ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ರೈತರ ಪರಿಹಾರದ ಹಣ ಸಾಲಕ್ಕೆ ಜಮಾ ಆರೋಪ, ವಿಮಾ ಮೊತ್ತ ಬಿಡುಗಡೆಗೆ ಆಗ್ರಹ

ಪರಿಹಾರದ ಹಣ ಸಾಲಕ್ಕೆ ಜಮಾ: ಆರೋಪ
Last Updated 4 ಸೆಪ್ಟೆಂಬರ್ 2018, 11:10 IST
ಅಕ್ಷರ ಗಾತ್ರ

ಬೆಳಗಾವಿ: ಫಸಲ್ ಬಿಮಾ ಯೋಜನೆಯಡಿ ನೋಂದಾಯಿಸಿದ ರೈತರಿಗೆ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ರೈತ ಮುಖಂಡರು ಇಲ್ಲಿನ ಮಾರುತಿ ಗಲ್ಲಿಯಲ್ಲಿರುವ ಸಿಂಡಿಕೇಟ್ ಬ್ಯಾಂಕ್‌ ಮುಖ್ಯ ಶಾಖೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಮಹಾಂತೇಶ ಹಿರೇಮಠ ಮಾತನಾಡಿ, ‘ಯೋಜನೆಯಡಿ ಎಷ್ಟು ರೈತರಿಗೆ, ಎಷ್ಟು ಹಣ ಬಿಡುಗಡೆಯಾಗಿದೆ ಎಂಬ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ನೀಡುತ್ತಿಲ್ಲ. ಈ ಮುಖ್ಯ ಶಾಖೆ ಒಂದರಲ್ಲಿಯೇ ₹64 ಲಕ್ಷ ಬಾಕಿ ಉಳಿದಿದೆ. ಉಳಿದ ಶಾಖೆಗಳಿಂದಲೂ ಕೊಟ್ಟಿಲ್ಲ. 2015–16ನೇ ಸಾಲಿನಲ್ಲಿ ಮಂಜೂರಾದ ಹಣವನ್ನೂ ಬಾಕಿ ಉಳಿಸಿಕೊಳ್ಳಲಾಗಿದೆ. ಎಸ್‌ಬಿಐ ಶಾಖೆಗಳಲ್ಲೂ ಹೀಗೆಯೇ ಆಗಿದೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ದೂರಿದರು.

‘ವಿಚಾರಿಸಲು ಹೋಗುವ ರೈತರಿಗೆ, ಬ್ಯಾಂಕ್‌ ಸಿಬ್ಬಂದಿ ನೆಪಗಳನ್ನು ಹೇಳಿ ಕಳುಹಿಸುತ್ತಿದ್ದಾರೆ. ಸರ್ಕಾರದಿಂದ ಹಣ ಬಂದಿಲ್ಲ ಎಂದೂ ತಿಳಿಸುತ್ತಾರೆ. ಕೆಲವು ಬ್ಯಾಂಕ್‌ಗಳಲ್ಲಿ, ವಿಮಾ ಹಣವನ್ನು ಸಾಲದ ಬಾಕಿಗೆ ಜಮಾ ಮಾಡಿಕೊಳ್ಳುತ್ತಿರುವುದೂ ಇದೆ’ ಎಂದು ಆರೋಪಿಸಿದರು.

‘ಪ್ರತಿಭಟನೆ ನಡೆಸುತ್ತಿದ್ದಂತೆಯೇ, ಬೈಲಹೊಂಗಲ ತಾಲ್ಲೂಕು ದೇಶನೂರು ಶಾಖೆಯಲ್ಲಿ 392 ರೈತರಿಗೆ ಬರಬೇಕಾದ ವಿಮಾ ಹಣ ಬಿಡುಗಡೆ ಮಾಡಲಾಗಿದೆ. ಯಾವ್ಯಾವ ರೈತರ ಖಾತೆಗೆ ಹಣ ಜಮೆಯಾಗಿದೆ ಎನ್ನುವ ಮಾಹಿತಿಯನ್ನು ಎರಡು ದಿನಗಳೊಳಗೆ ನೀಡಲಾಗುವುದು ಎಂದು ಬ್ಯಾಂಕ್‌ ಅಧಿಕಾರಿಗಳು ಭರವಸೆ ಕೊಟ್ಟರು. ಹೀಗಾಗಿ, ಪ್ರತಿಭಟನೆ ಕೈಬಿಡಲಾಯಿತು’ ಎಂದು ಹೇಳಿದರು.

ಮುಖಂಡರಾದ ರವಿ ಸಿ‌ದ್ದಣ್ಣವರ, ಮಲ್ಲಿಕಾರ್ಜುನ ರಾಮದುರ್ಗ, ಜಯಶ್ರೀ ಗುರಣ್ಣವರ, ಮಲ್ಲಿಕಾರ್ಜುನ ದೇಸಾಯಿ, ಬಸವರಾಜ ಸಿದ್ದಮ್ಮನವರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT