ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲೇ ಆರೋಗ್ಯ ವಿಮೆ ಕೇಂದ್ರ ತೆರೆದ ಮಹಾರಾಷ್ಟ್ರ

Published 8 ಜನವರಿ 2024, 16:38 IST
Last Updated 8 ಜನವರಿ 2024, 16:38 IST
ಅಕ್ಷರ ಗಾತ್ರ

ಬೆಳಗಾವಿ: ಕರ್ನಾಟಕದ ಗಡಿಯೊಳಗಿನ 865 ಹಳ್ಳಿ–ಪಟ್ಟಣಗಳ ಜನರಿಗಾಗಿ ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದ ‘ಮಹಾತ್ಮ ಜ್ಯೋತಿರಾವ್‌ ಫುಲೆ ಜನಾರೋಗ್ಯ ವಿಮೆ’ ಯೋಜನೆಯ ಅನುಷ್ಠಾನಕ್ಕೆ ಈಗ ಬೆಳಗಾವಿ ನಗರದಲ್ಲೇ ಐದು ಕೇಂದ್ರಗಳನ್ನು ತೆರೆಯಲಾಗಿದೆ. ಐದೂ ಕಡೆ ಸಹಾಯವಾಣಿ, ಅರ್ಜಿ ವಿತರಣೆ– ಸ್ವೀಕಾರ ಹಾಗೂ ಎಂಇಎಸ್‌ ಶಿಫಾರಸು ಪತ್ರ ಕೂಡ ನೀಡಲಾಗುತ್ತಿದೆ.

ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಮಹಾರಾಷ್ಟ್ರದ ಉನ್ನತಾಧಿಕಾರ ಸಮಿತಿ ಅಧ್ಯಕ್ಷ ಹಾಗೂ ಸಂಸದ ಧೈರ್ಯಶೀಲ ಮಾನೆ ಅವರು ಜನವರಿ 4ರಂದು ಬೆಳಗಾವಿಯಲ್ಲಿ ಗೋಪ್ಯ ಸಭೆ ಮಾಡಿ, ಕೈಪಿಡಿ ಬಿಡುಗಡೆ ಮಾಡಿದ್ದಾರೆ. ಐದು ಕೇಂದ್ರಗಳನ್ನು ಉದ್ಘಾಟಿಸಿ, ಮೊಬೈಲ್‌ ಸಂಖ್ಯೆಗಳನ್ನೂ ನೀಡಿದ್ದಾರೆ. ಪ್ರತಿ ಕೇಂದ್ರದಲ್ಲಿ ನಾಲ್ವರು ಸಹಾಯಕರನ್ನು ನೇಮಿಸಿದ್ದಾರೆ. ಅವರು ಬಂದು ಹೋದ ನಾಲ್ಕೆ ದಿನಗಲ್ಲಿ ಕೇಂದ್ರಗಳು ಕಾರ್ಯಾರಂಭ ಮಾಡಿವೆ.

ಎಲ್ಲೆಲ್ಲಿವೆ ಕೇಂದ್ರಗಳು:

ಶಹಾಪುರ ವಿಠ್ಠಲದೇವ ಗಲ್ಲಿಯಲ್ಲಿ (9945548958), ಗೋವಾವೇಸ್‌ನಲ್ಲಿ ಸಿದ್ಧಿವಿನಾಯಕ ಸೇವಾ ಕೇಂದ್ರ (9448866930), ಖಡಕ್ ಗಲ್ಲಿಯಲ್ಲಿ ಎಂಇಎಸ್ ಸೇವಾ ಕೇಂದ್ರ (98801131123), ಶಿವಾಜಿ ನಗರ ಸೇವಾಕೇಂದ್ರ ಹಾಗೂ ಶಿವಾಜಿ ಮಂಡೋಳ್ಕರ್ ಸೇವಾ ಕೇಂದ್ರಗಳನ್ನು (9964070072) ತೆರೆಯಲಾಗಿದೆ. ಅಲ್ಲದೇ, ಯೋಜನೆಯ ಮಾಹಿತಿ ನೀಡಲು ಉಚಿತ ದೂರವಾಣಿ ಸಂಖ್ಯೆ (8650567567) ಕೂಡ ಕೊಡಲಾಗಿದೆ.

‘ವಿವಾದಕ್ಕೆ ಒಳಪಟ್ಟ 865 ಪ್ರದೇಶಗಳಿಗೆ ಮಾತ್ರ ಈ ಯೋಜನೆ ಜಾರಿ ಮಾಡಲಾಗಿದೆ. ಇದರ ಹಿಂದೆ ಮಹಾರಾಷ್ಟ್ರ ಸರ್ಕಾರದ ದುರುದ್ದೇಶವಿದೆ. ಮರಾಠಿಗರನ್ನು ತನ್ನತ್ತ ಭಾವನಾತ್ಮಕವಾಗಿ ಸೆಳೆಯುವುದು, ಕರ್ನಾಟಕ ಸರ್ಕಾರ ನಿರ್ಲಕ್ಷ್ಯ ಮಾಡಿದೆ ಎಂದು ಎತ್ತಿ ತೋರಿಸುವುದು, ಮರಾಠಿ ಭಾಷಿಕರೆಲ್ಲ ಮಹಾರಾಷ್ಟ್ರದ ಪ್ರಜೆಗಳು ಎಂದು ಆಮಿಷವೊಡ್ಡುವುದು, ಆ ಮೂಲಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲು ದಾಖಲೆ ಸೃಷ್ಟಿಸುವುದು ಮಹಾರಾಷ್ಟ್ರ ಸರ್ಕಾರದ ಹುನ್ನಾರ. ಅವರು ಇಷ್ಟೆಲ್ಲ ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ಮಾತ್ರ ಕಣ್ಣು–ಕಿವಿ– ಬಾಯಿ ಮುಚ್ಚಿಕೊಂಡು ಕುಳಿತಿದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಕಿಡಿ ಕಾರಿದ್ದಾರೆ.

ನಾಗೇಶ ಪಾಂಡುರಂಗ ಮಾರೇಕರ ಎನ್ನುವವರಿಗೆ ₹2.36 ಲಕ್ಷ ಆರೋಗ್ಯ ವಿಮೆ ಮಂಜೂರು ಮಾಡುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ನೀಡಿದ ಶಿಫಾರಸು ಪತ್ರ / ಪ್ರಜಾವಾಣಿ ಚಿತ್ರ
ನಾಗೇಶ ಪಾಂಡುರಂಗ ಮಾರೇಕರ ಎನ್ನುವವರಿಗೆ ₹2.36 ಲಕ್ಷ ಆರೋಗ್ಯ ವಿಮೆ ಮಂಜೂರು ಮಾಡುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ ನೀಡಿದ ಶಿಫಾರಸು ಪತ್ರ / ಪ್ರಜಾವಾಣಿ ಚಿತ್ರ
ಮಹಾರಾಷ್ಟ್ರ ಸರ್ಕಾರ ಈಗ ನಮ್ಮ ಅಡುಗೆ ಮನೆಗೇ ನುಗ್ಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೂ ನಿರ್ಲಕ್ಷ್ಯ ವಹಿಸಿದರೆ ಮುಂದೆ ದೊಡ್ಡ ಆಘಾತ ಕಾದಿದೆ
ಅಶೋಕ ಚಂದರಗಿ ಅಧ್ಯಕ್ಷ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಎಂಇಎಸ್ ಶಿಫಾರಸು ಮಾತ್ರ ಸಾಕು!
ಆರೋಗ್ಯ ವಿಮೆ ಪಡೆಯಲು ‘ನಾನು ಮರಾಠಿಗ’ ಎಂಬ ಮುಚ್ಚಳಿಕೆ ಕೊಡುವುದು ಕಡ್ಡಾಯ. ಆದರೆ ಯಾರಿಗೆ ಎಷ್ಟು ಹಣ ಮಂಜೂರು ಮಾಡಬೇಕು ಎಂಬುದನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಶಿಫಾರಸು ಮಾಡುತ್ತದೆ. ಆಧಾರ್‌ ಕಾರ್ಡ್‌ ಮತದಾರರ ಗುರುತಿನ ಚೀಟಿ ರೇಷನ್‌ ಕಾರ್ಡ್‌ ಸೇರಿದಂತೆ ಕರ್ನಾಟಕದ ಯಾವುದೇ ದಾಖಲೆಯೂ ಇದಕ್ಕೆ ಬೇಕಿಲ್ಲ. ಶಿಫಾರಸು ಪತ್ರ ಒಂದಿದ್ದರೆ ಸಾಕು. ಬೆಳಗಾವಿ ಬೀದರ್‌ ಕಲಬುರಗಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 12 ತಾಲ್ಲೂಕುಗಳಲ್ಲಿರುವ 865 ಹಳ್ಳಿಗಳ ಎಲ್ಲ ಭಾಷಿಕರೂ ಈ ವಿಮೆಯ ಫಲಾನುಭವಿ ಆಗಬಹುದು. ಸಣ್ಣ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಒಳಗೊಂಡು ಒಟ್ಟು 996 ಕಾಯಿಲೆಗಳಿಗೆ ವಿಮೆ ಅನ್ವಯ. ವಾರ್ಷಿಕ ₹5 ಲಕ್ಷದವರೆಗೆ ವಿಮೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT