ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ: ಜಿಲ್ಲೆಯಾದ್ಯಂತ ಸಂಭ್ರಮ ತಂದ ರಂಗಿನಾಟ

ಬಣ್ಣ ಎರಚಾಡಿ ಸಂಭ್ರಮಿಸಿದ ಯುವಜನರು, ಮಕ್ಕಳು, ಹಿರಿಯರು: ಕಾಮದಹನ ಮಾಡಿ ಸಿಹಿ ಭೋಜನ
Published 25 ಮಾರ್ಚ್ 2024, 16:16 IST
Last Updated 25 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ಬೆಳಗಾವಿ: ಲೋಕಸಭೆ ಚುನಾವಣೆ ಮಾದರಿ ನೀತಿಸಂಹಿತೆ, ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಧ್ಯೆಯೂ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಸೋಮವಾರ ಸಂಭ್ರಮದಿಂದ ಹೋಳಿ ಹಬ್ಬ ಆಚರಿಸಲಾಯಿತು.

ಇಲ್ಲಿನ ವಿವಿಧ ಬಡಾವಣೆಗಳು, ಪ್ರಮುಖ ವೃತ್ತಗಳಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ, ಭಾನುವಾರ ರಾತ್ರಿ ಕಾಮಣ್ಣನ ಮೂರ್ತಿ ದಹಿಸಲಾಯಿತು. ಸೋಮವಾರ ಮುಂಜಾನೆಯಿಂದಲೇ ಬಣ್ಣದಾಟಕ್ಕೆ ‘ಕುಂದಾನಗರಿ’ ತೆರೆದುಕೊಂಡಿತು. ಮಕ್ಕಳು, ಯುವಕ–ಯುವತಿಯರು, ಮಹಿಳೆಯರು ಸೇರಿದಂತೆ ಎಲ್ಲ ವಯೋಮಾನದವರೂ ಉತ್ಸಾಹದಿಂದ ಬಣ್ಣದೋಕುಳಿಯಲ್ಲಿ ಮಿಂದೆದ್ದರು.

ಒಂದೆಡೆ ಬಾನೆತ್ತರಕ್ಕೆ ಹಾರಿದ ಬಣ್ಣಗಳು, ಮತ್ತೊಂದೆಡೆ ಸಂಗೀತದ ಝಲಕ್‌, ಇನ್ನೊಂದೆಡೆ ಕುಣಿದು ಕುಪ್ಪಳಿಸಿದ ಯುವ ಮನಸ್ಸುಗಳು; ಹೀಗೆ... ಹತ್ತಾರು ಸಂಭ್ರಮದ ಕ್ಷಣಗಳಿಗೆ ಬೆಳಗಾವಿ ಇಡೀ ದಿನ ಸಾಕ್ಷಿಯಾಯಿತು.

ವಿದ್ಯಾರ್ಥಿಗಳು ಬೆಳಿಗ್ಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲು ಪರೀಕ್ಷಾ ಕೇಂದ್ರಗಳತ್ತ ಮುಖಮಾಡಿದರು. ಉಳಿದ ಮಕ್ಕಳು ಕೈಯಲ್ಲಿ ಪಿಚಕಾರಿ ಹಿಡಿದುಕೊಂಡು, ಬಣ್ಣದಾಟ ಆರಂಭಿಸಿದರು. ಹಲಗೆ ವಾದನ, ತಮಟೆ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ, ಬಣ್ಣ ಎರಚುತ್ತ ಸಂಭ್ರಮಿಸಿದರು. ಇನ್ನು ಯುವಕ–ಯುವತಿಯರು ಗಲ್ಲಿ–ಗಲ್ಲಿಗಳಲ್ಲಿ ವೇಗವಾಗಿ ಬೈಕ್‌ ಓಡಿಸುತ್ತ, ಲಬೋ... ಲಬೋ ಎಂದು ಬಾಯಿ ಬಡಿದುಕೊಳ್ಳುತ್ತ ಸುತ್ತಾಡಿದರು.

ಬೆಳಗಾವಿಯ ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಸೋಮವಾರ ನಡೆದ ‘ಹೋಳಿ ಮಿಲನ್‌’ ಕಾರ್ಯಕ್ರಮದಲ್ಲಿ ಮಹಿಳೆಯರು ಕುಣಿದು ಕುಪ್ಪಳಿಸಿದರು
ಬೆಳಗಾವಿಯ ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಸೋಮವಾರ ನಡೆದ ‘ಹೋಳಿ ಮಿಲನ್‌’ ಕಾರ್ಯಕ್ರಮದಲ್ಲಿ ಮಹಿಳೆಯರು ಕುಣಿದು ಕುಪ್ಪಳಿಸಿದರು

ಶಾಲಾ–ಕಾಲೇಜುಗಳು, ವಸತಿ ಶಾಲೆಗಳು, ಹಾಸ್ಟೆಲ್‌ಗಳು ಮಾತ್ರವಲ್ಲದೆ ಸರ್ಕಾರಿ ಕಚೇರಿಗಳು ವರ್ಣಮಯವಾಗಿದ್ದವು. ಹಲವು ಬಡಾವಣೆಗಳಲ್ಲಿ ಡಿ.ಜೆ. ಅಬ್ಬರ ಕಂಡುಬಂತು. ಅಲ್ಲಲ್ಲಿ ಬಣ್ಣಗಳು, ಪಿಚಕಾರಿಗಳು ಮತ್ತು ಮಕ್ಕಳು ಹಾಗೂ ಯುವಕರು ಬಳಸುವ ಮುಖವಾಡಗಳ ಮಾರಾಟ ನಡೆದಿತ್ತು. ಮಧ್ಯಾಹ್ನ 3 ಗಂಟೆಯವರೆಗೂ ಬಣ್ಣದಾಟ ಮುಂದುವರಿದೇ ಇತ್ತು.

ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಕುಡಿಯುವ ನೀರಿನ ಬವಣೆ ತಲೆದೋರಿದೆ. ಹಾಗಾಗಿ ಹೋಳಿ ಆಚರಣೆಯಲ್ಲಿ ಪ್ರತಿವರ್ಷಕ್ಕಿಂತ ಕಡಿಮೆ ಪ್ರಮಾಣದಲ್ಲಿ ನೀರು ಬಳಕೆಯಾಯಿತು.

ಇಲ್ಲಿನ ಶಹಾಪುರ, ವಡಗಾವಿ ಮತ್ತು ಖಾಸಬಾಗದಲ್ಲಿ ಮಾರ್ಚ್ 30ರಂದು ರಂಗಪಂಚಮಿ ನಡೆಯಲಿದೆ. ಇದಕ್ಕೆ ಅಲ್ಲಿನ ನಿವಾಸಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಳಗಾವಿಯಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಸೋಮವಾರ ನಡೆದ ಬಣ್ಣದಾಟದಲ್ಲಿ ಯುವಕರು ನರ್ತಿಸಿ ಸಂಭ್ರಮಿಸಿದರು
ಬೆಳಗಾವಿಯಲ್ಲಿ ಹೋಳಿ ಹುಣ್ಣಿಮೆ ಪ್ರಯುಕ್ತ ಸೋಮವಾರ ನಡೆದ ಬಣ್ಣದಾಟದಲ್ಲಿ ಯುವಕರು ನರ್ತಿಸಿ ಸಂಭ್ರಮಿಸಿದರು

ಯುವಕರ ಉರುಳುಸೇವೆ

‘ಪಾಂಗುಳ ಗಲ್ಲಿಯ ಜೈನ ಮಂದಿರದಿಂದ ಅಶ್ವತ್ಥಾಮ ಮಂದಿರದವರೆಗೆ ಹೋಳಿ ಹುಣ್ಣಿಮೆಯಂದು ಉರುಳುಸೇವೆ ಮಾಡಿದರೆ ಶಾಪದಿಂದ ಮುಕ್ತರಾಗುತ್ತೇವೆ’ ಎಂಬ ನಂಬಿಕೆ ಭಕ್ತರದ್ದು. ಹಾಗಾಗಿ ಪ್ರತಿವರ್ಷದಂತೆ ಈ ಸಲವೂ ಸಾವಿರಾರು ಜನರು ಉರುಳುಸೇವೆ ಮಾಡಿದರು.

ಕಣ್ಮನ ಸೆಳೆದ ‘ಹೋಳಿ ಮಿಲನ್‌’

ಬೆಳಗಾವಿಯ ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ‘ಹೋಳಿ ಮಿಲನ್‌’ ಕಾರ್ಯಕ್ರಮ ನಡೆಯಿತು. ಬಣ್ಣವಾಡಲು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಬಣ್ಣವಾಡಿ ಸಂಭ್ರಮಿಸಿದರು. ಸಂಗೀತದ ಅಬ್ಬರಕ್ಕೆ ತಕ್ಕಂತೆ ಕುಣಿದು ಕುಪ್ಪಳಿಸಿದರು. ಶಾಸಕ ಅಭಯ ಪಾಟೀಲ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು ಹೆಜ್ಜೆ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT