ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ | ಮಲಪ್ರಭಾ ನದಿ ಪ್ರವಾಹ: ಒಂದೂವರೆ ತಿಂಗಳಾದರೂ ತೀರದ ಸಂತ್ರಸ್ತರ ಗೋಳು

Last Updated 17 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ರಾಮದುರ್ಗ: ಮಲಪ್ರಭಾ ನದಿ ಪ್ರವಾಹ ಬಂದು ಒಂದೂವರೆ ತಿಂಗಳಾದರೂ ಬದುಕಲು ಆಶ್ರಯ ಸಿಗದ ನಿರಾಶ್ರಿತರು ಪರಿಹಾರ ಕೇಂದ್ರಗಳಲ್ಲಿಯೇ ಕಾಲ ನೂಕುವಂತಹ ಪರಿಸ್ಥಿತಿ ಬಂದೊದಗಿದೆ. ಒಂದೂವರೆ ತಿಂಗಳಾದರೂ ಸಂತ್ರಸ್ತರ ಗೋಳು ಅಂತ್ಯ ಕಾಣುತ್ತಿಲ್ಲ.

ಇಂದಿಗೆ ಒಂದು ತಿಂಗಳು 11 ದಿನ ಕಳೆದರೂ ಸಂತ್ರಸ್ತರು ಪರಿಹಾರ ಕೇಂದ್ರವನ್ನೇ ನೆಚ್ಚಿಕೊಳ್ಳಬೇಕಾಗಿದೆ. ಪರಿಹಾರ ಕೇಂದ್ರದಲ್ಲಿ ಅನ್ನ ಸಾರು ಬಿಟ್ಟರೆ ಬೇರಾವುದೇ ಖಾದ್ಯಗಳಿಲ್ಲದೇ ಬಾಯಿ ರುಚಿ ಕಳೆದುಕೊಳ್ಳುತ್ತಿದ್ದಾರೆ. ಒಂದು ದಿನವೂ ತರಕಾರಿ, ಪಲ್ಯೆಯ ರುಚಿ ನೋಡಿಲ್ಲ. ದಾನಿಗಳು ನೀಡಿದ ರೊಟ್ಟಿ, ಪಲ್ಯೆ ಗತಿಯಾಗಿದೆ.

ಕೆಲವು ಪರಿಹಾರ ಕೇಂದ್ರಗಳಲ್ಲಿ ಮೇಲೆ ಸೂರು, ಮಗ್ಗುಲಿಗೆ ರಕ್ಷಣೆಗೆ ಗೋಡೆಗಳಿವೆ. ಆದರೆ ಸುರೇಬಾನದ ಎಪಿಎಂಸಿಯಲ್ಲಿ ನಿರ್ಮಿಸಿದ ಪರಿಹಾರ ಕೇಂದ್ರದಲ್ಲಿ ಮಗ್ಗುಲದ ಗೋಡೆಗಳಿಲ್ಲದೇ (ಅಳ್ಳ) ಸುಳಿಗಾಳಿಗೆ ಒಂದಿಲ್ಲ ಒಂದು ರೋಗಗಳು ಹರಡುತ್ತಿವೆ. ಸೊಳ್ಳೆಗಳ ಕಾಟವೂ ಅತಿಯಾಗಿದೆ. ಪರಿಹಾರ ಕೇಂದ್ರಕ್ಕೆ ದಾನಿಗಳು ಬಂದು ಏನನ್ನಾದರೂ ಕೊಟ್ಟು ಹೋಗುತ್ತಾರೆ ಎಂದು ಅವರಿಗಾಗಿ ಕಾದು ಕುಳಿತುಕೊಳ್ಳಬೇಕಾಗುತ್ತದೆ. ಒಟ್ಟಿನಲ್ಲಿ ಪರಿಹಾರ ಕೇಂದ್ರಗಳು ಬಯಲು ಜೈಲುಗಳಂತೆ ಭಾಸವಾಗುತ್ತಿವೆ.

ಪೂರ್ಣ ಪ್ರಮಾಣದಲ್ಲಿ ಬಿದ್ದಿರುವ ಮನೆಯನ್ನು ನೋಡಲು ಆಗದೇ ದುಡಿಯಲು ಹೋಗದೇ ಒಂದು ಥರದಲ್ಲಿ ಆಲಸ್ಯ ಜೀವನಕ್ಕೆ ಒಳಗಾಗಿದ್ದಾರೆ. ದನಕರುಗಳ ಪಾಡಂತೂ ಹೇಳತೀರದು. ಅವುಗಳಿಗೆ ಮೇವಿಲ್ಲ. ಕುಡಿಯಲು ನೀರಿಲ್ಲ. ರಕ್ಷಣೆಗೆ ಶೆಡ್‌ಗಳಿಲ್ಲ. ಬಟಾ ಬಯಲಿನಲ್ಲಿ ಸಾಕಿಕೊಳ್ಳಬೇಕಿದೆ.

ಇನ್ನುಳಿದ ಗ್ರಾಮಗಳ ನಿರಾಶ್ರಿತರ ನೀರು ಹೊಕ್ಕಿರುವ ಮನೆಗಳನ್ನು ಸ್ವಚ್ಛ ಮಾಡಿಕೊಂಡು ಒಳ ಹೊಕ್ಕಿದ್ದಾರೆ. ಅಲ್ಲಿ ಇನ್ನೂ ತನಕ ದುರ್ವಾಸನೆ ಬೀರುತ್ತಿವೆ. ನೆನೆದಿರುವ ಮನೆಗಳು ಬೀಳುವ ಹಂತದಲ್ಲಿದ್ದರೂ ಅನಿವಾರ್ಯವಾಗಿ ಮನೆಗಳಿಗೆ ಹೋಗಿದ್ದಾರೆ.

ಶಾಸಕರು, ಅಧಿಕಾರಿಗಳು, ಮಂತ್ರಿಗಳು, ಮುಖ್ಯಮಂತ್ರಿಗಳು ಬಂದು ನಿರಾಶ್ರಿತರನ್ನು ಭೇಟಿ ಮಾಡಿ ಭರವಸೆಯ ಮಾತುಗಳನ್ನು ಆಡಿ ಹೋಗಿದ್ದಾರೆ. ಶೀಘ್ರವೇ ತಾತ್ಕಾಲಿಕ ಶೆಡ್‌ ನಿರ್ಮಾಣಕ್ಕೆ ₹ 50,000 ಮನೆ ಕಟ್ಟಿಕೊಳ್ಳಲು ₹ 5 ಲಕ್ಷ ನೀಡುವುದಾಗಿ ಹೇಳಿದ್ದಾರೆ. ಆದರೆ ಕಳೆದ ಒಂದು ತಿಂಗಳ 11 ದಿನ ಕಳೆದರೂ ತಲೆ ಮೇಲೊಂದು ಸೂರು ಕಟ್ಟಿಕೊಳ್ಳಲು ಅಧಿಕಾರಿಗಳು ಹಣ ನೀಡುತ್ತಿಲ್ಲ. ಪರಿಹಾರ ಕೇಂದ್ರಗಳಲ್ಲಿ ಸಾಮೂಹಿಕ ಊಟ, ಸಾಮೂಹಿಕವಾಗಿಯೇ ಮಲಗುವುದಾಗಿದೆ.

ಸಾಮೂಹಿಕ ಊಟಕ್ಕಾದರೂ ಸುಸಜ್ಜಿತ ಕೊಠಡಿಗಳಿಲ್ಲ. ಬಯಲಿನಲ್ಲಿಯೇ ಕುಳಿತು ಊಟ ಮಾಡಬೇಕು. ಬಹಿರ್ದೆಸೆಗೆಂದು ಗಂಡಸರು ಒಂದು ಕಡೆ ಹೋದರೆ ಇನ್ನೊಂದು ಕಡೆ ಮಹಿಳೆಯರು ಬಯಲಿನಲ್ಲಿಯೇ ಹೋಗಬೇಕಿದೆ. ಶಾಲೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮಕ್ಕಳ ಶಾಲೆಯೂ ನಿಂತು ಹೋಗಿವೆ. ಇನ್ನು ಮಕ್ಕಳ ಭವಿಷ್ಯದ ಚಿಂತೆ ನಿರಾಶ್ರಿತರನ್ನು ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT