ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ವಾಪಸಾಗದಂತೆ ನೋಡಿಕೊಳ್ಳಿ

ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅತೀಕ್ ಸೂಚನೆ
Last Updated 24 ಫೆಬ್ರುವರಿ 2021, 14:07 IST
ಅಕ್ಷರ ಗಾತ್ರ

ಬೆಳಗಾವಿ: ‘ಈ ವರ್ಷದ ಅನುದಾನ ಯಾವುದೇ ಕಾರಣಕ್ಕೂ ಬಳಕೆಯಾಗದೆ ವಾಪಸ್ (ಲ್ಯಾಪ್ಸ್) ಆಗಬಾರದು. ಒಂದು ವೇಳೆ ಬಳಕೆಯಾಗದಿದ್ದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಮತ್ತು ತಾ.ಪಂ. ಇಒಗಳನ್ನು ಹೊಣೆ ಮಾಡಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ‌. ಅತೀಕ್ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಲಭ್ಯವಿರುವ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಂಡು ಕಾಮಗಾರಿಗಳನ್ನು ಆರಂಭಿಸಬೇಕು. ಈ ಹಣಕಾಸು ವರ್ಷ ಅಂತ್ಯಕ್ಕೆ ಅತ್ಯಂತ ಕಡಿಮೆ‌ ಅವಧಿ ಉಳಿದಿರುವುದರಿಂದ ಈ ಬಾರಿ ಅನುದಾನ ಉಳಿಸದೆ ನಿಗದಿತ ಯೋಜನೆಗಳಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.

ಸೌಲಭ್ಯ ಕಲ್ಪಿಸಬೇಕು:

‘ಪ್ರವಾಹದಿಂದ ಹಾನಿಗೊಳಗಾದ ಶಾಲೆಗಳು ಮತ್ತು ಅಂಗನವಾಡಿ ಕಟ್ಟಡಗಳ ದುರಸ್ತಿಗೆ ಸಂಬಂಧಿಸಿದ ಕಾಮಗಾರಿ ಮತ್ತು ಅಂದಾಜುಪಟ್ಟಿಯನ್ನು ತಕ್ಷಣವೇ ಸಲ್ಲಿಸಬೇಕು. ರೈತ ಕ್ರಿಯಾ ಯೋಜನೆಯಲ್ಲಿ ನೋಂದಾಯಿಸಿದ ಎಲ್ಲ ರೈತರಿಗೆ ನರೇಗಾದಲ್ಲಿ ತೋಟಗಾರಿಕೆ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ತಿಳಿಸಿದರು.

‘ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಲ್ಲಿ ಶೇ 100 ಗುರಿ ಸಾಧಿಸಬೇಕು’ ಎಂದು ಸೂಚಿಸಿದರು.

‘ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಂದ, ಸರ್ಕಾರದ ಮಾರ್ಗಸೂಚಿ ಪ್ರಕಾರ ಕೋವಿಡ್ ತಪಾಸಣಾ ವರದಿ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

30,350 ಮಂದಿಗೆ ಲಸಿಕೆ:

‘ನಿತ್ಯ 2ಸಾವಿರಕ್ಕೂ ಹೆಚ್ಚಿನ ಜನರ ಕೋವಿಡ್–19 ತಪಾಸಣೆ ಮಾಡಲಾಗುತ್ತಿದೆ. ಸೋಂಕಿನ ಪ್ರಮಾಣ ಕೇವಲ ಶೇ 0.5ರಷ್ಟಿದೆ. ಮೊದಲ ಹಂತದಲ್ಲಿ 30,350 ಮಂದಿಗೆ (ಕೊರೊನಾ ಸೇನಾನಿಗಳಿಗೆ) ಲಸಿಕೆ ನೀಡಲಾಗಿದೆ. 2ನೇ ಹಂತದ ಲಸಿಕೆ ಪ್ರಕ್ರಿಯೆ ಕೂಡ ನಡೆದಿದೆ’ ಎಂದು ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ‘ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾದ ಒಟ್ಟಾರೆ ಮನೆಗಳ ಪೈಕಿ 15,466 ಮನೆಗಳ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಇದುವರೆಗೆ ಕಾಮಗಾರಿ ಆರಂಭಿಸದ ಮನೆಗಳಿಗೆ ಸಂಬಂಧಿಸಿದ ಪರಿಹಾರವನ್ನು ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಲಾಗಿದೆ’ ಎಂದು ತಿಳಿಸಿದರು.

‘ಇತ್ತೀಚಿನ ಮಳೆಯಿಂದ ಕಡಲೆ ಮತ್ತು ಗೋಧಿ ಸ್ವಲ್ಪಮಟ್ಟಿಗೆ ಮಾತ್ರ ಹಾನಿಯಾಗಿದೆ. ಪಿ.ಎಂ. ಕಿಸಾಸ್ ಯೋಜನೆಯಲ್ಲಿ ಜಿಲ್ಲೆಯಲ್ಲಿ ₹ 831 ಕೋಟಿಯನ್ನು ರೈತ ಕುಟುಂಬಗಳಿಗೆ ಒದಗಿಸಲಾಗಿದೆ’ ಎಂದು ಕೃಷಿ ಇಲಾಖೆ ಜಂಟಿ‌ ನಿರ್ದೇಶಕ ಶಿವನಗೌಡ ಪಾಟೀಲ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಎಚ್‌.ವಿ. ದರ್ಶನ್, ಚಿಕ್ಕೋಡಿ ಉಪ ವಿಭಾಗಾಧಿಕಾರಿ ಯುಕೇಶ್‌ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಉಪ ವಿಭಾಗಾಧಿಕಾರಿಗಳಾದ ಅಶೋಕ ತೇಲಿ, ಶಶಿಧರ್ ಬಗಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT