ಶುಕ್ರವಾರ, ನವೆಂಬರ್ 22, 2019
27 °C
ವಿಶ್ವ ಆಹಾರ ದಿನ ಅ. 16ರಂದು

ಬೆಮುಲ್‌ನಿಂದ ‘ಹೋಮೊಜಿನೈಸ್ಡ್‌ ಟೋನ್ಡ್‌ ಹಾಲು’

Published:
Updated:
Prajavani

ಬೆಳಗಾವಿ: ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ (ಬೆಮುಲ್‌) ‘ಹೋಮೊಜಿನೈಸ್ಡ್‌ ಟೋನ್ಡ್‌’ ಹಾಲನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

ಒಕ್ಕೂಟ ಈಗ ಸಿದ್ಧಪಡಿಸುತ್ತಿರುವ ಕುಂದಾ, ಪೇಡ, ತುಪ್ಪ, ಪನ್ನೀರು, ಮೊಸರು, ಲಸ್ಸಿ, ಮಜ್ಜಿಗೆ ಹಾಗೂ ಸುವಾಸಿತ ಹಾಲಿನೊಂದಿಗೆ ಈ ಹೊಸ ಉತ್ಪನ್ನ ಸೇರ್ಪಡೆಯಾಗಲಿದೆ.

‘ಈ ಹಾಲನ್ನು ಪೌಷ್ಠಿಕಾಂಶಗಳನ್ನು ಸಂರಕ್ಷಿಸಲ್ಪಟ್ಟ ಯುಎಚ್‍ಟಿ ತಂತ್ರಜ್ಞಾನದಿಂದ ಸಂಸ್ಕರಿಸಲಾಗುವುದು. ಶೇ.3.5 ಜಿಡ್ಡಿನಾಂಶ ಮತ್ತು ಶೇ.8.5ರಷ್ಟು ಜಿಡ್ಡೇತರ ಘನಾಂಶ ಹೊಂದಿದ್ದು ಜೊತೆಗೆ ಹೋಮೊಜಿನೈಸ್ಡ್ ಆಗಿರುವುದರಿಂದ ಹೆಚ್ಚು ಕಾಫಿ ಮತ್ತು ಟೀ ತಯಾರಿಸಲು ಅನುಕೂಲಕರವಾಗಿದೆ. ನಮ್ಮ ಒಕ್ಕೂಟದಿಂದ ಇದೇ ಮೊದಲ ಬಾರಿಗೆ, ಕೆಲವೇ ದಿನಗಳಲ್ಲಿ ಪರಿಚಯಿಸಲಾಗುವುದು’ ಎಂದು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸೋಮ್‌ಪ್ರಸನ್ನ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾಸಗಿಯವರಿಗಿಂತ ಕಡಿಮೆ ದರ:

‘ಅರ್ಧ ಲೀಟರ್‌ ಪಾಕೆಟ್‌ಗೆ ₹ 18.50 ಹಾಗೂ ಲೀಟರ್‌ಗೆ ₹ 36 ದರ ನಿಗದಿಪಡಿಸಲಾಗಿದೆ. ಖಾಸಗಿ ಕಂಪನಿಗಳು ಲೀಟರ್‌ಗೆ ₹ 42ರಂತೆ ಮಾರುತ್ತಿವೆ. ಅವರಿಗೆ ಪೈಪೋಟಿ ನೀಡಬೇಕು ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ದೊರೆಯುವಂತೆ ಮಾಡಬೇಕು ಎಂಬ ಉದ್ದೇಶದಿಂದ ಕಡಿಮೆ ದರ ನಿಗದಿಪಡಿಸಿದ್ದೇವೆ’ ಎನ್ನುತ್ತಾರೆ ಅವರು.

‘ನಂದಿನಿ’ ಹಾಲು ಹೆಚ್ಚಿನ ಕೆನೆ ಬರುತ್ತದೆ ಎಂಬ ಕಾರಣ ಇಟ್ಟುಕೊಂಡು ಕೆಲವು ಹೋಟೆಲ್‌ಗಳವರು ತಿರಸ್ಕರಿಸುತ್ತಿದ್ದರು. ಹೀಗಾಗಿ, ಹೋಮೊಜಿನೈಸ್ಡ್‌ ಟೋನ್ಡ್‌’ ಹಾಲನ್ನೂ ಪರಿಚಯಿಸುತ್ತಿದ್ದೇವೆ. ಇದರಿಂದ ಮೊಸರು ಹೆಚ್ಚು ಗಟ್ಟಿಯಾಗುತ್ತದೆ. ಕಾಫಿ, ಟೀ ತಯಾರಿಕೆ ಪ್ರಮಾಣ ವೃದ್ಧಿಸುತ್ತದೆ. ಬೇಗನೆ ಜೀರ್ಣವಾಗುತ್ತದೆ. ಮಕ್ಕಳಿಗೆ ಹೆಚ್ಚು ಅನುಕೂಲಕರವಾಗಿದೆ. ಹೆಚ್ಚು ಪೌಷ್ಠಿಕವಾಗುವಂತೆ ಮಾಡಲು ಹಾಲಿನಲ್ಲಿ ದೊರೆಯುವ ಸ್ವಾಭಾವಿಕ ವಿಟಮಿನ್‌ಗಳೊಂದಿಗೆ ಹೆಚ್ಚುವರಿಯಾಗಿ ವರ್ಧಿಸಿದ ವಿಟಮಿನ್ ‘ಎ’ ಮತ್ತು ವಿಟಮಿನ್ ‘ಡಿ’ ಸಹಿತ ಹಾಲು ಇದಾಗಿದೆ’ ಎಂದು ಮಾಹಿತಿ ನೀಡಿದರು.

5ಸಾವಿರ ಲೀಟರ್:

‘ಹೋಟೆಲ್‌ಗಳು, ಹಾಸ್ಟೆಲ್‌ಗಳು ಮೊದಲಾದ ಸರ್ಕಾರಿ ಸಂಸ್ಥೆಗಳು, ಕ್ಯಾಂಟೀನ್‌ಗಳು ಮೊದಲಾದವುಗಳನ್ನು ಗುರಿಯಾಗಿಟ್ಟುಕೊಂಡಿದ್ದೇವೆ. ನಿತ್ಯ 5ಸಾವಿರದಿಂದ 8ಸಾವಿರ ಲೀಟರ್‌ ಹಾಲು ಮಾರಾಟದ ನಿರೀಕ್ಷೆ ಇದೆ. ಅಧಿಕ ಗುಣಮಟ್ಟದ ಹಾಗೂ ಕಡಿಮೆ ದರದ ಈ ಹಾಲನ್ನು ಸಾರ್ವ‌ಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು. ಒಕ್ಕೂಟದ ಹಾಲು ಹಾಗೂ ಹಾಲಿನ ಉತ್ಪನ್ನಗಳ ದರ ಖಾಸಗಿ ಕಂಪನಿಗಳಿಗಿಂತಲೂ ಕಡಿಮೆ ಇದೆ. ಇವುಗಳನ್ನು ಖರೀದಿಸುವುದರಿಂದ, ಹೈನುಗಾರರಿಗೂ ಅನುಕೂಲವಾಗುತ್ತದೆ’ ಎಂದರು.

ಕುಂದಾದಿಂದಲೂ ಫೇಮಸ್ಸು

ಬೆಳಗಾವಿಯ ವಿಶೇಷ ತಿನಿಸಾದ ‘ಕುಂದಾ’ ತಯಾರಿಕೆಗೂ ಒಕ್ಕೂಟ (ಬೆಮುಲ್) ಹೆಸರುವಾಸಿಯಾಗಿದೆ. ಇಲ್ಲಿ ತಯಾರಾಗುವ ಕುಂದಾ ರಾಜ್ಯದಾದ್ಯಂತ ಒಕ್ಕೂಟದ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿದೆ. ತಿಂಗಳಿಗೆ 7ರಿಂದ 8 ಟನ್‌ ಕುಂದಾ ತಯಾರಿಸಲಾಗುತ್ತಿದೆ. ಈಚೆಗೆ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವದಲ್ಲಿ 8 ಟನ್‌ ಕುಂದಾ ಮಾರಾಟವಾಗಿದೆ. ಒಕ್ಕೂಟಕ್ಕೆ ಪ್ರಸ್ತುತ ನಿತ್ಯ ಸರಾಸರಿ 1.85 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಗೋವಾ ಮತ್ತು ಪುಣೆಗೂ ಇಲ್ಲಿಂದ ಹಾಲು ಪೂರೈಸಲಾಗುತ್ತಿದೆ. ಹಾಲಿನ ಉತ್ಪನ್ನಗಳಿಗಾಗಿಯೇ ಸರಾಸರಿ 7 ಸಾವಿರ ಲೀಟರ್‌ ಹಾಲು ಬಳಸಲಾಗುತ್ತಿದೆ. ಖಾಸಗಿಯಾಗಿಯೂ ಹಲವು ಅಂಗಡಿಗಳಲ್ಲಿಯೂ ಕುಂದಾ ತಯಾರಿಸಲಾಗುತ್ತಿದೆ. ಬೆಳಗಾವಿಗೆ ಬಂದವರು ಕುಂದಾ ಖರೀದಿಸಿ ಹೋಗುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಅಷ್ಟರ ಮಟ್ಟಿಗೆ ಈ ತಿನಿಸು ಜನಪ್ರಿಯವಾಗಿದೆ.

ಜವಾರಿ ಊಟವೂ ವಿಶೇಷ

ಜೋಳದ ರೊಟ್ಟಿ, ಶೇಂಗಾ ಚಟ್ನಿ, ಎಣ್ಣೆಗಾಯಿ ಪಲ್ಯ, ಪುಂಡಿ ಪಲ್ಲೆ, ಕೆನೆ ಮೊಸರು, ಶೇಂಗಾ ಹೋಳಿಗೆ ಮೊದಲಾದವುಗಳನ್ನು ಒಳಗೊಂಡ ಜವಾರಿ ಊಟವೂ ಇಲ್ಲಿನ ವಿಶೇಷವಾಗಿದೆ.

ಪ್ರತಿಕ್ರಿಯಿಸಿ (+)