ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಡು ಭೂಮಿಯಲ್ಲಿ ಹಸಿರು ಸೃಷ್ಟಿ

ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಯ ಪ್ರಯತ್ನ
ಅಕ್ಷರ ಗಾತ್ರ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಅದು ಆಗ... ಕಲ್ಲುಗಳಿಂದ ಕೂಡಿದ ಬೋಳು ಗುಡ್ಡದ ಇಳಿಜಾರಿನಲ್ಲಿ ಹುಲ್ಲುಕಡ್ಡಿಯೂ ಬೆಳೆಯಲು ಯೋಗ್ಯವಲ್ಲದ ಬಂಜರು ಭೂಮಿ. ಈಗ... ಅಲ್ಲಿ ಹಸಿರು ನಳನಳಿಸುತ್ತಿದೆ. ಮುಂದಿನ ನಾಲ್ಕಾರು ವರ್ಷಗಳಲ್ಲಿ ಕಾಡಿನಂತೆ ಕಂಗೊಳಿಸಲಿದೆ.

ತಾಲ್ಲೂಕಿನ ಚಿಂಚಣಿ ಗ್ರಾಮ ವ್ಯಾಪ್ತಿಯ 8 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯ ಪರಿಶ್ರಮದಿಂದಾಗಿ 3ಸಾವಿರದಷ್ಟು ವಿವಿಧ ಬಗೆಯ ಸಸಿಗಳು ಬೆಳೆದು ನಿಂತಿದ್ದು, ಬರಡು ಭೂಮಿಯಲ್ಲಿ ಹಸಿರು ಸೃಷ್ಟಿಯಾಗಿದೆ.

2021-22ನೇ ಸಾಲಿನಲ್ಲಿ ಅರಣ್ಯ ಇಲಾಖೆಯು ಗ್ರಾಮ ಪಂಚಾಯ್ತಿ ಸಹಯೋಗದೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಆಲ, ಅರಳಿ, ಬಸರಿ, ಬೇವು ಮೊದಲಾದ ಜಾತಿಯ ಸಸಿಗಳನ್ನು ನೆಟ್ಟಿದ್ದಾರೆ. ಅವುಗಳಿಗೆ ಗೊಬ್ಬರ, ಕಾಲ ಕಾಲಕ್ಕೆ ನೀರು ನೀಡಿ ಹುಲುಸಾಗಿ ಬೆಳೆಸಿದ್ದಾರೆ.

ಸರ್ಕಾರದ ನಿಯಮಾವಳಿ ಪ್ರಕಾರ ಬೇಸಿಗೆಯಲ್ಲಿ ಒಂದು ಸಸಿಗೆ ಟ್ಯಾಂಕರ್ ಮೂಲಕ 50 ಲೀಟರ್‌ ನೀರು ಹಾಕಲು ಅವಕಾಶವಿದೆ. ಆದರೆ, ವಲಯ ಅರಣ್ಯ ಇಲಾಖೆ ಅಧಿಕಾರಿ ಕಾಳಜಿ ವಹಿಸಿ, ಸ್ವಂತ ಹಣ ವ್ಯಯಿಸಿ ಹೆಚ್ಚಿನ ಪ್ರಮಾಣದಲ್ಲಿ ಸಸಿಗಳಿಗೆ ನೀರು ನೀಡಿದ್ದಾರೆ. ಇದರಿಂದಾಗಿ ಗಿಡಗಳು ಒಂದೇ ವರ್ಷದಲ್ಲಿ ನಾಲ್ಕೈದು ಅಡಿಗಳಷ್ಟು ಎತ್ತರ ಬೆಳೆದಿವೆ. ನೆಟ್ಟಿದ್ದ ಮೂರು ಸಾವಿರ ಸಸಿಗಳಲ್ಲಿ ಐದಕ್ಕಿಂತ ಕಡಿಮೆ ಸಸಿಗಳು ಮಾತ್ರ ಬೆಳೆಯಲಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಚಿಂಚಣಿ ಸಿದ್ದಸಂಸ್ಥಾನಮಠದ ಅಲ್ಲಮಪ್ರಭು ಸ್ವಾಮೀಜಿ, ಚಿಕ್ಕೋಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಈ ಪ್ರದೇಶಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಹೊರವಲಯದಲ್ಲಿ ಅಭಿವೃದ್ಧಿಪಡಿಸಿರುವ ಟ್ರೀ ಪಾರ್ಕಲ್ಲೂ 400 ಸಸಿಗಳನ್ನು, ಕೋಥಳಿ– ಕುಪ್ಪಣವಾಡಿಯ ಶಾಂತಿವನದಲ್ಲೂ 2400 ಸಸಿಗಳನ್ನು ನೆಟ್ಟು ಅರಣ್ಯ ಇಲಾಖೆ ಪೋಷಣೆ ಮಾಡುತ್ತಿದೆ.

‘2022-23 ನೇ ಸಾಲಿನ ಮುಂಗಾರಿನಲ್ಲಿ ತಾಲ್ಲೂಕಿನ ವಿವಿಧೆಡೆ ಸಸಿಗಳನ್ನು ನೆಡಲು ಇಲಾಖೆಯಿಂದ ಜೈನಾಪುರ ಮತ್ತು ಚಿಂಚಣಿಯಲ್ಲಿರುವ ನರ್ಸರಿಗಳಲ್ಲಿ ವಿವಿಧ ಬಗೆಯ ಹೂವು, ಆಲ, ಅರಳಿ, ಬಸರಿ, ಬೇವು, ತಪಸಿ, ಹುಣಸೆ, ನೇಲಿ ಸೇರಿದಂತೆ ಹಲವು ಜಾತಿಯ 25ಸಾವಿರ ಸಸಿಗಳನ್ನು ಸಿದ್ಧಪಡಿಸಿದೆ’ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಉಮೇಶ ಪ್ರಧಾನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ರೈತರು ಹೊಲಗಳ ಬದುಗಳಲ್ಲಿ, ಕೃಷಿ ಯೋಗ್ಯವಲ್ಲದ ಭೂಮಿಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಲು ಪ್ರೋತ್ಸಾಹಧನ ನೀಡಲಾಗುತ್ತಿದೆ. ರಿಯಾಯತಿ ದರದಲ್ಲಿ ಅಂದರೆ ₹ 3ಕ್ಕೆ ಒಂದು ಸಸಿ ನೀಡಲಾಗುವುದು. ಮೂರು ವರ್ಷಗಳ ಕಾಲ ಅವುಗಳ ಪೋಷಣೆಗೆ ಒಂದು ಸಸಿಗೆ ₹ 125 ಪ್ರೋತ್ಸಾಹಧನ ಕೊಡಲಾಗುವುದು. ರೈತರು ಇದನ್ನು ಬಳಸಿಕೊಳ್ಳಬೇಕು’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT