ಭಾನುವಾರ, ಡಿಸೆಂಬರ್ 4, 2022
19 °C

ಗೌಂಡವಾಡ ಗಲಭೆ, ಕೊಲೆ: ನಾಲ್ವರಿಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ತಾಲ್ಲೂಕಿನ ಗೌಂಡವಾಡ ಗ್ರಾಮದಲ್ಲಿ ಜೂನ್‌ 18ರಂದು ನಡೆದ ಗಲಭೆ ಹಾಗೂ ಕೊಲೆ ಪ್ರಕರಣದಲ್ಲಿ ಬಂಧಿತರಾದ 25 ಮಂದಿಯಲ್ಲಿ, ಮೂವರು ಮಹಿಳೆಯರು ಹಾಗೂ ಒಬ್ಬ ವ್ಯಕ್ತಿಗೆ ಶನಿವಾರ ಜಾಮೀನು ದೊರಕಿದೆ.

ಗೌಂಡವಾಡ ನಿವಾಸಿಗಳಾದ ಶಶಿಕಲಾ ಉರೂಫ್‌ ಅನಿತಾ ಆನಂದ ಕುಟ್ರೆ, ಲಕ್ಷ್ಮಿ ವೆಂಕಟೇಶ ಕುಟ್ರೆ, ಸಂಗೀತಾ ಸಂಜಯ ಕುಟ್ರೆ ಹಾಗೂ ವೆಂಕಟೇಶ ವೈಜು ಕುಟ್ರೆ ಜಾಮೀನು ಮೇಲೆ ಬಿಡುಗಡೆಯಾದವರು.

ದೇವಸ್ಥಾನಕ್ಕೆ ಸೇರಿದ್ದು ಎನ್ನಲಾದ 27 ಎಕರೆ ಜಮೀನಿಗೆ ಸಂಬಂಧಿಸಿದಂತೆ ಗೌಂಡವಾಡ ಗ್ರಾಮದಲ್ಲಿ ಜೂನ್‌ 18ರ ರಾತ್ರಿ ಗಲಭೆ ನಡೆದಿತ್ತು. ದೇವಸ್ಥಾನದ ಜಮೀನನ್ನು ಕೆಲವರು ಉಳುಮೆ ಮಾಡುತ್ತಿದ್ದಾರೆ, ಅದನ್ನು ಬಿಡಿಸಿ ದೇವಸ್ಥಾನಕ್ಕೇ ಕೊಡಬೇಕು ಎಂದು ಸತೀಶ ಪಾಟೀಲ (37) ಹೋರಾಟ ನಡೆಸಿದ್ದರು.

ಇದೇ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಸತೀಶ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಗ್ರಾಮದಲ್ಲಿ 20 ವಾಹನಗಳು ಹಾಗೂ ನಾಲ್ಕು ಬಣವಿಗಳಿಗೆ ಬೆಂಕಿ ಹಚ್ಚಲಾಗಿತ್ತು.

ಕೊಲೆ, ಗಲಭೆಗೆ ಸಂಬಂಧಿಸಿದಂತೆ ಕಾಕತಿ ಠಾಣೆ ಪೊಲೀಸರು 25 ಮಂದಿಯನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಎ.ಹರೀಶ್‌ ಅವರು ನಾಲ್ವರಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ವಕೀಲರಾದ ಪ್ರವೀಣ ಎ. ಕರೋಶಿ, ಮೋಹನ ಎಲ್‌. ಮಾವಿನಕಟ್ಟಿ, ಪರಶುರಾಮ ಎನ್‌. ತಾರಿಹಾಳ ಅವರು ವಾದ ಮಂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು