ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳೇಭಾವಿ ಸುತ್ತ ಸಮಸ್ಯೆಗಳ ಸುಳಿ

ಗ್ರಾಮದಲ್ಲಿ ಅರ್ಧಕ್ಕೆ ನಿಂತ ಅಭಿವೃದ್ಧಿ ಕಾಮಗಾರಿ, ರಸ್ತೆ– ಚರಂಡಿಗೆ ಜನರ ಆಗ್ರಹ
Last Updated 24 ಜನವರಿ 2023, 16:37 IST
ಅಕ್ಷರ ಗಾತ್ರ

ಸಾಂಬ್ರಾ: ಸಮೀಪದ ಸುಳೇಭಾವಿ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿವೆ. ಇನ್ನು ಕೆಲವು ಶಿಲ್ಕು ಬಿದ್ದಿವೆ. ಇದಕ್ಕೆ ನಿದರ್ಶನವೆಂದರೆ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರ, ರಸ್ತೆ ಹಾಗೂ ಚರಂಡಿ ಕಾಮಗಾರಿಗಳು.

ಗ್ರಾಮದಲ್ಲಿ ಸೂಕ್ತ ರಸ್ತೆ ಹಾಗೂ ಚರಂಡಿ ಇಲ್ಲದ ಕಾರಣ ಜನ ತೊಂದರೆ ಅನುಭವಿಸುವಂತಾಗಿದೆ. ಕೆಲವು ಕಡೆ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಚರಂಡಿ ಕಾಮಗಾರಿ ಆರಂಭಿಸಲಾಗಿದೆ. ವರ್ಷಗಳು ಕಳೆದರೂ ಅವು ಮುಗಿದಿಲ್ಲ. ಇದರಿಂದ ಮಳೆಗಾಲದಲ್ಲಿ ಚರಂಡಿ ಎಲ್ಲೆಂದರಲ್ಲಿ ಕಟ್ಟಿಕೊಂಡು ಜನ ತೊಂದರೆ ಅನುಭವಿಸುವುದು ಸಾಮಾನ್ಯವಾಗಿದೆ.

ಸುಳೇಭಾವಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಈ ಆರೋಗ್ಯ ಕೇಂದ್ರದಲ್ಲಿ ಕಳೆದ ನಾಲ್ಕೈದು ವರ್ಷದಿಂದ ಒಂದೇ ಒಂದು ಹೆರಿಗೆ ಕೂಡಾ ಮಾಡಲಾಗಿಲ್ಲ. ಆರೋಗ್ಯ ಕೇಂದ್ರದ ಆವರಣ ಅವ್ಯವಸ್ಥೆಯಿಂದ ಕೂಡಿದ್ದು, ಮರಗಳ ಎಲೆಗಳ ರಾಶಿ ಹರಡಿದೆ. ಸ್ವಚ್ಛತೆಗೆ ಆದ್ಯತೆ ನೀಡಬೇಕಿದ್ದ ಕೇಂದ್ರವೇ ಮಾಲಿನ್ಯದಿಂದ ಕೂಡಿದೆ. ಹೆಚ್ಚಿನ ಜನ ತುರ್ತು ಚಿಕಿತ್ಸೆಗೆ ಬೆಳಗಾವಿ ನಗರಕ್ಕೇ ಹೋಗುವುದರಿಂದ ಈ ಆರೋಗ್ಯ ಕೇಂದ್ರದಲ್ಲಿ ಏನಿದೆ? ಏನಿಲ್ಲ ಎಂಬ ಬಗ್ಗೆಯೂ ಜನ ತಲೆ ಕೆಡಿಸಿಕೊಂಡಿಲ್ಲ.

ಆರೋಗ್ಯ ಕೇಂದ್ರದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಆದರೆ, ಅವುಗಳ ನಿರ್ವಹಣೆ ಸರಿಯಾಗಿಲ್ಲ. ಇದರಿಂದ ಸುತ್ತಲಿನ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ಸೊಳ್ಳೆಗಳ ಕಾಟದಿಂದ ರೋಗಗಳ ಭೀತಿಯಲ್ಲೇ ಜನ ಬದುಕುವಂತಾಗಿದೆ.

ಕೇಂದ್ರದ ಸಿಬ್ಬಂದಿಯಲ್ಲಿ ಹೊಂದಾಣಿಕೆ ಕೊರತೆಯಿಂದಾಗಿ ಸಾರ್ವಜನಿಕರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

ಇನ್ನೊಂದೆಡೆ, ಬೀದಿದೀಪದ ಕಂಬಗಳಿಗೆ ಎಲ್ಇಡಿ ಬಲ್ಬ್‌ ಅಳವಡಿಸಿದ್ದರಿಂದ ಬೆಳಕು ಸರಿಯಾಗಿ ಬೀಳುತ್ತಿಲ್ಲ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ವೃದ್ಧರು, ಚಿಕ್ಕ ಮಕ್ಕಳು ಟಾರ್ಚ್‌ ಬೆಳಕಿನ ಸಹಾಯದಿಂದ
ಓಡಾಡುವಂತಾಗಿದೆ.

ಅರ್ಧಕ್ಕೆ ನಿಂತ ಚರಂಡಿ ಕಾಮಗಾರಿ: ಮುಖ್ಯ ರಸ್ತೆಯಲ್ಲಿ ಕೈಗೆತ್ತಿಕೊಂಡ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಹಿಂದೆ ಮಾಡಿದ್ದ ಕೆಲಸವೂ ಕಿತ್ತುಕೊಂಡು ಹೋಗಿದೆ. ಹೀಗಾಗಿ, ಮನೆಗಳ ತ್ಯಾಜ್ಯ ನೀರು ಸರಿಯಾಗಿ ಮುಂದೆ ಹರಿಯದೆ ಒಂದೇ ಕಡೆ ನಿಲ್ಲುತ್ತಿದೆ. ಇದರಿಂದ ಸುತ್ತಲಿನ ಜನರಿಗೆ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.

ಹೊಲಗಳಿಗೆ ಹೋಗಲು ಈಗಲೂ ಮಣ್ಣಿನ ರಸ್ತೆಗಳಿವೆ. ಡಾಂಬರ್‌, ಸಿಮೆಂಟ್‌ ಕಾಮಗಾರಿ ಮಾಡದ ಕಾರಣ ರೈತರು ತೊಂದರೆ ಎದುರಿಸುತ್ತಿದ್ದಾರೆ. ಇದರಿಂದ ಬೇಸತ್ತ ಕೆಲವು ರೈತರು ತಮ್ಮ ಹೊಲಗಳಿಗೆ ತಾವೇ ರಸ್ತೆ ನಿರ್ಮಿಸಿಕೊಳ್ಳಲು ಮುಂದಾಗಿದ್ದಾರೆ. ಈಗಾಗಲೇ ಜೆಸಿಬಿ ಯಂತ್ರಗಳನ್ನು ತರಿಸಿ, ನೆಲ ಸಮತಟ್ಟು ಮಾಡಿಸಿದ್ದಾರೆ.

*

ಪ್ರವಾಸಿ ತಾಣಕ್ಕೆ ಬೇಕು ಬಸ್‌

ಸುಳೇಭಾವಿ ಗ್ರಾಮದಲ್ಲಿ ಮಹಾಲಕ್ಷ್ಮಿ ದೇವಸ್ಥಾನವಿದೆ. ಜಾಗೃತ ಸ್ಥಳವಾದ ಇಲ್ಲಿಗೆ ನಾಡಿನ ಬೇರೆಬೇರೆ ಕಡೆಯಿಂದ ಹಾಗೂ ಮಹಾರಾಷ್ಟ್ರದಿಂದ ಸಾಕಷ್ಟು ಭಕ್ತರು ದಿನವೂ ಬರುತ್ತಾರೆ. ಆದರೆ, ಸೂಕ್ತ ಬಸ್‌ಗಳ ವ್ಯವಸ್ಥೆ ಇಲ್ಲದೇ ಭಕ್ತರೂ ಕಾಯುವ ಸ್ಥಿತಿ ಇದೆ.

ಬೆಳಗಾವಿ ನಗರಕ್ಕೆ ಹತ್ತಿರವಾದ್ದರಿಂದ ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಣಕ್ಕೆ ಹಲವು ವಿದ್ಯಾರ್ಥಿಗಳು ಹೋಗುತ್ತಾರೆ. ಹೋಗಿ– ಬರುವ ಸಮಯಕ್ಕೆ ಸರಿಯಾಗಿ ಬಸ್‌ಗಳು ಇಲ್ಲದೇ ವಿದ್ಯಾರ್ಥಿಗಳೂ ಪರದಾಡುವುದು ಸಾಮಾನ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT