ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಾಚ್ಯ ಶಬ್ದಗಳಿಂದ ನಿಂದನೆ: ರೇವಣ್ಣ, ಸೂರಜ್ ಕ್ಷಮೆ

ಇನ್ಸಿಡೆಂಟ್ ಅಲ್ಲ, ಆಕ್ಸಿಡೆಂಟ್– ಸೂರಜ್
Published 4 ಡಿಸೆಂಬರ್ 2023, 16:27 IST
Last Updated 4 ಡಿಸೆಂಬರ್ 2023, 16:27 IST
ಅಕ್ಷರ ಗಾತ್ರ

ಬೆಳಗಾವಿ: ಕಾರಿಗೆ ಡಿಕ್ಕಿ ಹೊಡೆದ ಬೈಕ್‌ ಸವಾರನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪತ್ನಿ ಭವಾನಿ ಪರ ಜೆಡಿಎಸ್‌ ಶಾಸಕ ಎಚ್‌. ಡಿ. ರೇವಣ್ಣ ಮತ್ತು ಅವರ ಮಗ, ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಕ್ಷಮೆ ಕೇಳಿದರು.

ಇಲ್ಲಿನ ಸುವರ್ಣಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ರೇವಣ್ಣ, ‘ಪತ್ನಿಯ ವರ್ತನೆಯ ಬಗ್ಗೆ ಯಾರಿಗಾದರೂ ನೋವಾದರೆ ಕ್ಷಮೆ ಕೋರುತ್ತೇನೆ’ ಎಂದರು.

‘ಬೈಕ್ ಸವಾರ ಕುಡಿದು ಬೈಕ್ ಓಡಿಸಿದ್ದ. ನಾವೇನು ಅವನ ಬಳಿ ಜಖಂ ಆಗಿರುವುದಕ್ಕೆ ಹಣ ಕೊಡಿ ಎಂದು ಕೇಳಲಿಲ್ಲ. ಏನಾದರೂ ಹೆಚ್ಚು ಕಮ್ಮಿ ಆಗುತ್ತಿದ್ದರೆ ಯಾರು ಹೊಣೆ? ಬೇಕಾದರೆ ಭವಾನಿ ರೇವಣ್ಣ ಅವರಿಂದಲೂ ಕ್ಷಮೆ ಕೇಳಿಸುತ್ತೇನೆ’ ಎಂದರು.

‘ಬೈಕ್ ಸವಾರನೇ ಬಂದು ಕಾರಿಗೆ ಗುದ್ದಿದ್ದಾನೆ. ಹೆಚ್ಚು ಕಡಿಮೆ ಆಗಿದ್ದರೆ ಏನಾಗಾಗುತ್ತಿತ್ತು?, ಅವರು ಏನೂ ಅಹಂಕಾರ ಮಾಡಿಲ್ಲ. ಭವಾನಿ ಅವರು ಯಾರದ್ದೋ ಸ್ನೇಹಿತನ ಕಾರಿನಲ್ಲಿ ಹೋಗಿದ್ದರು.‌ ನಮ್ಮ‌ಕುಟುಂಬ ಯಾರಿಗೂ ನೋವು ಆಗುವ ಕೆಲಸ ಮಾಡುವುದಿಲ್ಲ. ಬೇಕಂತಲೇ ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ’ ಎಂದರು.

ಸೂರಜ್ ರೇವಣ್ಣ ಮಾತನಾಡಿ, ‘ಅಪಘಾತದಲ್ಲಿ ಬೈಕ್ ಸವಾರನದ್ದೇ ತಪ್ಪಿದೆ. ಇದೊಂದು ಆಕ್ಸಿಡೆಂಟ್. ಇನ್ಸಿಡೆಂಟ್ ಅಲ್ಲ. ಇದನ್ನು ಯಾರೂ ಬೇಕೆಂದೇ ಮಾಡುವುದಿಲ್ಲ. ಈ ವೇಳೆ ನನ್ನ ತಾಯಿ ಬಳಕೆ ಮಾಡಿರುವ ಪದಗಳು ತಪ್ಪಾಗಿವೆ. ತಾಯಿ ಬಳಸಿರುವ ಪದಗಳಿಗಾಗಿ ಕ್ಷಮೆ ಕೇಳುತ್ತೇನೆ’ ಎಂದರು.

‘ಬೈಕ್ ಸವಾರನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಇದಕ್ಕಿಂತಲೂ ಹೆಚ್ಚು ಏನು ಮಾಡಬೇಕು? ಇದರಲ್ಲಿ ಬೈಕ್ ಸವಾರನದ್ದೇ ತಪ್ಪಿದೆ’ ಎಂದೂ ಸಮರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT