ಸೋಮವಾರ, ಏಪ್ರಿಲ್ 19, 2021
29 °C
ಇ.ಡಿ. ಹೆಸರಲ್ಲಿ ಬ್ಯಾಂಕ್‌ಗಳಿಗೆ ನೋಟಿಸ್ ಕಳುಹಿಸಿದ್ದ ಪ್ರಕರಣ

ಬೆಳಗಾವಿ: ₹ 26 ಲಕ್ಷ ವಂಚಿಸಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜೀವ ವಿಮಾ ಕಂಪನಿಯೊಂದರಲ್ಲಿ ಪಾಲಿಸಿದಾರರ ಹಣವನ್ನು ಮೋಸದಿಂದ ತನ್ನ ಹಾಗೂ ಇತರರ ಖಾತೆಗೆ ವರ್ಗಾಯಿಸಿಕೊಂಡ ಆರೋದ ಮೇಲೆ ವ್ಯಕ್ತಿಯನ್ನು ಸಿಇಎನ್ (ಸೈಬರ್, ಎಕನಾಮಿಕ್ಸ್‌ ಆ್ಯಂಡ್ ನಾರ್ಕೋಟಿಕ್) ಅಪರಾಧ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಇಲ್ಲಿನ ಶಾಸ್ತ್ರಿ ನಗರದ ಮಧುಕರ ವಿಲಾಸ ಸಪಳೆ (31) ಬಂಧಿತ ಆರೋಪಿ.

‘ಅವರು ಪಿಎನ್‌ಬಿ ಮೆಟ್‌ಲೈಫ್‌ ವಿಮಾ ಕಂಪನಿ ಪಾಲಿಸಿದಾರರ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ₹ 26 ಲಕ್ಷ ವಂಚಿಸಿದ್ದಾಗಿ ವಿಚಾರಣೆ ವೇಳೆ ಒಪ್ಪಿದ್ದಾರೆ. ಅಲ್ಲದೆ, ಜಾರಿ ನಿರ್ದೇಶನಾಲಯ (ಇ.ಡಿ)ದ ಹೆಸರಿನಲ್ಲಿ ನಕಲಿ ನೋಟಿಸ್‌ಗಳನ್ನು ತಯಾರಿಸಿ ನಿಗದಿತ ಗ್ರಾಹಕರ ಖಾತೆಗಳನ್ನು ಸ್ಥಗಿತಗೊಳಿಸಲು (ಫ್ರೀಜ್) ಕೆಲವು ಬ್ಯಾಂಕ್‌ ಶಾಖೆಗಳಿಗೆ ಕಳುಹಿಸಿದ್ದರು. ಇಲ್ಲಿನ ಯೂನಿಯನ್ ಬ್ಯಾಂಕ್‌ ಶಾಖೆಗೆ 3, ಐಡಿಬಿಐ ಬ್ಯಾಂಕ್‌ಗೆ 1, ಎಸ್‌ಬಿಐ ಬ್ಯಾಂಕ್‌ಗೆ 1, ಖಾನಾಪುರದ ಬ್ಯಾಂಕ್‌ ಆಫ್‌ ಮಹಾರಾಷ್ಟ್ರ ಬ್ಯಾಂಕ್‌ಗೆ ಹಾಗೂ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ಬ್ಯಾಂಕ್‌ಗೆ ಒಂದು ನೋಟಿಸ್ ಅನ್ನು ಕೋವಿಡ್–19 ಲಾಕ್‌ಡೌನ್‌ ಸಮಯದಲ್ಲಿ ಅಂಚೆ ಮೂಲಕ ಕಳುಹಿಸಿದ್ದರು’ ಎಂದು ಡಿಸಿ‍ಪಿ ವಿಕ್ರಂ ಅಮಟೆ ತಿಳಿಸಿದರು.

‘ಸತೀಶ ಕಪಿಲೇಶ್ವರಿ ಎನ್ನುವವರ ಹೆಸರಿನಲ್ಲಿ ಇಬ್ಬರು ಸೆಷನ್ಸ್ ನ್ಯಾಯಾಧೀಶರು ಹಾಗೂ ಕೆಲವು ಖ್ಯಾತ ವಕೀಲರ ಹೆಸರನ್ನು ನಮೂದಿಸಿ ನಕಲಿ ಲೀಗಲ್ ನೋಟಿಸ್‌ಗಳನ್ನು ಕಳುಹಿಸಿದ ಬಗ್ಗೆಯೂ ಆರೋಪಿ ಒಪ್ಪಿದ್ದಾರೆ. ಇದೇ ರೀತಿ ಬೇರೆ ಬೇರೆ ರಾಜ್ಯಗಳಿಗೂ ಇ.ಡಿ. ಹೆಸರಿನಲ್ಲಿ ನೋಟಿಸ್‌ಗಳನ್ನು ಕಳುಹಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ’ ಎಂದು ಮಾಹಿತಿ ನೀಡಿದರು.

‘ಆರೋಪಿಯಿಂದ ನಕಲಿ ರಬ್ಬರ್‌ ಸ್ಟ್ಯಾಂಪ್‌ಗಳನ್ನು ತಯಾರಿಸಲು ಬಳಸಿದ ಯಂತ್ರ ಹಾಗೂ ‍ಪ್ರಿಂಟರ್, 2 ಕಾರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಇನ್‌ಸ್ಪಕ್ಟರ್‌ ಬಿ.ಆರ್‌. ಗಡ್ಡೇಕರ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಅವರನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ.

ಗ್ರಾಹಕರ ಖಾತೆಗಳಿಂದ ಹಣ ಸೆಳೆಯಲು ಬೇಕಾಗುವ ಮಾಹಿತಿಯನ್ನು ಬ್ಯಾಂಕ್‌ ಅಧಿಕಾರಿಗಳಿಂದಲೆ ಪಡೆದು ವಂಚಿಸಲು ಆರೋಪಿ ರೂಪಿಸಿದ್ದ ತಂತ್ರವಿದು. ಕೆಲವು ಗ್ರಾಹಕರ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಂತೆ ಸೂಚಿಸಿ ಇ.ಡಿ. ಹೆಸರಿನಲ್ಲಿ ವಿವಿಧ ಬ್ಯಾಂಕ್‌ಗಳಿಗೆ ನೋಟಿಸ್ ಕಳುಹಿಸಿದ್ದರು. ಇದನ್ನು ನಂಬಿದ್ದ ಬ್ಯಾಂಕ್‌ಗಳವರು ಬ್ಯಾಂಕ್‌ಗಳವರು ನಿರ್ದಿಷ್ಟ ಗ್ರಾಹಕರ ಖಾತೆ ಫ್ರೀಜ್ ಮಾಡಿ ಮಾಹಿತಿಯನ್ನು ಇ.ಡಿ. ಕಚೇರಿಗೆ ಕಳುಹಿಸಿದ್ದಾರೆ. ‘ನಾವು ಆ ರೀತಿ ಗ್ರಾಹಕರ ಖಾತೆಯ ಡೆಬಿಟ್ ಫ್ರೀಜ್ ಮಾಡುವಂತೆ ನೋಟಿಸ್ ಜಾರಿ ಮಾಡಿಲ್ಲ. ನಿಮಗೆ ಬಂದಿರುವ ನೋಟಿಸ್‌ಗಳ ಬಗ್ಗೆ ಅನುಮಾನವಿದೆ. ಪೊಲೀಸ್ ಠಾಣೆಗೆ ದೂರು ದಾಖಲಿಸಿ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಬೇಕು’ ಎಂದು ಇ.ಡಿ.ಯು ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಆಗ, ಸೈಬರ್ ಖದೀಮರು ವಂಚಿಸಲು ಯತ್ನಿಸಿರುವುದು ಗಮನಕ್ಕೆ ಬಂದಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು