ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ಕೊಡಿ: ಸಚಿವೆ ಶಶಿಕಲಾ ಜೊಲ್ಲೆ

Last Updated 11 ಆಗಸ್ಟ್ 2020, 11:23 IST
ಅಕ್ಷರ ಗಾತ್ರ

ಬೆಳಗಾವಿ: ‘ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಮುಂದಾಗುವ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿ ಮಾರ್ಗಸೂಚಿ ಪ್ರಕಾರ ತ್ವರಿತವಾಗಿ ಅನುಮತಿ ಕೊಡಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸರ್ಕಾರ ನಿಗದಿಪಡಿಸಿದ ದರಪಟ್ಟಿಯ ಪ್ರಕಾರ ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಿಗೆ ಅನುಮತಿ ಕೊಟ್ಟರೆ ಆಯಾ ತಾಲ್ಲೂಕು ಪ್ರದೇಶಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ಕಲ್ಪಿಸಬಹುದು’ ಎಂದರು.

‘ರ‍್ಯಾಪಿಡ್‌ ಟೆಸ್ಟ್‌ಗೆ ಆದ್ಯತೆ ನೀಡಬೇಕು. ನಿಪ್ಪಾಣಿ ಆಸ್ಪತ್ರೆಗೂ ವೆಂಟಿಲೇಟರ್ ಪೂರೈಸಬೇಕು’ ಎಂದು ಸೂಚಿಸಿದರು.

‘ಇದು ಪರೀಕ್ಷೆಯ ಕಾಲ. ಆದ್ದರಿಂದ ವೈದ್ಯರು ಮತ್ತು ಸಿಬ್ಬಂದಿ ಕೊರತೆಯ ಮಧ್ಯೆಯೂ ಜನರಿಗೆ ಉತ್ತಮ ಚಿಕಿತ್ಸೆ ನೀಡಿ ಬದ್ಧತೆ ಪ್ರದರ್ಶಿಸಬೇಕು’ ಎಂದು ಹೇಳಿದರು.

ಸಮನ್ವಯ ಸಾಧಿಸಿ:ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ‘ಜಲಾಶಯಗಳಿಂದ ನೀರು ಬಿಡುಗಡೆ ವೇಳೆ ಸಮನ್ವಯ ಸಾಧಿಸಿದರೆ ಮಾತ್ರ ಪ್ರವಾಹ ಪರಿಸ್ಥಿತಿ ನಿಯಂತ್ರಣ ಸಾಧ್ಯವಿದೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು’ ಎಂದು ಸೂಚಿಸಿದರು.

ಶಾಸಕ ದುರ್ಯೋಧನ ಐಹೊಳೆ, ‘ಕೋವಿಡ್ ನಿರ್ವಹಣೆಗೆ ಅಗತ್ಯವಿರುವ ಆಸ್ಪತ್ರೆ ವ್ಯವಸ್ಥೆಯನ್ನು ತಾಲ್ಲೂಕು ಮಟ್ಟದಲ್ಲೂ ಕಲ್ಪಿಸಬೇಕು’ ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಶೇ 40ರಷ್ಟು ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸೋಂಕಿತರಿಗೆ ಆಯಾ ತಾಲ್ಲೂಕು ಆಸ್ಪತ್ರೆ ಮತ್ತು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

2ನೇ ಕಂತು:‘ಕಳೆದ ಬಾರಿ ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ಇನ್ನೆರಡು‌ ದಿನಗಳಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದಿಂದ 2ನೇ ಕಂತು ಬಿಡುಗಡೆ ಆಗಲಿದೆ’ ಎಂದು ತಿಳಿಸಿದರು.

‘ಪಿಪಿಇ ಕಿಟ್, ಮಾಸ್ಕ್‌ಗಳ ಕೊರತೆ ಇಲ್ಲ. ಆದರೆ, ನರ್ಸಿಂಗ್ ಸಿಬ್ಬಂದಿ ಕೊರತೆ ಇದೆ. ಹೀಗಾಗಿ, ಪಾಳಿಯಲ್ಲಿ ನಿರ್ವಹಿಸಲಾಗುತ್ತಿದೆ. ನೇಮಕಾತಿ ಪ್ರಕ್ರಿಯೆ ನಡೆದಿದೆ’ ಎಂದು ಬಿಮ್ಸ್‌ ನಿರ್ದೇಶಕ ವಿನಯ್ ದಾಸ್ತಿಕೊಪ್ಪ ಹೇಳಿದರು.

‘ಕೋವಿಡ್ ಚಿಕಿತ್ಸೆಗೆ ಮುಂದಾಗುವ ಖಾಸಗಿ ಆಸ್ಪತ್ರೆಗಳಿಗೆ ನಿಯಮಾವಳಿಯಂತೆ ಅನುಮತಿ ನೀಡಲಾಗುವುದು’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ದರ್ಶನ್ ಎಚ್.ವಿ., ಎಸ್ಪಿ ಲಕ್ಷ್ಮಣ ನಿಂಬರಗಿ, ನೀರಾವರಿ ನಿಗಮ ಉತ್ತರ ವಲಯದ ಮುಖ್ಯ ಎಂಜಿನಿಯರ್ ಅರವಿಂದ ಕಣಗಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ. ತುಕ್ಕಾರ ಇದ್ದರು.

70 ಸೋಂಕಿತೆಯರಿಗೆ ಯಶಸ್ವಿ ಹೆರಿಗೆ

‘ಕೊರೊನಾ ಸೋಂಕು ಕಾಣಿಸಿಕೊಂಡಾಗಿನಿಂದ ಇಲ್ಲಿವರೆಗೆ ಬಿಮ್ಸ್ ಆಸ್ಪತ್ರೆಯಲ್ಲಿ 70 ಕೋವಿಡ್ ಸೋಂಕಿತೆಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಲಾಗಿದೆ’ ಎಂದು ಬಿಮ್ಸ್‌ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ತಿಳಿಸಿದರು.

‘ಈ ಪೈಕಿ 36 ಸಹಜ ಹೆರಿಗೆಗಳಾಗಿವೆ. ನವಜಾತ ಶಿಶುಗಳ (5 ದಿನಗಳ ನಂತರ) ಗಂಟಲು ದ್ರವದ ಪರೀಕ್ಷೆ ಮಾಡಲಾಗಿದೆ. ಎಲ್ಲರೂ ಆರೋಗ್ಯವಾಗಿದ್ದು, ಕೆಲವರು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT