ಶುಕ್ರವಾರ, ಮಾರ್ಚ್ 24, 2023
22 °C
10 ದಿನಗಳಲ್ಲಿ ಕೇಂದ್ರಕ್ಕೆ ವರದಿ ಸಲ್ಲಿಕೆ: ಪಾಲ್

ನೆರೆ ಹಾನಿ ಉಂಟಾಗಿ 40 ದಿನಗಳ ನಂತರ ಬೆಳಗಾವಿಯಲ್ಲಿ ಕೇಂದ್ರ ತಂಡದಿಂದ ಅಧ್ಯಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಜಿಲ್ಲೆಯ ವಿವಿಧ ನದಿಗಳಲ್ಲಿ ನೆರೆ ಉಂಟಾಗಿ 40 ದಿನಗಳ ನಂತರ ಕೇಂದ್ರ ಸರ್ಕಾರವು ಅಧ್ಯಯನಕ್ಕಾಗಿ ಅಧಿಕಾರಿಗಳನ್ನು ಕಳುಹಿಸಿದೆ. ಕೇಂದ್ರ ಗೃಹ ಸಚಿವಾಲಯದ ಮುಖ್ಯ ನಿಯಂತ್ರಣಾಧಿಕಾರಿ (ಅಕೌಂಟ್ಸ್) ಸುಶೀಲ್ ಪಾಲ್ ನೇತೃತ್ವದ ತಂಡವು ಎರಡು ದಿನಗಳ ಪ್ರವಾಸವನ್ನು ಭಾನುವಾರ ಇಲ್ಲಿ ಆರಂಭಿಸಿತು.

ಮೂವರು ಅಧಿಕಾರಿಗಳ ತಂಡವು, ಖಾನಾಪುರ ಪಟ್ಟಣದಲ್ಲಿ ತರಾತುರಿಯಲ್ಲಿ ಭೇಟಿ ಮುಗಿಸಿತು. 30 ನಿಮಿಷಗಳಲ್ಲಿ ಮೂರು ಸ್ಥಳಗಳನ್ನು ವೀಕ್ಷಿಸಿದರು. ನೆರೆ ಸಂತ್ರಸ್ತರನ್ನಾಗಲಿ ಅಥವಾ ರೈತರನ್ನಾಗಲಿ ಭೇಟಿಯಾಗಲಿಲ್ಲ. ಅಧಿಕಾರಿಗಳು ಕೊಟ್ಟ ಮಾಹಿತಿಯನ್ನಷ್ಟೆ ದಾಖಲಿಸಿಕೊಂಡರು. ಅಲ್ಲಿನ ಮಾರುತಿ ನಗರದ ಬಳಿ ಮಲಪ್ರಭಾ ನದಿ ಪ್ರವಾಹದಿಂದ ಸೇತುವೆ ಬಳಿ ಕೊಚ್ಚಿ ಹೋಗಿದ್ದ ರಸ್ತೆಯನ್ನು ವೀಕ್ಷಿಸಿದರು. ಪೊಲೀಸ್ ತರಬೇತಿ ಶಾಲೆ, 4ಸಾವಿರ ಕೋಳಿಮರಿಗಳು ಸಾವಿಗೀಡಾಗಿದ್ದ ಕೋಳಿ ಫಾರಂಗೆ ಭೇಟಿ ನೀಡಿದ್ದರು. ಅವರಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು.

ಬಳಿಕ ಹುಕ್ಕೇರಿ ತಾಲ್ಲೂಕಿನಲ್ಲಿ ಮೂಲಸೌಲಭ್ಯ, ಬೆಳೆ ಹಾಗೂ ಮನೆಗಳು ಹಾನಿಗೀಡಾಗಿರುವುದನ್ನು ವೀಕ್ಷಿಸಿದರು.

‘ಜಿಲ್ಲೆಯಲ್ಲಿ ನೆರೆಯಿಂದಾಗಿ ಸಾಕಷ್ಟು ಹಾನಿ ಆಗಿರುವುದು ಕಂಡುಬಂದಿದೆ. ಮುಖ್ಯಮಂತ್ರಿ ಜೊತೆ ಸಭೆ ನಡೆಸಿ 10 ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಮಗ್ರ  ವರದಿ ಸಲ್ಲಿಸಲಾಗುವುದು. ರಾಜ್ಯದ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಈ ಜಿಲ್ಲೆಯಲ್ಲಿ ಹೆಚ್ಚು ಹಾನಿಯಾಗಿದೆ. ಇದರಲ್ಲಿ ಬೆಳೆ ಹಾನಿ ಪ್ರಮಾಣ ಅಧಿಕವಾಗಿದೆ. ರಸ್ತೆ ಮೊದಲಾದ ಮೂಲಸೌಕರ್ಯಗಳೂ ಹಾಳಾಗಿವೆ. ಮೂರು ತಂಡಗಳಿಂದ ಸ್ಥಳ ಪರಿಶೀಲನೆ ಕಾರ್ಯ ನಡೆದಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌) ನಿಯಮಾವಳಿ ಪ್ರಕಾರ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ತಿಳಿಸಿದರು.

ಕೇಂದ್ರ ಕೃಷಿ ಸಚಿವಾಲಯದ ನಿರ್ದೇಶಕ ಡಾ.ಕೆ. ಮನೋಹರನ್, ಇಂಧನ ಇಲಾಖೆಯ ಶುಭಂ ಗರ್ಗ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ಆರ್ಯ ತಂಡದಲ್ಲಿದ್ದಾರೆ. ಸೋಮವಾರವೂ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು