ಗುರುವಾರ , ಮಾರ್ಚ್ 23, 2023
29 °C

ಅಗ್ನಿಶಾಮಕ ದಳದಿಂದ ಉತ್ತಮ ಕಾರ್ಯ: ಕಿತ್ತೂರಲ್ಲಿ ಅಗ್ನಿಶಾಮಕ ಠಾಣೆ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಮ್ಮನ ಕಿತ್ತೂರು: ‘ಅಗ್ನಿಶಾಮಕ ದಳದ ಕರ್ತವ್ಯ ಕೇವಲ ಬೆಂಕಿ ಆರಿಸುವುದು ಮಾತ್ರವಲ್ಲ, ಪ್ರಕೃತಿ ವಿಕೋಪ ಸಂಭವಿಸಿದಾಗ ಜನರ ಜೀವ ಉಳಿಸುವ ಕಾರ್ಯವನ್ನೂ ಮಾಡಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿಯ ಹೆಸ್ಕಾಂ ಬಳಿ ನಿರ್ಮಿಸಿರುವ ನೂತನ ಅಗ್ನಿಶಾಮಕ ಠಾಣೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ‘ರಾಜ್ಯದ 215ನೇ ಠಾಣೆ ಇದಾಗಿದೆ. ಹುಬ್ಬಳ್ಳಿ ವಲಯದ 15ನೇ ಠಾಣೆಯಾಗಿದೆ. ₹ 2.17 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿ, 18 ಸಿಬ್ಬಂದಿ ಒದಗಿಸಲಾಗಿದೆ’ ಎಂದರು.

ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ‘ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆಗಾಗಿ ಬೇಡಿಕೆ ಇಡಲಾಗಿತ್ತು. ಈಗ ಅದು ಅನುಷ್ಠಾನಕ್ಕೆ ಬಂದಿದೆ. ಕಾಯಂ ಸಿಬ್ಬಂದಿಯನ್ನು ನೀಡಬೇಕು. ಅವರಿಗೆ ಸರ್ಕಾರದಿಂದ ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ಕೋರಿದರು.

ಅಗ್ನಿಶಾಮಕ ದಳದ ಮಹಾನಿರ್ದೇಶಕ ಅಮರ್‌ಕುಮಾರ್ ಪಾಂಡೆ, ಉತ್ತರ ವಲಯ ಐಜಿಪಿ ಎನ್. ಸತೀಶಕುಮಾರ, ಅಗ್ನಿಶಾಮಕ ದಳದ ಉಪ ಮಹಾನಿರೀಕ್ಷಕ ಕೆ.ಟಿ. ಬಾಲಕೃಷ್ಣ, ಎಸ್ಪಿ ಲಕ್ಷ್ಮಣ ನಿಂಬರಗಿ, ಅಗ್ನಿಶಾಮಕ ದಳದ ನಿರ್ದೇಶಕ ಕೆ. ಶಿವಕುಮಾರ್, ಪ್ರಾದೇಶಿಕ ಅಧಿಕಾರಿ ಶ್ರೀಕಾಂತ, ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿಗಳಾದ ಶಶಿಧರ ನೀಲಗಾರ, ರಂಗನಾಥ್ ಇದ್ದರು.

‘ಸಮನ್ಸ್ ರವಾನೆ ಹೊಣೆ ಖಾಸಗಿಗೆ: ಚಿಂತನೆ’

ಚನ್ನಮ್ಮನ ಕಿತ್ತೂರು: ‘ಆರೋಪಿಗಳಿಗೆ ಸಮನ್ಸ್ ತಲುಪಿಸುವ ಹೊಣೆಯನ್ನು ಖಾಸಗಿ ಸಂಸ್ಥೆಗೆ ನೀಡುವ ಚಿಂತನೆ ನಡೆದಿದೆ’ ಎಂದು ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಸುದ್ದಿಗಾರರ ಜೊತೆ ಇಲ್ಲಿ ಬುಧವಾರ ಮಾತನಾಡಿದ ಅವರು, ‘ಇದರಿಂದ ಪೊಲೀಸರಿಗೆ ಅಂಚೆ ಕೆಲಸ ತಪ್ಪುತ್ತದೆ. ಅವರಿಗೆ ಬಂದೂಕು ಸೇರಿದಂತೆ ಉತ್ತಮ ತರಬೇತಿ ನೀಡಲಾಗಿದೆ. ಅವರಿಗೆ ಸಮನ್ಸ್ ತಲುಪಿಸುವ ಕೆಲಸ ವಹಿಸುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟರು.

‘100 ಹೊಸ ಪೊಲೀಸ್ ಠಾಣೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು