ನಿಧಾನವಾಗಿ ಹೆಚ್ಚಾಗುತ್ತಿದೆ. ಹೀಗಾಗಿ ಕೆಲವು ವರ್ಷಗಳಿಂದ ಹಿಡಿ ರಾಸಾಯನಿಕ ಗೊಬ್ಬರ ಬಳಕೆ ಮಾಡುವುದನ್ನು ಬಿಟ್ಟೆದ್ದೇನೆ. ಸಣಬು ಬೆಳದು ಮಣ್ಣಿನಲ್ಲಿ ಮುಚ್ಚಿ ಗಳೆ ಹೊಡೆಯುತ್ತೇನೆ. ಬೆಳೆಗಳಿಗೆ ಗೋಕೃಪಾಮೃತ ಸಿಂಪರಣೆ ಮಾಡುತ್ತೇನೆ’  ಎಂದು ತಾವು ಕೈಗೊಂಡಿರುವ ಕೃಷಿಯ ಬಗ್ಗೆ ವಿವರಿಸಿದರು. ಮಾಹಿತಿಗೆ ಮೊ.ಸಂ.9902673657 ಸಂಪರ್ಕಿಸಬಹುದು.

ಮಗಳೇ ಮೇಟಿ!
‘ಹೊಲ ಉಳುಮೆ ಮಾಡುವುದರಲ್ಲಿ ಮಗಳು ಭಕ್ತಿಯದ್ದೇ ಹೆಚ್ಚಿನ ಪಾತ್ರ. ಟ್ರ್ಯಾಕ್ಟರ್ ಚಲಾಯಿಸುವ ಅವಳು ಬಿತ್ತುವ ಪೂರ್ವದಲ್ಲಿ  ಹೊಲದ ಸಿದ್ಧತೆ ಮಾಡುತ್ತಾಳೆ. ನೇಗಿಲು ಕುಂಟಿ ಗುರುದಾಳ ಕಬ್ಬು ಹಾಕುವುದಿದ್ದರೆ ಸಾಲನ್ನೂ ಬಿಡುತ್ತಾಳೆ’ ಎಂದು ಬಾಳಾಸಾಹೇಬ ಸಂತಸ ಹಂಚಿಕೊಂಡರು. ಧಾರವಾಡದಲ್ಲಿ ಪಿಯು ಓದುತ್ತಿರುವ ಭಕ್ತಿ ದೇಶಪಾಂಡೆ ‘ಕೃಷಿಯಲ್ಲಿಯೇ ಪದವಿ ಪಡೆಯುವ ಗುರಿ ನನ್ನದು’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT