ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡುಗಡ್ಡೆಯಂತಾಗಿರುವ ಜನವಸತಿ ಪ್ರದೇಶ

ಹರಿತ ಕ್ರಾಂತಿ ನಗರದ ಹಾದಿಗಳಿಗೆ ನುಗ್ಗಿದ ಕೃಷ್ಣೆ; ಸಂಪರ್ಕ ಕಡಿತ
Last Updated 2 ಆಗಸ್ಟ್ 2019, 13:08 IST
ಅಕ್ಷರ ಗಾತ್ರ

ಚಿಕ್ಕೋಡಿ: ಒಂದು ನೂರಕ್ಕೂ ಹೆಚ್ಚು ಮನೆಗಳಿರುವ ಆ ಜನವಸತಿ ಪ್ರದೇಶವೀಗ ಅಕ್ಷರಶಃ ದ್ವೀಪದಂತಾಗಿದೆ. ನಾಲ್ಕೂ ಕಡೆಯಿಂದಲೂ ಸುತ್ತುವರೆದಿರುವ ಕೃಷ್ಣೆಯ ಕಬಂಧಬಾಹುಗಳಲ್ಲಿ ಸಿಲುಕಿಕೊಂಡಿರುವ 500ಕ್ಕೂ ಹೆಚ್ಚು ಜನರ ಸಂಚಾರಕ್ಕೆ ಸಂಚಕಾರ ಒಂದೊದಗಿದೆ.

ಅನಿವಾರ್ಯ ಪರಿಸ್ಥಿಯಲ್ಲಿ ಕತ್ತಿನವರೆಗೂ ಬರುವ ನೀರಿನಲ್ಲಿ ನಡೆದುಕೊಂಡು ಹೋಗಬೇಕು, ನೀರಿನಲ್ಲಿ ನಡೆದುಕೊಂಡು ಹೋಗಲಾರದವರು ಸುಮಾರು ಎರಡು ಕಿ.ಮಿ.ನಷ್ಟು ದೂರ ಕಬ್ಬಿನ ಗದ್ದೆಗಳ ಕೆಸರಿನಲ್ಲಿ ನಡೆದುಕೊಂಡು ರಸ್ತೆ ಸೇರಬೇಕು. ಸಂಪರ್ಕ ರಸ್ತೆಗಳು ಕಡಿತಗೊಂಡ ನಂತರ ಶಾಲೆ–ಕಾಲೇಜುಗಳಿಗೂ ತೆರಳದಂತಹ ಸ್ಥಿತಿಯಲ್ಲಿದ್ದಾರೆ ಇಲ್ಲಿನ ಮಕ್ಕಳು.

ಚಿಕ್ಕೋಡಿ ತಾಲ್ಲೂಕಿನ ಮಾಂಜರಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ‘ಹರಿತ ಕ್ರಾಂತಿ ನಗರ’ ಜನವಸತಿ ಪ್ರದೇಶದಲ್ಲಿ ಶುಕ್ರವಾರ ಕಂಡು ಬಂದ ಸನ್ನಿವೇಶಗಳಿವು.

ಮಾಂಜರಿ ಗ್ರಾಮದಿಂದ 3 ಕಿ.ಮೀ. ಅಂತರದಲ್ಲಿರುವ ಹರಿತ ಕ್ರಾಂತಿ ನಗರದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, 500ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಕೃಷಿಯೊಂದಿಗೆ ಹೈನುಗಾರಿಕೆಯನ್ನು ಉಪಕಸುಬನ್ನಾಗಿಸಿಕೊಂಡಿರುವ ಇಲ್ಲಿನ ರೈತಾಪಿ ಕುಟುಂಬಗಳು 300ಕ್ಕೂ ಹೆಚ್ಚು ದನಕರುಗಳನ್ನು ಸಾಕಿದ್ದಾರೆ.

ದಕ್ಷಿಣ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೃಷ್ಣಾ ನದಿಗೆ 2 ಲಕ್ಷ ಕ್ಯುಸೆಕ್‌ದಷ್ಟು ನೀರು ಹರಿದು ಬರುತ್ತಿರುವುದರಿಂದ ಶಿರಗುಪ್ಪಿ, ಇಂಗಳಿ ಮತ್ತು ಮಾಂಜರಿ ಕಡೆಗಳಿಂದ ಹರಿತ ಕ್ರಾಂತಿ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ಅಲ್ಲಲ್ಲಿ ಐದಾರು ಅಡಿಗಳಷ್ಟು ಹಿನ್ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ.

‘ಮಾಂಜರಿ ಮತ್ತು ಇಂಗಳಿ ಗ್ರಾಮಗಳ 8 ಕಿ.ಮೀ. ಅಂತರದಲ್ಲಿ ಮೂರು ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೆ, ಸೇತುವೆಗಳ ಎತ್ತರವನ್ನು ಹೆಚ್ಚಿಸಲಾಗಿದೆ. ಹೊರತು, ಸೇತುವೆಗಳ ಎರಡೂ ಬದಿಗಳ ಎತ್ತರವನ್ನು ಹೆಚ್ಚಿಸಿಲ್ಲ. ಹೀಗಾಗಿ ಬೆಳ್ಳಂಕಿ ಸರಳದಲ್ಲಿರುವ ಹಳೆ ಸೇತುವೆ, ದಾಬಡೆ ಒತ್ತು, ಸುಳಕೂಡೆ ಒತ್ತು ಬಳಿ ನಿರ್ಮಿಸಿರುವ ಸೇತುವೆಗಳ ಇಕ್ಕೆಲ್ಲಗಳಲ್ಲಿ ಹಿನ್ನೀರು ಹರಿಯುತ್ತಿರುವುದರಿಂದ ಸಂಪರ್ಕ ಕಡಿತಗೊಂಡಿದೆ. ಪಾದಕಟ್ಟೆ ಕೆರೆ ಸೇತುವೆಯೂ ಮುಳುಗಡೆಯಾಗಿದೆ. ಇದರಿಂದ ಸಂಚಾರ ಕಡಿತಗೊಂಡಿದೆ’ ಎಂದು ಹರಿತ ಕ್ರಾಂತಿ ನಗರ ನಿವಾಸಿ ರಾಜು ಲೋಕುರೆ ಅಳಲು ತೋಡಿಕೊಳ್ಳುತ್ತಾರೆ.

‘ನಾಲ್ಕೂ ಕಡೆಗಳಿಂದಲೂ ನೀರು ಸುತ್ತುವರಿದಿದೆ. ಸಂಪರ್ಕ ಕಡಿತಗೊಂಡಿದೆ. ಮಾಂಜರಿ ಗ್ರಾಮದಲ್ಲಿ ಹಳೆಯ ಮನೆಗಳಿವೆ. ಆದರೆ, ಅಲ್ಲಿ ಜಾನುವಾರುಗಳನ್ನು ಕಟ್ಟಲು, ಕುಟುಂಬದ ಎಲ್ಲ ಸದಸ್ಯರೂ ಉಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಕೃಷ್ಣಾ ನದಿಗೆ ನೀರು ಹೆಚ್ಚಳವಾದಾಗ ತೊಂದರೆ ಅನುಭವಿಸುತ್ತಿದ್ದೇವೆ. ಹೊಸದಾಗಿ ನಿರ್ಮಿಸಿರುವ ಸೇತುವೆಗಳ ಎರಡೂ ಬದಿಗಳನ್ನೂ ಎತ್ತರಿಸಬೇಕು. ಮತ್ತು ದೋಣಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಮಾಂಜರಿ ಗ್ರಾಮ ವ್ಯಾಪ್ತಿಯ ಹರಿತ ಕ್ರಾಂತಿ ನಗರದಿಂದ ಸುಮಾರು 40 ಮಕ್ಕಳು ಶಾಲೆ–ಕಾಲೇಜುಗಳಿಗೆ ಮಾಂಜರಿ, ಅಂಕಲಿ ಮತ್ತು ಚಿಕ್ಕೋಡಿ ಪಟ್ಟಣಗಳಿಗೆ ಹೋಗುತ್ತಾರೆ. ಆದರೆ, ಈ ಜನವಸತಿ ಪ್ರದೇಶಕ್ಕೆ ಸಂಪರ್ಕವೇ ಕಡಿತಗೊಂಡಿರುವುದರಿಂದ ಮಕ್ಕಳು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದು, ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಇಲ್ಲಿ ಅಂಗನವಾಡಿ ಕೇಂದ್ರವಿದೆ. ಆದರೆ, ಶಿಕ್ಷಕಿಯರು ಇಲ್ಲಿಗೇ ಬರಲು ಆಗದೇ ಇರುವುದರಿಂದ ಅದೂ ಬಂದ್‌ ಆಗಿದೆ’ ಎಂದು ರಮೇಶ ಲೋಕರೆ ಹೇಳುತ್ತಾರೆ.

ಸಂಪರ್ಕ ಕಡಿತಗೊಂಡು ನಾಲ್ಕು ದಿನ ಕಳೆದರೂ ಅಧಿಕಾರಿಗಳು ಇತ್ತ ಸುಳಿದಿಲ್ಲ. ಇದರ ಬಗ್ಗೆ ನಿವಾಸಿಗಳಲ್ಲಿ ಆಕ್ರೋಶ ಮಡುಗಟ್ಟಿದೆ. ಅವಘಡ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT