ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನ ನಾಮಸ್ಮರಣೆಯಿಂದ ನೆಮ್ಮದಿ: ಸಿದ್ದೇಶ್ವರ ಸ್ವಾಮೀಜಿ ಅಭಿಮತ

Last Updated 26 ಮಾರ್ಚ್ 2019, 13:07 IST
ಅಕ್ಷರ ಗಾತ್ರ

ಬೆಳಗಾವಿ: ‘ಭಗವಂತನ ನಾಮಸ್ಮರಣೆಯು ಮನಸ್ಸು ಹೊಲಸಾಗದಂತೆ ನೋಡಿಕೊಳ್ಳುತ್ತದೆ; ಸಮಾಧಾನಗೊಳಿಸುತ್ತದೆ. ಆಗ ದೇವದರ್ಶನ ಸಾಧ್ಯವಾಗುತ್ತದೆ‌’ ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ಇಲ್ಲಿನ ಹಿಂದವಾಡಿಯ ಎಸಿಪಿಆರ್‌–ಗುರುದೇವ ರಾನಡೆ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಗುರುದೇವ ರಾನಡೆ- ಜೀವನ ದರ್ಶನ' ಕನ್ನಡ ಅನುವಾದ (ಮೂಲ: ಮರಾಠಿ, ಲೇಖಕ:ದಾದಾಸಾಹೇಬ ದೇಶಪಾಂಡೆ) ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಗುರುದೇವ ರಾನಡೆ ಶ್ರೇಷ್ಠ ಸಂತರು, ಅನುಭಾವಿಗಳು, ಪವಿತ್ರ‌ಜೀವನ ಸಾಗಿಸಿದವರು. ದೊಡ್ಡ ಜ್ಞಾನಿ. ತತ್ವಜ್ಞಾನ ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜಿದವರು. ಜೀವನದಲ್ಲಿ ಕಷ್ಟ, ನಷ್ಟ, ಸಂತೋಷ ಸಾಮಾನ್ಯ. ಇವೆಲ್ಲದರ ಮಧ್ಯೆ ಶ್ರೇಷ್ಠ ಅನುಭಾವಿಯಾಗಲು ಇಂತಹ ಗುರುಗಳ ಜೀವನದ ಕುರಿತ ಗ್ರಂಥಗಳನ್ನು ಓದಬೇಕು. ಆಗ ಹೊಸ ದರ್ಶನವಾಗುತ್ತದೆ’ ಎಂದು ಸಲಹೆ ನೀಡಿದರು.

ತೂಕ ಮಾಡಿ ಬರೆದವರು:

‘ಶರಣರು, ಸಂತರು ಹಾಗೂ ಅನುಭವಿಗಳ ದರ್ಶನವೇ ಇರಲಿ ಎಲ್ಲವನ್ನೂ ತೂಕ ಮಾಡಿ ಬರೆದವರು ರಾನಡೆಯವರು. ಎರಡರ ಜ್ಞಾನವೂ ನಮಗಿದ್ದಾಗ ತೂಗುವ ಸಾಮರ್ಥ್ಯ ಹಾಗೂ ಶಕ್ತಿ ಬರುತ್ತದೆ. ಸಮನ್ವಯ ಹಾಗೂ ಹೋಲಿಕೆ ಮಾಡುವ ರೀತಿ ಪರಿಣಾಮಕಾರಿಯಾಗಿ ಇರುತ್ತದೆ. ಅವರು ದ್ವೈತ ಹಾಗೂ ಅದ್ವೈತವನ್ನು ಸಮನ್ವಯಗೊಳಿಸಿರುವುದು ಅದ್ಭುತವಾಗಿದೆ. ಸಮನ್ವಯ ಸಿದ್ಧಾಂತ ಮಂಡಿಸಿದ ಅವರಿಗೆ ಯಾವುದೂ ಪರಕೀಯ ಅಥವಾ ನಮ್ಮದು ಎನಿಸಲಿಲ್ಲ. ಎಲ್ಲವೂ ದೃಷ್ಟಿಕೋನದ ಮೇಲೆ ಅವಲಂಬನೆಯಾಗುತ್ತದೆ ಎಂದು ಭಾವಿಸಿದ್ದರು. ಸಮನ್ವಯ ದೃಷ್ಟಿಕೋನ ಹಾಗೂ ಸಮದರ್ಶನ ಮಂಡಿಸಿದರು’ ಎಂದು ಸ್ಮರಿಸಿದರು.

ತೋಂಟದಾರ್ಯ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ರಾನಡೆ ಅವರು ಜೀವನದುದ್ದಕ್ಕೂ ಅಧ್ಯಾತ್ಮ ಜೀವಿಗಳಿಗೆ ಮಾರ್ಗದರ್ಶನ ಮಾಡಿದರು. ಹೀಗಾಗಿಯೇ ಅವರನ್ನು ಗುರುದೇವ ಎನ್ನುತ್ತೇವೆ. ಅವರ ಅನುಭವದ ಕೃತಿಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿವೆ. ಅವುಗಳನ್ನು ಓದಿ, ಜ್ಞಾನದ ಕ್ಷಿತಿಜ ವಿಸ್ತರಿಸಿಕೊಳ್ಳಬೇಕು’ ಎಂದರು.

ವಿದ್ಯಾರ್ಥಿಗಳ ಸಂಖ್ಯೆ ಕುಸಿತ:

‘ಇತ್ತೀಚಿನ ದಿನಗಳಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡುವವರ ಸಂಖ್ಯೆ ಹಾಗೂ ಓದುಗರ‌ ಸಂಖ್ಯೆ ಕಡಿಮೆಯಾಗಿದೆ. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿವೇತನ ನೀಡಿದರೂ ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ತತ್ವಶಾಸ್ತ್ರ ಓದುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ. ವಿಶಾಲ ಮನೋಭಾವ ಬೆಳೆಯುತ್ತದೆ. ವಿವಿಧ ದರ್ಶನಗಳು ಭಾರತೀಯ ತತ್ವಶಾಸ್ತ್ರದಲ್ಲಿವೆ. ದೇವರಿದ್ದಾನೆ ಎನ್ನುವ ದರ್ಶನದೊಂದಿಗೆ ದೇವರಿಲ್ಲ ಎನ್ನುವ ದರ್ಶನವೂ ಇದೆ. ಹೀಗಾಗಿ ಭಾರತದ ತತ್ವಶಾಸ್ತ್ರ ವಿಶಿಷ್ಟವಾಗಿದೆ. ಜನಪ್ರತಿನಿಧಿಗಳು ತತ್ವಶಾಸ್ತ್ರ ಅಧ್ಯಯನ ಮಾಡಬೇಕು. ಆಗ ಅವರ ಭಾವ ವಿಶಾಲವಾಗಿ ಎಲ್ಲರನ್ನೂ ಸಮಾನವಾಗಿ ಕಾಣುವ ಮನಸ್ಸು ಬರುತ್ತದೆ’ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಕಾಲೇಜುಗಳಲ್ಲಿ ತತ್ವಶಾಸ್ತ್ರ ಕಲಿಯುವವರ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಆ ವಿಭಾಗಗಳನ್ನು ಮುಚ್ಚುವಂಥ ಸ್ಥಿತಿ ಬಂದಿದೆ. ಇಡೀ ಜಗತ್ತಿಗೆ ತತ್ವಶಾಸ್ತ್ರ ನೀಡಿದ ನಮ್ಮಲ್ಲಿಯೇ ಆ ವಿಷಯ ಕಲಿಯಲು ಬರುವವರಿಲ್ಲ’ ಎಂದು ವಿಷಾದಿಸಿದರು.

ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಲೇಖಕ ಚಂದ್ರಕಾಂತ ಪೋಕಳೆ, ಎಸಿಪಿಆರ್‌ ಅಧ್ಯಕ್ಷ ಅಶೋಕ ಪೋತದಾರ ಇದ್ದರು.

ಕಿಶೋರ್ ಕಾಕಡೆ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಎಂ.ಬಿ. ಝಿರಲಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT