ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಲಹೊಂಗಲ: ‘ಬುಡರಕಟ್ಟಿ’ಯಲ್ಲಿ ಸಮಸ್ಯೆಗಳ ಪಟ್ಟಿ!

ಕನಿಷ್ಠ ಮೂಲಸೌಕರ್ಯ ಸಿಗದೆ ಗ್ರಾಮಸ್ಥರ ಪರದಾಟ
Published 7 ಫೆಬ್ರುವರಿ 2024, 4:21 IST
Last Updated 7 ಫೆಬ್ರುವರಿ 2024, 4:21 IST
ಅಕ್ಷರ ಗಾತ್ರ

ಬೈಲಹೊಂಗಲ: ತಾಲ್ಲೂಕಿನ ಬೆಳವಡಿಯಿಂದ ಧಾರವಾಡ ಮಹಾನಗರಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿರುವ ಬುಡರಕಟ್ಟಿ ಗ್ರಾಮ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇಲ್ಲಿ ಸಮಸ್ಯೆಗಳ ದೊಡ್ಡಪಟ್ಟಿಯೇ ಇದ್ದು, ಗ್ರಾಮಸ್ಥರು ಹೆಜ್ಜೆ ಹೆಜ್ಜೆಗೂ ತೊಂದರೆ ಅನುಭವಿಸುವಂತಾಗಿದೆ.

ಬುಡರಕಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬಿದರಡ್ಡಿ ಗ್ರಾಮವೂ ಸೇರಿದೆ. ಗ್ರಾಮ ಪಂಚಾಯ್ತಿಯಲ್ಲಿ 3 ವಾರ್ಡ್‌ಗಳಿದ್ದು, 16 ಮಂದಿ ಸದಸ್ಯರಿದ್ದಾರೆ. 6 ಸಾವಿರ ಜನಸಂಖ್ಯೆ ಇದೆ. 4,500 ಮತದಾರರಿದ್ದಾರೆ. ಇವೆರಡೂ ಗ್ರಾಮಗಳಲ್ಲಿ ಮೂಲಸೌಕರ್ಯ ಒದಗಿಸದಿರುವುದರಿಂದ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ.

ಸದಾ ವಾಹನ ದಟ್ಟಣೆಯಿಂದ ಕೂಡಿದ ಬುಡರಕಟ್ಟಿಯ ಮುಖ್ಯರಸ್ತೆ ಉತ್ತಮವಾಗಿದೆ. ಆದರೆ, ಒಳರಸ್ತೆ ಸ್ಥಿತಿ ಇದಕ್ಕೆ ತದ್ವಿರುದ್ಧ. ರಸ್ತೆಬದಿ ಬಿದ್ದಿರುವ ಕಸದ ರಾಶಿ, ನಿರ್ವಹಣೆ ಕಾಣದ ಚರಂಡಿಗಳು, ರಸ್ತೆ ಮಧ್ಯೆಯೇ ಹರಿಯುವ ಕೊಳಚೆ ನೀರು ಹೀಗೆ... ಸಾಲು, ಸಾಲು ಸಮಸ್ಯೆಗಳು ಕಣ್ಣಿಗೆ ಬೀಳುತ್ತವೆ. ‘ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರು ನಮ್ಮ ಸಮಸ್ಯೆಗೆ ಕಿವಿಗೊಡುವುದಿಲ್ಲ’ ಎಂಬುದು ಗ್ರಾಮಸ್ಥರ ದೂರು.

ಅನಾರೋಗ್ಯಕರ ವಾತಾವರಣ: ಇಲ್ಲಿ ರಸ್ತೆಬದಿ ಎಸೆದ ಕಸ ಸಮರ್ಪಕವಾಗಿ ವಿಲೇವಾರಿ ಮಾಡದ ಕಾರಣ, ಸುತ್ತಲಿನ ಪರಿಸರದಲ್ಲಿ ದುರ್ನಾತ ಹರಡಿದೆ. ಗ್ರಾಮಸ್ಥರು ಮೂಗಿಗೆ ಕರವಸ್ತ್ರ ಕಟ್ಟಿಕೊಂಡೇ ಈ ಮಾರ್ಗದಲ್ಲಿ ಸಂಚರಿಸುವ ಅನಿವಾರ್ಯತೆಯಿದೆ.

‘ಊರಿನ ಎಲ್ಲ ಬೀದಿಗಳಲ್ಲೂ ಚರಂಡಿ ನಿರ್ಮಿಸಿಲ್ಲ. ಕೆಲವು ಮನೆಗಳ ಕೊಳಚೆ ನೀರು ರಸ್ತೆ ಮೇಲೆಯೇ ನಿಲ್ಲುತ್ತಿದೆ. ಸೊಳ್ಳೆಗಳ ಕಾಟ ಮಿತಿಮೀರಿದ್ದು, ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ನಮ್ಮನ್ನು ಕಾಡುತ್ತಿದೆ’ ಎಂದು ಗ್ರಾಮಸ್ಥರು ದೂರಿದರು.

ಗ್ರಾಮದ ಮುಖ್ಯರಸ್ತೆಯಲ್ಲಿರುವ ಬಸವ ವೃತ್ತದಲ್ಲಿನ ಬಸ್ ತಂಗುದಾಣ ಇದ್ದೂ ಇಲ್ಲದಂತಾಗಿದೆ. ಈ ತಂಗುದಾಣ ಹಾಳಾಗಿದ್ದು, ಗಲೀಜಿನಿಂದ ಕೂಡಿದೆ. ಹಾಗಾಗಿ ಶಾಲೆ, ಕಾಲೇಜು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಬಿಸಿಲಿನಲ್ಲೇ ನಿಂತು ಬಸ್‌ಗಾಗಿ ಕಾಯುವ ಪರಿಸ್ಥಿತಿ ಇದೆ. ರೈತರು ಕೃಷಿಭೂಮಿಗೆ ಹೋಗಲು ಸರಿಯಾದ ರಸ್ತೆ ಇಲ್ಲ. ಊರಿನಿಂದ ದೂರದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ಗ್ರಾಮಸ್ಥರು ವೈದ್ಯಕೀಯ ಚಿಕಿತ್ಸೆಗಾಗಿ ಅಲ್ಲಿಗೆ ತೆರಳಲು ಪ್ರಯಾಸ ಪಡುವಂತಾಗಿದೆ. ಪಶು ಆಸ್ಪತ್ರೆ ಇಲ್ಲದ್ದರಿಂದ ರೈತರ ಕಷ್ಟ ಹೇಳತೀರದ್ದು.

ಬುಡರಕಟ್ಟಿಯ ಮಡಿವಾಳೇಶ್ವರ ನಗರದ ಬೀದಿಯಲ್ಲಿರುವ ಮನೆಗಳ ಎದುರು ಕೊಳಚೆ ನೀರು ಹರಿಯುತ್ತಿರುವುದು
ಬುಡರಕಟ್ಟಿಯ ಮಡಿವಾಳೇಶ್ವರ ನಗರದ ಬೀದಿಯಲ್ಲಿರುವ ಮನೆಗಳ ಎದುರು ಕೊಳಚೆ ನೀರು ಹರಿಯುತ್ತಿರುವುದು
ಬೈಲಹೊಂಗಲ ತಾಲ್ಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ರೈತರು ಕೃಷಿಭೂಮಿಗೆ ತೆರಳುವ ರಸ್ತೆ ಹದಗೆಟ್ಟಿರುವುದು
ಬೈಲಹೊಂಗಲ ತಾಲ್ಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ರೈತರು ಕೃಷಿಭೂಮಿಗೆ ತೆರಳುವ ರಸ್ತೆ ಹದಗೆಟ್ಟಿರುವುದು
ನಮ್ಮೂರಿನಲ್ಲಿ ಮುಖ್ಯ ರಸ್ತೆಯಲ್ಲಿರುವ ತಂಗುದಾಣ ಹಾಳಾಗಿದೆ. ಹಾಗಾಗಿ ರಸ್ತೆಯಲ್ಲಿ ಬಿಸಿಲಿನಲ್ಲೇ ನಿಂತು ಬಸ್‌ಗಾಗಿ ಕಾಯುವಂತಾಗಿದೆ.
–ಸಿದ್ಧಾರೂಢ ಹೊಂಡಪ್ಪನವರ ಗ್ರಾಮಸ್ಥ
ಗ್ರಾಮದಲ್ಲಿ ಮೂಲಸೌಕರ್ಯ ಇಲ್ಲದೆ ಪರದಾಡುವಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವೂ ದೂರದಲ್ಲಿದೆ. ಇಲ್ಲಿ ಹೆಸರಿಗಷ್ಟೇ ಅಭಿವೃದ್ಧಿ ಕಾರ್ಯ ಎನ್ನುವಂತಾಗಿದೆ
–ಪ್ರಭಾಕರ ಭಜಂತ್ರಿ ಸಾಮಾಜಿಕ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT