ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಂದ್ರದ ದುಡ್ಡು, ಸಿದ್ದರಾಮಯ್ಯ ಜಾತ್ರೆ’

ಸಮಾವೇಶದಲ್ಲಿ ಸಂಸದ ಪ್ರತಾಪಸಿಂಹ ಲೇವಡಿ; ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಟೀಕಾ ಪ್ರಹಾರ
Last Updated 31 ಮಾರ್ಚ್ 2018, 7:08 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕೇಂದ್ರ ಸರ್ಕಾರದ ದುಡ್ಡಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತ್ರೆ ಮಾಡುತ್ತಿದ್ದಾರೆ’ ಎಂದು ಸಂಸದ ಪ್ರತಾಪ ಸಿಂಹ ಲೇವಡಿ ಮಾಡಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾ ಘಟಕದಿಂದ ನಡೆದ ಪರಿಶಿಷ್ಟ ಪಂಗಡ ಸಮಾವೇಶದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ‘ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ’ ಎಂಬ ಗಾದೆ ಇದೆ. ಅದೇ ರೀತಿ ಕೇಂದ್ರ ಸರ್ಕಾರ ಕಡಿಮೆ ದರದಲ್ಲಿ ಬಡವರಿಗೆ ನೀಡುವ ಅಕ್ಕಿ, ಸಕ್ಕರೆ, ಬೇಳೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹ 2ರಿಂದ 3 ಕಡಿಮೆ ಮಾಡಿ ತಮ್ಮ ಫೊಟೋ ಹಾಕಿಸಿ ನ್ಯಾಯ ಬೆಲೆ ಅಂಗಡಿಗಳಲ್ಲಿ ವಿತರಿಸುತ್ತಿದ್ದಾರೆ. ಇದು ಕೇಂದ್ರದ ದುಡ್ಡಿನಲ್ಲಿ ಸಿದ್ದರಾಮಯ್ಯ ಅವರು ಜಾತ್ರೆ ಮಾಡಿದಂತಾಗಿದೆ ಎಂದು ಟೀಕಿಸಿದರು.‘ಸಿದ್ದರಾಮಯ್ಯ ಅವರ 5 ವರ್ಷದ ಆಡಳಿತದ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಗೋವಿಂದರಾಜು ಡೈರಿ ತಿಳಿಸುತ್ತದೆ. ಸಚಿವರಾದ ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್‌ ಅವರಿಗೆ ಎಷ್ಟು ಹಣ ನೀಡಲಾಗಿದೆ. ರಾಹುಲ್‌ಗಾಂಧಿ ಅವರ ವಿದೇಶ ಪ್ರವಾಸಕ್ಕೆ ಎಷ್ಟು ಹಣ ಕಳುಹಿಸಲಾಗಿದೆ ಎಲ್ಲ ವಿವರ ದೊರೆಯುತ್ತದೆ’ ಎಂದು ದೂರಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಅಧಿಕಾರದ ಅವಧಿಯಲ್ಲಿ ಯಾವುದೇ ಭೇದ ಮಾಡದೆ ಎಲ್ಲ ಸಮುದಾಯದ ಹೆಣ್ಣು ಮಕ್ಕಳಿಗೂ ಭಾಗ್ಯಲಕ್ಷ್ಮಿ ಯೋಜನೆ, ಸೈಕಲ್‌ ವಿತರಣೆ, ರೈತರ ಸಾಲ ಹಾಗೂ ಬಡ್ಡಿ ಮನ್ನಾ, 4 ಸಾವಿರ ಸುವರ್ಣಾ ಗ್ರಾಮ ಯೋಜನೆಯನ್ನು ರಾಜ್ಯದ ಜನತೆ ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ ಎಂದರು.ಚುನಾವಣೆ ಘೋಷಣೆಯಾಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಯಡಿಯೂರಪ್ಪ ಸರ್ಕಾರ ತರಲು ಜಿಲ್ಲೆಯ ಜನರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.

ಪರಿಶಿಷ್ಟ ಪಂಗಡದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಪಣ್ಣ ಮಾತನಾಡಿ, ‘36ವರ್ಷಗಳ ನಾಯಕ ಸಮುದಾಯದ ಹೋರಾಟಕ್ಕೆ ಜಯ ಸಿಕ್ಕಿದೆ. ಕೇಂದ್ರ ಸರ್ಕಾರ ನಮ್ಮ ಕೋರಿಕೆ ಈಡೇರಿಸಿರುವುದರಿಂದ ಸಮುದಾಯ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಿದೆ. ಯುವಕರಿಗೆ ಉದ್ಯೋಗ ಭದ್ರತೆ ದೊರೆತಿದೆ. ಇದನ್ನು ಸ್ಮರಿಸಿ ಸಮುದಾಯದ ಜನರು ಬಿಜೆಪಿ ಬೆಂಬಲಿಸಬೇಕು’ ಎಂದು ತಿಳಿಸಿದರು.

ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತಕುಮಾರ್, ಮುಖಂಡರಾದ ರಾಮದಾಸ್, ನಾಗೇಂದ್ರ, ಸಿದ್ದರಾಜು, ನಿರಂಜನ ಕುಮಾರ್, ನಾಗಶ್ರೀ ಪ್ರತಾಪ್, ಕೌಟಿಲ್ಯ ರಘು, ಮಲ್ಲೇಶ್, ನಿಜಗುಣರಾಜು, ಸಿ.ಎನ್.ಬಾಲರಾಜು, ರಾಜೂಗೌಡ, ಶಾಸಕ ಸಿ.ಟಿ.ರವಿ, ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಇದ್ದರು.

ತುಂಬಿದ ಕ್ರೀಡಾಂಗಣ: ಚಿಲ್ಲರೆ ವ್ಯಾಪಾರ ಜೋರು ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪರಿಶಿಷ್ಟ ಪಂಗಡ ಸಮಾವೇಶದಲ್ಲಿ ಜಿಲ್ಲೆಯ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಪಾಲ್ಗೊಂಡು ಕ್ರೀಡಾಂಗಣ ಸಂಪೂರ್ಣ ಭರ್ತಿಯಾಗಿತ್ತು.ಕ್ರೀಡಾಂಗಣ ಸುತ್ತ ಬಿಜೆಪಿ ಬಾವುಟ ರಾರಾಜಿಸಿತ್ತು. ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಕ್ರೀಡಾಂಗಣದ ಮುಂಭಾಗ ಹಲವು ಸಣ್ಣಪುಟ್ಟ ಅಂಗಡಿಗಳು ಸೃಷ್ಟಿಯಾಗಿತ್ತು.ಎಳನೀರು, ಐಸ್‌ಕ್ರೀಂ, ತಂಪು ಪಾನೀಯ, ಕುರುಕಲು ತಿಂಡಿ ತಿನಿಸು ಇತ್ಯಾದಿಗಳನ್ನೊಳಗೊಂಡ ತಳ್ಳುಗಾಡಿಗಳಲ್ಲಿ ವ್ಯಾಪಾರ ಭರಾಟೆ ಜೋರಾಗಿತ್ತು.

ಫ್ಲೆಕ್ಸ್ ಹೊತ್ತೊಯ್ದರು: ಪರಿಶಿಷ್ಟ ಪಂಗಡಗಳ ಸಮಾವೇಶ ಮುಗಿಯುತ್ತಿದ್ದಂತೆ ವೇದಿಕೆ ಸುತ್ತಮುತ್ತ ಮತ್ತು ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ಫ್ಲೆಕ್ಸ್‌ಗಳನ್ನು ಕೆಲವರು ಹೊತ್ತೊಯ್ಯತೊಡಗಿದರು.ಇನ್ನೂ ಕೆಲವರು ಫ್ಲೆಕ್ಸ್‌ಗೆ ಅಂಟಿಸಿದ್ದ ಬ್ಯಾನರ್‌ಗಳನ್ನು ಸ್ಥಳದಲ್ಲಿಯೇ ಕಿತ್ತು ಮರದ ರೀಪ್‌ಗಳನ್ನು ಮನೆಗೆ ಕೊಂಡೊಯ್ದರು. ಮಹಿಳೆಯರು, ಮಕ್ಕಳು ಮತ್ತು ವೃದ್ಧರೂ ಇದರಲ್ಲಿ ಹಿಂದೆ ಬೀಳಲಿಲ್ಲ.

4 ಕ್ಷೇತ್ರದಲ್ಲೂ ಗೆಲ್ಲಿಸಿ: ರಾಮಚಂದ್ರ

ಚಾಮರಾಜನಗರ: ‘ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಬಿ.ಎಸ್.ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು’ ಎಂದು ಮುಖಂಡ ಎಂ.ರಾಮಚಂದ್ರ ಹೇಳಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಯಕ ಸಮುದಾಯದ ಪರ್ಯಾಯ ಪದಗಳಾದ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ ಸೇರಿದಂತೆ ನಾಯಕ ಸಮುದಾಯದ ಕೊಡುಗೆಯನ್ನು ಸಮುದಾಯದ ಜನರು ಸ್ಮರಿಸಬೇಕು. ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ತಿಳಿಸಿದರು.ಪರಿಶಿಷ್ಟ ಪಂಗಡಕ್ಕೆ ತಳವಾರ ಮತ್ತು ಪರಿವಾರ ಸೇರಿಸಿದರಿಂದ ಸಮುದಾಯ ಜನರಿಗೆ ಹೆಚ್ಚು ಅನುಕೂಲವಾಗಿದ್ದು, ಸಮುದಾಯದ ಪರವಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

‘ಮಹದೇಶ್ವರಸ್ವಾಮಿಗೆ ಪ್ರಣಾಮ’

ಅಮಿತ್‌ ಷಾ ತಮ್ಮ ಭಾಷಣದ ಆರಂಭದಲ್ಲಿ ಈ ಭಾಗದ ಆರಾಧ್ಯ ಜನಪದ ದೈವ ಮಹದೇಶ್ವರಸ್ವಾಮಿಗೆ ಪ್ರಣಾಮ ಎಂದು ಹೇಳುವ ಮೂಲಕ ಸಭಿಕರ ಭಾರಿ ಕರತಾಡನಕ್ಕೆ ಕಾರಣರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT